ಹೊಸದಿಗಂತ ವರದಿ,ಬಳ್ಳಾರಿ:
ರಾಜ್ಯದಲ್ಲಿ ಅಸಮರ್ಥ ಸರ್ಕಾರ, ಅಸಮರ್ಥ ಮುಖ್ಯಮಂತ್ರಿ ಇದ್ದಾರೆ, 15 ಬಾರಿ ಬಜೆಟ್ ಮಂಡಿಸಿರುವೆ ಎನ್ನುವ ಸಿ.ಎಂ.ಸಿದ್ದರಾಮಯ್ಯ ಅವರ ವಿರುದ್ಧ ನಾನು ಅಲ್ಲ ಆಡಳಿತ ಕಾಂಗ್ರೆಸ್ ಶಾಸಕರೇ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ, ಇಂತಹ ಕೆಟ್ಟ ಸರ್ಕಾರವನ್ನು ನೋಡಿಯೇ ಇಲ್ಲ, ಸಾಲು ಸಾಲು ಹಗರಣಗಳಿಗೆ ಹೆಸರು ಪಡೆದ ಕಾಂಗ್ರೆಸ್ ನ್ನು ಕಿತ್ತೆಸೆಯಲು ರಾಜ್ಯದ ಜನರು ತುದಿಗಾಲ ಮೇಲೆ ನಿಂತಿದ್ದಾರೆ, ಅದು ಮೂರು ಕ್ಷೇತ್ರಗಳ ಉಪ ಚುನಾವಣೆಯಿಂದಲೇ ಪ್ರಾರಂಭವಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ವಾಗ್ದಾಳಿ ನಡೆಸಿದರು.
ತೋರಣಗಲ್ಲು ಪಟ್ಟಣದಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ವಾಗ್ದಾಳಿ ನಡೆಸಿದರು. ರಾಜ್ಯ ಕಾಂಗ್ರೆಸ್ ಸರ್ಕಾರದ ಪಾಪದ ಕೊಡ ತುಂಬಿ ತುಳುಕುತ್ತಿದ್ದು, ಶೀಘ್ರದಲ್ಲೇ ಸಿದ್ದರಾಮಯ್ಯ ಸಿ.ಎಂ.ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 136 ಸ್ಥಾನಗಳಲ್ಲಿ ಗೆಲುವು ಸಾಧಿಸಿದಾಗ, ಸಿ.ಎಂ.ಸಿದ್ದರಾಮಯ್ಯ ಅವರು ನಿರಾಳರಾದರು. ಅಧಿಕಾರಕ್ಕೆ ಬಂದು 1.5 ವರ್ಷದಲ್ಲೇ ಸಾಲು ಸಾಲು ಹಗರಣಗಳನ್ನು ಬಿಜೆಪಿ ಅವರು ಹೂರತೆಗೆಯುತ್ತಿದ್ದಂತೆ ಸಿದ್ದರಾಮಯ್ಯ ಅವರು ವಿಚಲಿತರಾಗಿದ್ದಾರೆ. ರಾಜ್ಯದಲ್ಲಿ ಅಸಮರ್ಥ ಮುಖ್ಯಮಂತ್ರಿ ಆಡಳಿತ ನಡೆಸುತ್ತಿದ್ದಾರೆ, ಇದಕ್ಕೆ ಆಡಳಿತ ಕಾಂಗ್ರೆಸ್ ಶಾಸಕರೇ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಒಳಗೊಳಗೇ ಸರ್ಕಾರಕ್ಕೆ ಬೆಂಕಿ ಉಗುಳುತ್ತಿದ್ದಾರೆ. ಆರಂಭದಲ್ಲಿ ಸಿದ್ದರಾಮಯ್ಯ ಭ್ರಷ್ಟಾಚಾರ ರಹಿತ ಆಡಳಿತ ನೀಡುವೆ, ಸ್ವಚ್ಛ ಆಡಳಿತ ನಡೆಸುವೆ ಎಂದಿದ್ದರು. 1.5 ವರ್ಷದಲ್ಲೇ ಸಾಲು ಸಾಲು ಹಗರಣಗಳು ಬಯಲಿಗೆ ಬಂದಿದ್ದು, ಸಿದ್ದರಾಮಯ್ಯ ಇಂತವರು, ಎಂಬುದು ಇಡಿ ರಾಜ್ಯದ ಜನರಿಗೆ ತಿಳಿದಿದೆ. ಮೂಡಾ ಪ್ರಕರಣದಲ್ಲಿ ನನ್ನದೇನೂ ತಪ್ಪಿಲ್ಲ ಎಂದವರು, ಪಡೆದ ನಿವೇಶನಗಳನ್ನು ಸರಕಾರಕ್ಕೆ ವಾಪಸ್ಸು ನೀಡಿದರು, ಇದೆ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ಸಿದ್ದರಾಮಯ್ಯ ಅವರು ಲೋಕಾಯುಕ್ತ ತನಿಖೆ ಎದುರಿಸುತ್ತಿದ್ದಾರೆ. ಇದನ್ನು ಸಿಬಿಐ ತನಿಖೆಗೆ ವಹಿಸಿದರೆ ಇದರಲ್ಲಿ ಸಿದ್ದರಾಮಯ್ಯ ಖಂಡಿತ ಸಿಕ್ಕಿಕೊಳ್ತಾರೆ, ಪಾರಾಗುವ ಪ್ರಶ್ನೆಯೇ ಇಲ್ಲ, ಇದಕ್ಕೆ ದಾಖಲೆಗಳೇ ಎಲ್ಲವನ್ನೂ ಹೇಳುತ್ತಿವೆ ಎಂದು ವಾಗ್ದಾಳಿ ನಡೆಸಿದರು.
