ನಾಡಿನ ಭವ್ಯತೆಗೆ ಸಾಕ್ಷಿಯಾಗಿವೆ ಉತ್ತರ ಕರ್ನಾಟಕದ ವಾಡೆಗಳು

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಮ್ಮ ನಾಡಿನ ವೈವಿಧ್ಯತೆ ಕೇವಲ ಉಡುಗೆ-ತೊಡುಗೆ, ತಿಂಡಿ-ತಿನಿಸು, ಸಂಪ್ರದಾಯ ಆಚರಣೆಗಳಲ್ಲಿ ಮಾತ್ರವಿಲ್ಲ. ನಾಡಿನ ವೈವಿಧ್ಯತೆಯ ವ್ಯಾಪ್ತಿ ಅಧಿಕವಿದ್ದು, ನಾವು ವಾಸಿಸುವ ಮನೆ, ಕಚೇರಿ ಕಟ್ಟಡ, ಕಂಬ, ಗೋಪುರ, ಕಮಾನು ಇವುಗಳಲ್ಲೂ ಕಾಣಬಹುದು. ಅಂತಃ ಒಂದು ಸಂಸ್ಕೃತಿಯ ಪ್ರತೀಕ ಉತ್ತರ ಕರ್ನಾಟಕದ ವಾಡೆಗಳು.

ಏನಿದು ವಾಡೆ?
ವಾಡೆ ಪರಂಪರೆಯನ್ನು ರಾಷ್ಟ್ರಕೂಟ, ಚಾಲುಕ್ಯ ಹಾಗೂ ಹೊಯ್ಸಳರ ಕಾಲದಿಂದ ಕಾಣಬಹುದು. ಆಗಿನ ಕಾಲಕ್ಕೆ ಸುಭ, ಪರಗಣ ಎಂಬ ಆಡಳಿತ ವಿಕೇಂದ್ರಿಕರಣವಿತ್ತು. ಪರಗಣದ ಆಡಳಿತ ಮುಖ್ಯಸ್ಥರನ್ನು ಮಾಮ್ಲೆಧರ, ದೇಸಾಯಿ, ನಾಡಗೌಡ, ಗಡಿಮಾಲಕ, ದೇಶಪಾಂಡೆ, ನಾಯಕ, ನಾಡಕುಲಕರ್ಣಿ, ದೇಶಮುಖ ಎಂಬ ಸಮುದಾಯ ಆಧಾರಿತ ಹೆಸರುಗಳಿಂದ ಉಲ್ಲೇಖಿಸುತ್ತಿದ್ದರು. ರೈತರಿಂದ ಕರ ವಸೂಲಿ, ಸ್ಥಳೀಯ ಆಡಳಿತ ನಡೆಸುತ್ತ, ಆ ಪ್ರದೇಶವನ್ನು ಆಳುವ ರಾಜರ ಮೆಚ್ಚುಗೆ ಗಳಿಸಿ, ಅವರಿಂದ ಬಹುಮಾನವಾಗಿ ಜಮೀನುಗಳನ್ನು ಪಡೆಯುತ್ತ ಕಾಲಕ್ರಮೇಣ ಪರಗಣದ ಆಡಳಿತ ಮುಖ್ಯಸ್ಥರು ಸ್ಥಳೀಯ ನಾಯಕರಾಗಿ ಮಾರ್ಪಟ್ಟರು. ನಂತರ ತಮಗೆ ಸಿಕ್ಕ ಭೂಮಿಯಲ್ಲಿ ವಿಶಾಲ ವಾಸಸ್ಥಳ ನಿರ್ಮಿಸಿಕೊಂಡರು. ಅವರು ನಿರ್ಮಿಸಿಕೊಂಡ ವಾಸಸ್ಥಳಗಳೇ ವಾಡೆ ಎಂದು ಹೆಸರುವಾಸಿಯಾದವು.

