ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರು ಹಿಂದು ಸನ್ಯಾಸಿ ಚಿನ್ಮೋಯ್ ಕೃಷ್ಣ ದಾಸ್ ಬಂಧನವನ್ನು ತೀವ್ರವಾಗಿ ಖಂಡಿಸಿದ್ದು, ಇದು ಅನ್ಯಾಯ , ಅವರನ್ನು ತಕ್ಷಣ ಬಿಡುಗಡೆ ಮಾಡಬೇಕೆಂದು ಹಸೀನಾ ಪತ್ರದ ಮೂಲಕ ಒತ್ತಾಯಿಸಿದ್ದಾರೆ.
ಸನಾತನ ಧಾರ್ಮಿಕ ಸಮುದಾಯದ ಉನ್ನತ ನಾಯಕನನ್ನು ಅನ್ಯಾಯವಾಗಿ ಬಂಧಿಸಲಾಗಿದೆ ಎಂದು ಹಸೀನಾ ಪತ್ರದಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ. ಚಿತ್ತಗಾಂಗ್‌ನಲ್ಲಿ ದೇವಸ್ಥಾನವನ್ನು ಸುಟ್ಟು ಹಾಕಲಾಗಿದೆ. ಈ ಹಿಂದೆ ಅಹ್ಮದೀಯ ಸಮುದಾಯದ ಮಸೀದಿಗಳು, ದೇಗುಲಗಳು, ಚರ್ಚ್‌ಗಳು, ಮಠಗಳು ಮತ್ತು ಮನೆಗಳ ಮೇಲೆ ದಾಳಿ, ಧ್ವಂಸ ಮತ್ತು ಲೂಟಿ ಮತ್ತು ಬೆಂಕಿ ಹಚ್ಚಲಾಗಿತ್ತು. ಧಾರ್ಮಿಕ ಸ್ವಾತಂತ್ರ್ಯ ಮತ್ತು ಎಲ್ಲಾ ಸಮುದಾಯಗಳ ಜನರ ಜೀವನ ಮತ್ತು ಆಸ್ತಿಯ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ಹಸೀನಾ ತನ್ನ ಪತ್ರದಲ್ಲಿ ಬರೆದಿದ್ದಾರೆ.
ನವೆಂಬರ್ 28 ರಂದು, ಬಾಂಗ್ಲಾದೇಶದ ನ್ಯಾಯಾಲಯವು ದಾಸ್‌ಗೆ ಜಾಮೀನು ನಿರಾಕರಿಸಿತು, ಅವರನ್ನು ಜೈಲಿಗೆ ಕಳುಹಿಸಿತು. ಇದು ಢಾಕಾ ಮತ್ತು ಚಟ್ಟೋಗ್ರಾಮ್ ಸೇರಿದಂತೆ ಬಾಂಗ್ಲಾದೇಶದ ಹಲವಾರು ಭಾಗಗಳಲ್ಲಿ ಹಿಂದೂಗಳಿಂದ ಪ್ರತಿಭಟನೆಗೆ ಕಾರಣವಾಯಿತು. ಈ ಬಂಧನ ಅಂತಾರಾಷ್ಟ್ರೀಯ ಗಮನ ಸೆಳೆದಿದ್ದು, ವಿದೇಶಾಂಗ ಸಚಿವಾಲಯ ಘಟನೆಯನ್ನು ಖಂಡಿಸಿದೆ. ಹಿಂದುಗಳು ಮತ್ತು ಇತರ ಧಾರ್ಮಿಕ ಅಲ್ಪಸಂಖ್ಯಾತರ ಸುರಕ್ಷತೆ ಮತ್ತು ಭದ್ರತೆಯನ್ನು ಖಾತರಿಪಡಿಸುವಂತೆ MEA ಬಾಂಗ್ಲಾದೇಶದ ಅಧಿಕಾರಿಗಳನ್ನು ಒತ್ತಾಯಿಸಿದೆ.
ಬಾಂಗ್ಲಾಗೆ ಭಾರತದ ಮನವಿ
ಶಾಂತಿಯುತ ಸಭೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು ಸೇರಿದಂತೆ ಹಿಂದುಗಳು ಮತ್ತು ಎಲ್ಲಾ ಅಲ್ಪಸಂಖ್ಯಾತರ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ನಾವು ಬಾಂಗ್ಲಾದೇಶದ ಅಧಿಕಾರಿಗಳನ್ನು ಒತ್ತಾಯಿಸುತ್ತೇವೆ ಎಂದು MEA ಮಂಗಳವಾರ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ಬಾಂಗ್ಲಾದೇಶದಲ್ಲಿ ಹಿಂದುಗಳ ದೌರ್ಜನ್ಯದ ವಿರುದ್ಧ ಅನೇಕ ಪ್ರತಿಭಟನೆಗಳ ನೇತೃತ್ವ ವಹಿಸಿದ್ದ ದಾಸ್ ಅವರನ್ನು ದೇಶದ್ರೋಹ ಆರೋಪದ ಮೇಲೆ ಢಾಕಾ ಪೊಲೀಸ್ ಡಿಟೆಕ್ಟಿವ್ ಬ್ರಾಂಚ್ ನವೆಂಬರ್ 25 ರಂದು ರಾಜಧಾನಿಯ ವಿಮಾನ ನಿಲ್ದಾಣದಲ್ಲಿ ಬಂಧಿಸಿತು.