ಹೊಸದಿಗಂತ ವರದಿ,ಚಿತ್ರದುರ್ಗ:
ಪ್ರೀತಿಸಿ ಮದುವೆಯಾದ ಕಾರಣ ಸಿಟ್ಟಿಗೆದ್ದ ಯುವತಿಯ ಕುಟುಂಬದವರು ಯುವಕನನ್ನು ಒಡೆದು ಕೊಲೆ ಮಾಡಿರುವ ಘಟನೆ ಚಿತ್ರದುರ್ಗ ತಾಲ್ಲೂಕಿನ ಸಿರಿಗೆರೆ ಬಳಿಯ ಕೋಣನೂರು ಗ್ರಾಮದಲ್ಲಿ ನಡೆದಿದೆ.
ಕೋಣನೂರು ಗ್ರಾಮದ ಮಂಜುನಾಥ್ (೩೮) ಕೊಲೆಯಾದ ವ್ಯಕ್ತಿ. ಕಳೆದ ಒಂದೂವರೆ ತಿಂಗಳ ಹಿಂದೆಯಷ್ಟೇ ಮಂಜುನಾಥ್ ಹಾಗೂ ಅದೇ ಗ್ರಾಮದ ಯುವತಿ ಕರೆದೊಯ್ದು ಮೆಉವೆಯಾಗಿದ್ದ ವಿಷಯ ತಿಳಿದ ಯುವತಿ ಮನೆಯವರು ಸಿಟ್ಟಿಗೆದ್ದಿದ್ದರು. ಈ ಕುರಿತು ರಾಜಿ ಪಂಚಾಯಿತಿ ಸಹ ನಡೆಸಲಾಗಿತ್ತು.
ಕೆಲವು ದಿನಗಳ ಬಳಿಕ ಮದುವೆ ಮಾಡಿಕೊಡುವುದಾಗಿ ಯುವತಿ ಮನೆಯವರು ತಿಳಿಸಿದ್ದರು. ಯುವತಿಯ ಪೋಷಕರು ಭರವಸೆ ನೀಡಿದ್ದ ಕಾರಣದಿಂದ ಯುವತಿಯನ್ನು ಊರಿಗೆ ಕರೆದುಕೊಂಡು ಹೋಗಲಾಗಿತ್ತು. ಈ ವೇಳೆ ಮಂಜುನಾಥ್ ಚಿತ್ರದುರ್ಗದ ಸಂಬಂಧಿ ಮನೆಯಲ್ಲಿ ವಾಸವಾಗಿದ್ದ ಎನ್ನಲಾಗಿದೆ.
ಇದಾದ ಕೆಲವು ದಿನಗಳ ಬಳಿಕ ಬುಧವಾರ ಮಂಜುನಾಥ್ ಕೋಣನೂರು ಗ್ರಾಮಕ್ಕೆ ತೆರಳಿದ್ದರು. ಇದನ್ನು ಕಂಡ ಯುವತಿ ಕಡೆಯವರು ಏಕಾಏಕಿ ಈತನ ಮೇಲೆ ಹಲ್ಲೆ ನಡೆಸಿದ್ದಾರೆ. ಮಂಜುನಾಥ್ ಮನೆಯ ಮುಂಭಾಗದಲ್ಲಿಯೇ ಭೀಕರವಾಗಿ ಹಲ್ಲೆ ನಡೆಸಿ ದಾರುಣವಾಗಿ ಹತ್ಯೆ ಮಾಡಲಾಗಿದೆ. ಮಂಜುನಾಥ್ ತಂದೆ ಚಂದ್ರಪ್ಪ, ತಾಯಿ ಅನಸೂಯ ಅವರ ಮೇಲೂ ಹಲ್ಲೆಯಾಗಿದೆ. ಇವರನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.
ಭರಮಸಾಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಹಲ್ಲೆ ಆರೋಪಿಗಳ ಪತ್ತೆಗಾಗಿ ವಿಶೇಷ ತಂಡ ರಚಿಸಿರುವ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.