ಹೊಸದಿಗಂತ ವರದಿ,ಗದಗ:
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ತಮಿಳನಾಡಿಗೆ ನಿತ್ಯ ೩ ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಸೂಚನೆ ಕೊಟ್ಟಿದ್ದಾರೆ. ಅವರ ಅದೇಶ ಪ್ರಶ್ನಿಸಿ ಸಿಡಬ್ಲೂಎಂಎ ಮತ್ತು ಸುಪ್ರಿಂ ಕೋರ್ಟನಲ್ಲಿ ಮರುಪರಿಶೀಲನೆಗೆ ಅರ್ಜಿ ಸಲ್ಲಿಸಲು ಹೋಗುತ್ತಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ.ಪಾಟೀಲ್ ಅವರು ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈಗಾಗಲೇ ಪಿಟಿಷನ್ ಫೈಲ್ ಆಗಿದೆ. ಹಿಂದಿನ ಮುಖ್ಯ ನ್ಯಾಯಾಧೀಶರಾಗಿದ್ದ ವೆಂಕಟಾಚಲಯ್ಯ, ಶಿವರಾಜ ಪಾಟೀಲ ಎಲ್ಲರೂ ಸೇರಿ ಅಡ್ವೋಕೆಟ್ ಜನರಲ್ ಜೊತೆಗೆ ಸಭೆ ನಡೆಸಿದ್ದೇವೆ. ಸುಪ್ರೀಂ ಕೋರ್ಟ್‌ಗೂ ಅರ್ಜಿ ಸಲ್ಲಿಸಲು ಚರ್ಚೆಯಾಗಿದೆ. ಕೋರ್ಟ್‌ಗೆ ಅರ್ಜಿ ಸಲ್ಲಿಸಲು ಚರ್ಚೆ ಹಾಗೂ ಮುಂದಿನ ಪ್ರಕ್ರಿಯೆ ನಡೆದಿದೆ ಎಂದು ಹೇಳಿದರು.
ಲೋಕಸಭೆ ಚುನಾವಣೆ ಬಳಿಕ ಸರ್ಕಾರ ಪತನ ಎಂಬ ಹೇಳಿಕೆಗೆ ಮತ್ತು ಸರ್ಕಾರದಲ್ಲಿ ಲಿಂಗಾಯತರಿಗೆ ಮನ್ನಣೆ ಇಲ್ಲ ಎಂಬ ಶಾಮನೂರು ಶಿವಶಂಕರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು ಯಾರ ಹೇಳಿಕೆ ಬಗ್ಗೆಯೂ ನಾನು ಮಾತನಾಡಲ್ಲ, ನಾನು ಈಗ ಪವಿತ್ರ ಜನತಾ ದರ್ಶನ ಕಾರ್ಯದಲ್ಲಿದ್ದೇನೆ. ಈ ಸಂದರ್ಭದಲ್ಲಿ ರಾಜಕೀಯ ಪ್ರಶ್ನೆಗಳಿಗೆ ಉತ್ತರಿಸುವ ಮನಸ್ಸಿಲ್ಲ. ಪ್ರಜಾಪ್ರಭುತ್ವದಲ್ಲಿ ಪ್ರಭು ಬಹಳ ಎತ್ತರದಲ್ಲಿದ್ದಾನೆ. ಜನರೇ ಜನಾರ್ಧನರು. ಈ ಸಂದರ್ಭದಲ್ಲಿ ಯಾವುದೇ ರಾಜಕಾರಣ, ಜಾತಿ ರಾಜಕಾರಣವಾಗಲಿ ಮಾತನಾಡುವದಿಲ್ಲ ಎಂದು ಸಚಿವ ಡಾ. ಎಚ್.ಕೆ.ಪಾಟೀಲ ಅವರು ಹೇಳಿದರು.