ಕೋವಿಡ್ 19 ವೇಳೆ, ಅಕ್ರಮ ನಡೆದಿದೆ, ಪೀಪಿಟಿ ಕಿಟ್ ಖರೀದಿಯಲ್ಲಿ ಅಕ್ರಮ, ಸಾಮಗ್ರಿಗಳ ಖರೀದಿಯಲ್ಲಿ ಅಕ್ರಮ ನಡೆದಿದೆ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ, ಇದೆಲ್ಲ ಶುದ್ಧ ಸುಳ್ಳು, ಇದೊಂದು ರಾಜಕೀಯ ಪಿತೂರಿ, ಷಡ್ಯಂತ್ರ, ಈ ಕುರಿತು ನ್ಯಾ.ಮೈಕಲ್ ಕುನ್ಹಾ ಅವರ ವರದಿಯಲ್ಲಿ ಹಗರಣಗಳ ಕುರಿತು ಉಲ್ಲೇಖಿಸಿದೆ, ಈ ವರದಿಯಿಂದ ಮಾಜಿ ಸಿ.ಎಂ.ಬಿ.ಎಸ್. ಯಡಿಯೂರಪ್ಪ ಅವರು ಹಾಗೂ ಮಾಜಿ ಸಚಿವ ಬಿ.ಶ್ರೀರಾಮುಲು ಅವರು ತಪ್ಪು ಎಸಗಿದ್ದಾರೆ ಎಂದು ಕಾಂಗ್ರೆಸ್ ಬೆದರಿಸಲು ಮುಂದಾಗಿದೆ. ಇದಕ್ಕೆ ಬಿಜೆಪಿ ಬಗ್ಗುವುದಿಲ್ಲ, ಜಗ್ಗುವುದಿಲ್ಲ. ಬಿ.ಎಸ್.ಯಡಿಯೂರಪ್ಪ ಅವರ ಶಕ್ತಿ ಏನೆಂಬುದು, ತಾಕತ್ತು ಏನೆಂಬುದು ಕೈ ನಾಯಕ್ರಿಗಿಂತ ಸಿದ್ದರಾಮಯ್ಯ ಅವರಿಗೆ ಹೆಚ್ಚು ಗೊತ್ತಿದೆ, ಇದು ರಾಜಕೀಯ ಪಿತೂರಿ, ಯಾವುದೇ ತನಿಖೆ ಎದುರಿಸಲು ನಾವು ಸಿದ್ಧ ಎಂದರು.
ನಾನು ಇನ್ನೂ ರಾಜಕೀಯದಲ್ಲಿ ಅಂಬೆಗಾಲು ಇತ್ತಿರುವುದಕ್ಕೆ ಸಿ.ಎಂ.ಸಿದ್ದರಾಮಯ್ಯ ಇಷ್ಟು ಗಾಬರಿಯಾಗಿದ್ದಾರೆ, ವಿಚಲಿತರಾಗಿದ್ದಾರೆ, ಭಯ ಬೀತರಾಗಿದ್ದಾರೆ, ನಾನು ಆನೆ ಗಾಲು ಇಟ್ಟರೆ ಸಿ.ಎಂ.ಪರಿಸ್ಥಿತಿ ಏನಾಗಲಿದೆ ಎಂದು ವ್ಯಂಗ್ಯವಾಡಿದರು. ಈ ಸಂದರ್ಭದಲ್ಲಿ ಮಾಜಿ ಸಚುವ ಗಾಲಿ ಜನಾರ್ಧನ ರೆಡ್ಡಿ, ಬಿಜೆಪಿ ಜಿಲ್ಲಾಧ್ಯಕ್ಷರಾದ ಚೆನ್ನಬಸವನ ಗೌಡ, ಅನಿಲ್ ಕುಮಾರ್ ಮೊಕ, ರೇಣುಕಾಚಾರ್ಯ, ಶಾಸಕ ಕೃಷ್ಣ ನಾಯ್ಕ, ಧೀರಜ್ ಗುಂಡೂರಾವ್, ಆರಗ ಜ್ಞಾನೇಂದ್ರ ಇತರರಿದ್ದರು.