ಭಾರತದಲ್ಲಿ ಪಿಕ್ಸೆಲ್‌ ಫೋನ್‌ಗಳನ್ನು ಉತ್ಪಾದಿಸಲು ಚಿಂತಿಸುತ್ತಿದೆ ಗೂಗಲ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಟೆಕ್‌ ದಿಗ್ಗಜ ಆಪಲ್‌ ಭಾರತದಲ್ಲಿ ತನ್ನ ಐಫೋನ್‌ ನ ಹೊಸ ಆವೃತ್ತಿಯನ್ನು ಉತ್ಪಾದನೆ ಮಾಡುವುದಾಗಿ ಘೋಷಿಸಿದ ಬೆನ್ನಲ್ಲೇ ಇದೀಗ ಗೂಗಲ್‌ ಕೂಡ ತನ್ನ ಪಿಕ್ಸೆಲ್‌ ಫೋನ್‌ ಗಳನ್ನು ಭಾರತದಲ್ಲಿ ತಯಾರಿಸಲು ಚಿಂತಿಸುತ್ತಿದೆ. ಚೀನಾದಲ್ಲಿ ಮಿತಿಮೀರಿದ ಲಾಕ್‌ ಡೌನ್‌ ಗಳು, ಶಾಖದಲೆಗಳ ಹೊಡೆತ ಇನ್ನೊಂದೆಡೆ ಪ್ರವಾಹಗಳಿಂದಾಗಿ ಚೀನಾದಲ್ಲಿ ಉತ್ಪಾದನೆಯು ಕುಂಠಿತಗೊಂಡಿದೆ. ಇದಲ್ಲದೇ ಅಮೆರಿಕದೊಂದಿಗಿನ ವ್ಯಾಪಾರ ಯುದ್ಧವೂ ಕೂಡ ಈ ಬೆಳವಣಿಗೆಗಳಿಗೆ ಪುಷ್ಟಿ ಕೊಟ್ಟಿದೆ. ಹೀಗಾಗಿ ಪಿಕ್ಸೆಲ್‌ ಫೋನ್‌ ಗಳ ತಯಾರಕ ಆಲ್ಫಾಬೆಟ್‌ ಇನ್ಕಾರ್ಪೋರೇಟೆಎಡ್.‌ ಈ ನಿರ್ಧಾರವನ್ನು‌ ಹೊರಹಾಕಿದೆ.

ಲಭ್ಯವಿರುವ ಮಾಹಿತಿಯ ಪ್ರಕಾರ ಭಾರತವು 5,00,000 ರಿಂದ 1 ಮಿಲಿಯನ್ ಪಿಕ್ಸೆಲ್ ಸ್ಮಾರ್ಟ್‌ಫೋನ್‌ಗಳನ್ನು ಉತ್ಪಾದಿಸುವ ಮನವಿಯನ್ನು ಕಂಪನಿಗೆ ಒದಗಿಸಿದೆ ಎನ್ನಲಾಗಿದ್ದು ಇದು ಕಂಪನಿಯ ಒಟ್ಟೂ ಉತ್ಪಾದನೆಯ 10% ರಿಂದ 20%ದಷ್ಟಾಗುತ್ತದೆ. ಈ ಕುರಿತು ಆಲ್ಫಾಬೆಟ್‌ ಕಂಪನಿಯು ಯಾವುದೇ ದೃಢೀಕರಣ ನೀಡಿಲ್ಲ ಎನ್ನಲಾಗಿದೆ.

ಭಾರತದಲ್ಲಿ ಫೋನ್‌ಗಳನ್ನು ತಯಾರಿಸುವ ಕಲ್ಪನೆಯನ್ನು ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಸುಂದರ್ ಪಿಚೈ ಪರಿಶೀಲಿಸುತ್ತಿದ್ದಾರೆ ಎಂದು ವರದಿಗಳು ಹೇಳಿವೆ. ಅಂತಿಮ ನಿರ್ಧಾರಕ್ಕಾಗಿ ಇನ್ನೂ ಕಾಯಲಾಗುತ್ತಿದೆ. ಕಂಪನಿಯು ವಿಯೆಟ್ನಾಂ ಅನ್ನು ಉತ್ಪಾದನೆಗೆ ಮತ್ತೊಂದು ಸಂಭಾವ್ಯ ತಾಣವಾಗಿ ಪರಿಗಣಿಸುತ್ತಿದೆ ಎನ್ನಲಾಗಿದೆ.

ತನ್ನ ಶೂನ್ಯ ಕೋವಿಡ್‌ ನೀತಿಯಿಂದಾಗಿ ಶಾಂಘೈ ಪಟ್ಟಣವನ್ನು ಚೀನಾ ಸಂಪೂರ್ಣವಾಗಿ ಮುಚ್ಚಿದ್ದರಿಂದ ಜಾಗತಿಕ ಪೂರೈಕೆ ಸರಪಳಿಯಲ್ಲಿ ಅಡಚಣೆಗಳಾಗಿದ್ದವು. ಅಲ್ಲದೇ ಅಮೆರಿಕವು ಇತ್ತೀಚೆಗೆ ಕೆಲವು ಹೈಟೆಕ್‌ ಚಿಪ್‌ ಗಳ ರಫ್ತುಗಳನ್ನು ನಿಷೇಧಿಸಿತು. ಇದು ಚೀನಾ ಮತ್ತು ಅಮೆರಿಕ ನಡುವಿನ ವ್ಯಾಪಾರ ಯುದ್ಧದ ಉಲ್ಬಣಕ್ಕೆ ಕಾರಣವಾಯಿತು.

ಈ ಹಿನ್ನೆಲೆಯಲ್ಲಿ ಆಪಲ್‌ ನ ನಂತರ ಈಗ ಗೂಗಲ್‌ ತನ್ನ ಪಿಕ್ಸೆಲ್‌ ಫೋನ್‌ ಗಳ ಉತ್ಪಾದನೆಗೆ ಭಾರತವನ್ನು ಪರಿಗಣಿಸುವತ್ತ ಯೋಚಿಸುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!