ಹೈ ಹೀಲ್ಸ್‌ ಚಪ್ಪಲಿ ಕೊಡಿಸಿಲ್ಲವೆಂದು ಪತಿ ವಿರುದ್ಧವೇ ಪೊಲೀಸ್‌ ಠಾಣೆ ಮೆಟ್ಟಿಲೇರಿದ ಪತ್ನಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗಂಡ ಹೆಂಡ್ತಿ ಅಂದ ಮೇಲೆ ಅಲ್ಲಿ ಪ್ರೀತಿಯ ಜೊತೆಗೆ ಸಣ್ಣಪುಟ್ಟ ಜಗಳ, ಮನಸ್ತಾಪಗಳು ಏರ್ಪಡುವುದು ಸಾಮಾನ್ಯ. ಆದ್ರೆ ಕೆಲವೊಮ್ಮೆ ಕ್ಷುಲ್ಲಕ ಕಾರಣಗಳಿಗೆ ಜಗಳ ನಡೆದು ಗಂಡನ ವಿರುದ್ಧ ಪತ್ನಿ ಪೊಲೀಸ್‌ ಕೇಸ್‌ ದಾಖಲಿಸಿ ಡಿವೋರ್ಸ್‌ ಪಡೆದುಕೊಂಡಂತಹ ಪ್ರಕರಣಗಳು ಈ ಹಿಂದೆಯೂ ನಡೆದಿವೆ.

ಇದೀಗ ಇಲ್ಲೊಂದು ಅಂತಹದ್ದೇ ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದ್ದು, ಗಂಡ ಹೈ ಹೀಲ್ಸ್‌ ಚಪ್ಪಲಿ ಕೊಡಿಸಿಲ್ಲವೆಂದು ಮಹಿಳೆಯೊಬ್ಬಳು ತನ್ನ ಪತಿ ವಿರುದ್ಧವೇ ಪೊಲೀಸ್‌ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾಳೆ.

ಹೈ ಹೀಲ್ಸ್‌ ವಿಚಾರವಾಗಿ ನಡೆದ ಜಗಳ ವಿಚ್ಛೇದನ ಹಂತಕ್ಕೆ ತಲುಪಿದ್ದು, ನಂತರ ಕೌನ್ಸೆಲಿಂಗ್‌ ಸೆಂಟರ್‌ನಲ್ಲಿ ಪತಿ ಪತ್ನಿಯರ ಮಧ್ಯೆ ಸಂಧಾನ ನಡೆಸಿ ಮನೆಗೆ ಕಳುಹಿಸಲಾಗಿದೆ. ಈ ಕುರಿತ ಸುದ್ದಿಯೊಂದು ಇದೀಗ ಸಖತ್‌ ವೈರಲ್‌ ಆಗುತ್ತಿದೆ.

ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದ್ದು, ಗಂಡ ಹೈ ಹೀಲ್ಸ್‌ ಚಪ್ಪಲಿ ಕೊಡಿಸಿಲ್ಲವೆಂದು ಹೆಂಡತಿ ಪೊಲೀಸ್‌ ಠಾಣೆಯ ಮೆಟ್ಟಿಲೇರಿದ್ದಾಳೆ. 2024 ರಲ್ಲಿ ಅಂದರೆ ಒಂದು ವರ್ಷದ ಹಿಂದೆ ಮದುವೆಯಾಗಿದ್ದ ಈ ಜೋಡಿಯ ನಡುವೆ ಹೈ ಹೀಲ್ಸ್‌ ಚಪ್ಪಲಿಗೆ ಸಂಬಂಧಪಟ್ಟಂತೆ ಮನಸ್ತಾಪ ಏರ್ಪಟ್ಟಿದೆ.

ಮಹಿಳೆಗೆ ಚಿಕ್ಕಂದಿನಿಂದಲೂ ಹೈ ಹೀಲ್ಸ್‌ ಚಪ್ಪಲಿ ಧರಿಸುವುದೆಂದರೆ ಬಲು ಇಷ್ಟವಂತೆ. ಅದಕ್ಕಾಗಿ ಆಕೆ ಪತಿಯ ಬಳಿ ಹೈ ಹೀಲ್ಸ್‌ ಕೊಡಿಸುವಂತೆ ಕೇಳಿದ್ದಾಳೆ. ಆಕೆಯ ಬೇಡಿಕೆಗೆ ಪತಿ ಒಪ್ಪದಿದ್ದಾಗ, ಇಬ್ಬರ ನಡುವೆ ಜಗಳ ಏರ್ಪಟ್ಟಿದೆ. ಇದೇ ಕೋಪದಲ್ಲಿ ಆಕೆ ತವರು ಮನೆಗೆ ಹೋಗಿದ್ದು ಮಾತ್ರವಲ್ಲದೆ, ಗಂಡ ಹೈ ಹೀಲ್ಸ್‌ ಕೊಡಿಸಿಲ್ಲವೆಂದು ಪೊಲೀಸ್‌ ದೂರನ್ನು ಕೂಡಾ ದಾಖಲಿಸಿದ್ದಾಳೆ. ಅಷ್ಟೇ ಅಲ್ಲದೆ ನನಗೆ ಡಿವೋರ್ಸ್‌ ಬೇಕೆಂದು ಕೇಳಿದ್ದಾಳೆ. ಆಕೆ ಒಮ್ಮೆ ಹೈ ಹೀಲ್ಸ್‌ ಧರಿಸಿ ಜಾರಿ ಬಿದ್ದಿದ್ದಳು, ಅಲ್ಲದೆ ಆಕೆಯ ಕಾಲಿಗೂ ಗಾಯಗಳಾಗಿತ್ತು. ಅದೇ ಕಾರಣಕ್ಕೆ ಹೈ ಹೀಲ್ಸ್‌ ಕೊಡಿಸಲು ನಿರಾಕರಿಸಿದ್ದು ಎಂದು ಪತಿ ಹೇಳಿಕೊಂಡಿದ್ದಾನೆ.

ಇವರಿಬ್ಬರ ಜಗಳಕ್ಕೆ ಕಾರಣವನ್ನು ತಿಳಿದ ಪೊಲೀಸರು ಇಬ್ಬರನ್ನೂ ಮನವೊಲಿಸಲು ಪ್ರಯತ್ನಿಸಿದರು. ಆದರೆ ಇವರಿಬ್ಬರೂ ವಿಚ್ಛೇದನ ಬೇಕೇ ಬೇಕು ಎಂದು ಪಟ್ಟು ಹಿಡಿದಾಗ ಪೊಲೀಸರು ಗಂಡ ಹೆಂಡತಿ ಇಬ್ಬರನ್ನೂ ಕುಟುಂಬ ಸಲಹಾ ಕೇಂದ್ರಕ್ಕೆ ಕಳುಹಿಸಿಕೊಟ್ಟಿದ್ದಾರೆ. ಅಲ್ಲಿ ಕೌನ್ಸೆಲಿಂಗ್‌ ನಡೆಸಿ ಇಬ್ಬರ ನಡುವಿನ ಜಗಳವನ್ನು ಬಗೆಹರಿಸಿ, ಸಂಧಾನ ನಡೆಸಿ ಮನೆಗೆ ಕಳುಹಿಸಲಾಗಿದೆ .

- Advertisement - Ply

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!