ಝಗಮಗಿಸುವ ಜಲಪಾತಗಳ ಝೇಂಕಾರವ ಕೇಳಬನ್ನಿ – ಮಳೆಗಾಲಕ್ಕೆ ಆಹ್ವಾನಿಸುವ ಜಲಧಾರೆಗಳಿವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರತಿ ವರ್ಷದ ಆಷಾಢದಿಂದ ಅಶ್ವಯುಜ ತಿಂಗಳವರೆಗೂ ಮಳೆಗಾಲದ ಇಂಪು-ತಂಪು ನಾಡಿನಾದ್ಯಂತ ವಿಸ್ತರಿಸಿರುತ್ತದೆ. ಭಾರತೀಯರ ಪಾಲಿಗೆ ಮಳೆಗಾಲ ಅತ್ಯಂತ ಖುಷಿ ನೀಡುವ ಕಾಲ. ಕೃಷಿಕರಿಗೆ ಜೀವಬಲ, ಬಿಸಿಲಿನ ಬೇಗೆಗೆ ಬೇಸತ್ತ ಜನಕ್ಕೆ ತಂಪಿನ ನೆಮ್ಮದಿ, ‘ಧೋ’ ಎಂದು ಸುರಿಯುವ ಮಳೆಯ ಸದ್ದು, ಮಳೆ ಹನಿಗಳು ಬಿದ್ದ ಆ ಮಣ್ಣಿನ ವಾಸನೆ, ಎಷ್ಟೇ ವಯಸ್ಸಾದರೂ ಒಮ್ಮೆ ಮಳೆಯಲ್ಲಿ ಆಟವಾಡಬೇಕೆಂಬ ಮನದ ಹಂಬಲ ಹೀಗೆ ಮಳೆಗಾಲ ನಾನಾಬಗೆಯ ಬಯಕೆ, ಖುಷಿ ನೀಡುತ್ತದೆ.

ಕರಾವಳಿ, ಬಯಲುಸೀಮೆ, ಮಲೆನಾಡು, ಘಟ್ಟ ಪ್ರದೇಶ ಹೀಗೆ ನೈಸರ್ಗಿಕವಾಗಿ ವೈವಿಧ್ಯತೆಯಿಂದ ಕೂಡಿದ ಕರ್ನಾಟಕದಲ್ಲಿ ಜಲಪಾತಗಳು ವಿಶೇಷ ಆಕರ್ಷಣೆ ಹೊಂದಿವೆ. ಇನ್ನೇನು ಮಳೆಗಾಲದ ಹೊಸ್ತಿಲಲ್ಲಿರುವ ನಾವು ಉತ್ತರ ಕರ್ನಾಟಕ ಭಾಗದ ಈ ಜಲಪಾತಗಳಿಗೆ ಭೇಟಿ ನೀಡಲು ಸಜ್ಜಾಗೋಣ.

1. ವಿದ್ಯುತ್ ನೀಡುವ ಜಲಪಾತ
ಗೋಕಿ ಮರಗಳಿಂದ ಕೂಡಿದ ಪ್ರದೇಶಕ್ಕೆ ಗೋಕಾಕ ಎಂದು ಹೆಸರು ಬಂದಿದೆ. ಈ ಜಲಪಾತ ಆಕಾರ ಹಾಗೂ ಕೆಲವು ವೈಶಿಷ್ಟ್ಯತೆಗಳು ಅಮೇರಿಕಾದ ನಯಾಗರಾ ಜಲಪಾತವನ್ನು ಹೋಲುತ್ತದೆ. 52 ಮೀಟರ್ ಎತ್ತರದಿಂದ ಧುಮುಕುವ ಘಟಪ್ರಭಾ ನದಿ ಮನಮೋಹಕ ದೃಶ್ಯ ಸೃಷ್ಟಿಸುತ್ತದೆ. ಭಾರತದಲ್ಲಿ 1887ರಲ್ಲಿ ಮೊದಲ ಬಾರಿಗೆ ಹೈಡ್ರೊ ವಿದ್ಯುತ್ ಇಲ್ಲಿ ಉತ್ಪಾದಿಸಲಾಗಿತ್ತು. 200 ಮೀ. ಉದ್ದದ ತೂಗು ಸೇತುವೆ ಹಾಗೂ ಸುತ್ತಮುತ್ತಲಿನ ಪರಿಸರ ಇಲ್ಲಿನ ಪ್ರಮುಖ ಆಕರ್ಷಣೆ. ಈ ಫಾಲ್ಸ್ ಗೋಕಾಕ ಪಟ್ಟಣದಿಂದ 8 ಕಿ.ಮೀ ದೂರದಲ್ಲಿದೆ.