ವಾಡೆಗಳು ಕೇವಲ ವಾಸಸ್ಥಾನವಾಗದೆ, ಆಡಳಿತ ಕೇಂದ್ರವೂ ಆಗಿತ್ತು. ಸಣ್ಣಮಟ್ಟದ ದರ್ಬಾರಗಳೂ ಇಲ್ಲಿ ನಡೆಯುತ್ತಿದ್ದವು. ವಿಜಯಪುರದ ಆದಿಲ್‌ಶಾಹಿ, ಮರಾಠಾ ಪೇಶ್ವೆ ಹಾಗೂ ಬ್ರಿಟಿಷ್ ಆಡಳಿತದವರೆಗೂ ವಾಡೆಗಳು ಕಾರ್ಯನಿರ್ವಹಿಸುತ್ತಿದ್ದವು. ಉತ್ತರ ಕರ್ನಾಟಕ ಹಾಗೂ ಮಹಾರಾಷ್ಟ್ರ ಪ್ರಾಂತಗಳಲ್ಲಿ ವಾಡೆಗಳು ಹೆಚ್ಚಾಗಿ ಇದ್ದು, ಈಗಲೂ ಕೆಲವು ವಾಡೆಗಳನ್ನು ನಾವು ಈ ಭಾಗದಲ್ಲಿ ಕಾಣಬಹುದು.

ವಾಡೆಯೊಳಗೆ ಏನಿರುತ್ತಿತ್ತು?

ಕಟ್ಟಿಗೆ, ಮಣ್ಣು, ಹಂಚುಗಳಿಂದ ವಾಡೆಗಳು ನಿರ್ಮಿತಗೊಂಡಿದ್ದವು. ದೊಡ್ಡ ಕಟ್ಟಿಗೆ ದ್ವಾರ, ವಾಡೆ ಪ್ರವೇಶಕ್ಕೆ ಆಡಳಿತ ಕಚೇರಿ, ಹತ್ತಾರು ಕೋಣೆಗಳು, ಅಡುಗೆ ಮನೆ, ಊಟದ ಸ್ಥಳ, ಪೂಜಾ ಗೃಹ, ಕಟ್ಟಿಗೆ ಕಂಬಗಳು, ಅದರ ಮೇಲೆ ಬಣ್ಣದ ಚಿತ್ತಾರ, ವಿಶ್ರಮಿಸಲು ತೂಗೂಯ್ಯಾಲೆ, ಮೇಲ್ಛಾವಣಿ, ಅಟ್ಟದ ಮೇಲೆ ಕೋಣೆಗಳು, ಕಾಳು-ಕಡಿ ಸಂಗ್ರಹಿಸಲು ಉಗ್ರಾಣ ಹೀಗೆ ವಾಡೆ ವಿಶಾಲತೆ ಹೊಂದಿತ್ತು.

ಕರ್ನಾಟಕದಲ್ಲಿ ಒಟ್ಟು ಇದ್ದ ವಾಡೆಗಳು 140. ನಿಪ್ಪಾಣಿಯ ಸಿದ್ಧೋಜಿರಾವ್ ನಿಂಬಾಳ್ಕರ್ ವಾಡೆ (ಅತ್ಯಂತ ದೊಡ್ಡ ವಾಡೆ), ಜಮಖಂಡಿ ಸರ್ಕಾರ ವಾಡೆ, ಹಾವೇರಿ ಜಿಲ್ಲೆಯ ಹಂದಿಗನೂರ ವಾಡೆ (ಪ್ರಸಿದ್ಧ ಮೂಡಲಮನೆ ಧಾರಾವಾಹಿ ಚಿತ್ರಿಕರಣಗೊಂಡ ಸ್ಥಳ), ಬಾಗಲಕೋಟೆಯ ಕೆರಕಲಮಟ್ಟಿ ವಾಡೆ (ಅನೇಕ ಚಲನಚಿತ್ರ ಹಾಗೂ ಖಾಸಗಿ ವಾಹಿನಿಯ ಕಾರ್ಯಕ್ರಮಗಳು ಚಿತ್ರಿತಗೊಂಡ ಸ್ಥಳ), ಮುಧೋಳ ವಾಡೆ, ಕಿತ್ತೂರ ಚೆನ್ನಮ್ಮ ವಾಡೆ, ಕಾಕತಿ ವಾಡೆ, ರಾಮದುರ್ಗ ಭಾವೆ ವಾಡೆ, ಜಂದಗಿ ಕೋಟಾಂಶ ವಾಡೆ, ಚಚಡೆ ವೀರಭದ್ರಪ್ಪ ದೇಸಾಯಿ ವಾಡೆ, ಸವದತ್ತಿಯ ರುದ್ರಾಪುರ ವಾಡೆ (ಅತ್ಯಂತ ಚಿಕ್ಕ ವಾಡೆ), ಅಣ್ಣಿಗೇರಿ ದೇಶಪಾಂಡೆ ವಾಡೆ, ಮೇಘಿನ್ಹಾಳ ವಾಡೆಗಳು ಈ ಭಾಗದ ಪ್ರಸಿದ್ಧ ವಾಡೆಗಳಾಗಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!