2. ಘಟಪ್ರಭೆಯ ಸಂಚಾರ
ಗೋಕಾಕ ಪಟ್ಟಣದಿಂದ 15 ಕಿ.ಮೀ ದೂರವಿರುವ ಈ ಜಲಪಾತಕ್ಕೆ ಮಾರ್ಕಂಡೇಯ ಜಲಪಾತ ಎಂದೂ ಸಹ ಕರೆಯುತ್ತಾರೆ. ಕಾಡಿನ ಮಧ್ಯೆ ಕಡಿದಾದ ದಾರಿಯಲ್ಲಿ 2.5 ಕಿ.ಮೀ. ಸಾಗಿದರೆ ಸಿಗುವ ಈ ಜಲಪಾತ 25 ಮೀ. ಹಾಗೂ 18 ಮೀ. ಎತ್ತರದಲ್ಲಿ ಎರಡು ಕಡೆಯಿಂದ ಘಟಪ್ರಭಾ ನದಿ ಧುಮುಕುತ್ತದೆ. ಜೂನ್ ನಿಂದ ಸೆಪ್ಟೆಂಬರ್ ಅವಧಿಯಲ್ಲಿ ಭೇಟಿ ನೀಡಲು ಪ್ರಶಸ್ತ.

3. ಸದಾ ಟ್ರೆಕ್ಕಿಂಗ್ ಫಾಲ್ಸ್
ಬೆಳಗಾವಿಯಿಂದ 60 ಕಿ.ಮೀ. ದೂರದಲ್ಲಿ ಕರ್ನಾಟಕ ಹಾಗೂ ಗೋವಾ ಗಡಿಯಲ್ಲಿ ಈ ಜಲಪಾತ ಸಿಗುತ್ತದೆ. 200 ಮೀ. ಎತ್ತರದಿಂದ ಗುಡ್ಡಗಳ ಮಧ್ಯೆ ಧುಮುಕುವ ಜಲಪಾತಕ್ಕೆ ಟ್ರೆಕ್ಕಿಂಗ್ ಮೂಲಕವೇ ತಲುಪಬೇಕಾಗುತ್ತದೆ. ಚಾರಣದ ದಾರಿಯುದ್ದಕ್ಕೂ ಗುಹೆಗಳು, ವನ್ಯ ಖಗ ಮೃಗಗಳು ಕಾಣಸಿಗುತ್ತವೆ.

ಬೆಳಗಾವಿ ಜಿಲ್ಲೆಯ ಜಂಬೋಟಿ ಕಾಡಿನಲ್ಲಿ ಖಾನಾಪುರದಿಂದ 23 ಕಿ.ಮೀ. ಅಂತರದಲ್ಲಿ ವಜ್ರಪೋಹ ಜಲಪಾತವಿದೆ. ಇಲ್ಲಿಗೂ ಸಹ ಟ್ರೆಕ್ಕಿಂಗ್ ಮೂಲಕವೇ ಹೋಗಬೇಕಾಗುತ್ತದೆ.

ಇದಲ್ಲದೇ ಮಹಾರಾಷ್ಟ್ರದಲ್ಲಿರುವ ಸುಂಡಿ, ಬಾಬಾ, ಅಂಬೋಲಿ ಜಲಪಾತಗಳೂ ಸಹ ಅಷ್ಟೇ ಆಕರ್ಷಣೀಯವಾಗಿವೆ. ಬೆಳಗಾವಿಯಿಂದ ಪ್ರತ್ಯೇಕ ವಾಹನದ ಮೂಲಕ ಎಲ್ಲ ಸ್ಥಳಗಳಿಗೆ ಭೇಟಿ ನೀಡಬಹುದು.

4. ಉತ್ತರ ಕನ್ನಡವೆಂಬ ಜಲಪಾತಗಳ ಸ್ವರ್ಗ
ಉತ್ತರ ಕನ್ನಡ ವಿಶಿಷ್ಟ ಕಲೆ, ಸಂಪ್ರದಾಯ, ಆಹಾರ, ಉಡುಗೆ, ಭಾಷೆ ಶ್ರೀಮಂತ ನೈಸರ್ಗಿಕ ಸಂಪತ್ತು ಹೊಂದಿದೆ ಜಿಲ್ಲೆ. ಮಳೆಗಾಲಕ್ಕೆ ಅಲ್ಲಲ್ಲಿ ಹೊಸ ಜಲಪಾತಗಳು ಸೃಷ್ಟಿಯಾಗುತ್ತಿರುತ್ತವೆ. ಲಾಲಗುಳಿ, ಮಾಗೋಡ, ಸಾಥೋಡಿ, ವಿಭೂತಿ, ಶಿರ್ಲೆ, ಶಿವಗಂಗಾ, ಸುಸುಬ್ಬಿ, ಅಪ್ಸರಕೊಂಡ, ಅಂಶಿ, ವಜ್ರ ಜಲಪಾತಗಳಲ್ಲಿ ಬಹುತೇಕವಾಗಿ ಕಾಳಿ ನದಿ ಧುಮುಕುತ್ತದೆ. ಶಿರಸಿ, ಯಲ್ಲಾಪುರ, ದಾಂಡೇಲಿಗಳನ್ನು ಕೇಂದ್ರವಾಗಿಟ್ಟುಕೊಂಡು ಜಲಪಾತಗಳ ಜೊತೆಗೆ ಇತರೆ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!