ವಿಶ್ವದಲ್ಲಿ ನಿತ್ಯವೂ ಕಸದ ತೊಟ್ಟಿ ಸೇರುತ್ತಿದೆ ಬರೋಬ್ಬರಿ 100 ಕೋಟಿ ಮಂದಿ ಉಣ್ಣಬಹುದಾದಷ್ಟು ಆಹಾರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರತಿನಿತ್ಯ ಜಗತ್ತಿನಲ್ಲಿ 100 ಕೋಟಿ ಮಂದಿಯ ಹೊಟ್ಟೆ ತಣಿಸಬಲ್ಲಷ್ಟು ಆಹಾರ ವ್ಯರ್ಥವಾಗಿ ಕಸದ ಬುಟ್ಟಿ ಸೇರುತ್ತಿದೆ.
ಹೌದು, ವಿಶ್ವಸಂಸ್ಥೆಯ ಪರಿಸರ ಏಜೆನ್ಸಿ (ಯುನ್‌ಇಪಿ)ಯ 2024ನೇ ಸಾಲಿನ ಆಹಾರ ವ್ಯರ್ಥ ಸೂಚ್ಯಂಕ ವರದಿ ಈ ಮಾಹಿತಿಯನ್ನು ಬಹಿರಂಗಪಡಿಸಿದೆ.

ಈ ಪೈಕಿ ಅತ್ಯಧಿಕ ಪ್ರಮಾಣದಲ್ಲಿ ಆಹಾರ ಮನೆಗಳಲ್ಲಿಯೇ ವ್ಯರ್ಥವಾಗುತ್ತಿದೆ. ಜಾಗತಿಕ ಮಟ್ಟದಲ್ಲಿ ಇವುಗಳ ಪ್ರಮಾಣ 631 ದಶಲಕ್ಷ ಟನ್‌ಗಳಾಗಿವೆ ಎಂದು ಸೂಚ್ಯಂಕ ಹೇಳಿದೆ. ಆಹಾರ ವ್ಯರ್ಥವು ಕೇವಲ ಶ್ರೀಮಂತ ರಾಷ್ಟ್ರಗಳಿಗಷ್ಟೇ ಸೀಮಿತವಾಗಿಲ್ಲ. ಅಧಿಕ, ಮೇಲ್ಮಧ್ಯಮ, ಕಳಮಧ್ಯಮ ಆದಾಯದ ದೇಶಗಳ ಮನೆಗಳಲ್ಲಿ ಸರಾಸರಿಯಾಗಿ ಪ್ರತಿಯೊಬ್ಬ ವ್ಯಕ್ತಿಯು ವಾರ್ಷಿಕವಾಗಿ 79 ಕೆ.ಜಿ. ಆಹಾರವನ್ನು ವ್ಯರ್ಥ ಮಾಡುತ್ತಿದ್ದಾನೆ ಎಂದು ವರದಿ ಹೇಳಿದೆ.

ಇನ್ನು ಆಹಾರ ಸೇವಾ ಹಾಗೂ ರಿಟೇಲ್ ವಲಯಗಳಲ್ಲಿ ಕೂಡಾ ಕ್ರಮವಾಗಿ 290 ಹಾಗೂ 131 ದಶಲಕ್ಷ ಟನ್ ಆಹಾರ ವ್ಯರ್ಥವಾಗಿ ಹೋಗುತ್ತಿದೆ. ಬಳಕೆದಾರರಿಗೆ ಲಭ್ಯವಾಗಬೇಕಿದ್ದ ಶೇ.19ರಷ್ಟು ಆಹಾರವು ರಿಟೇಲ್, ಆಹಾರ ಸೇವೆ ಹಾಗೂ ಮನೆಗಳ ಮಟ್ಟದಲ್ಲಿ ನಷ್ಟವಾಗಿ ಹೋಗಿದೆ. ಆಹಾರ ಪೂರೈಕೆ ಸರಪಣಿಯಲ್ಲಿ ಒಟ್ಟು ಶೇ.13ರಷ್ಟು ಆಹಾರ ಪೋಲಾಗಿದೆ ಎಂದು ವರದಿ ಹೇಳಿದೆ.
ವಿಶ್ವದ ಮಧ್ಯಮ ಆದಾಯದ ರಾಷ್ಟ್ರಗಳಲ್ಲಿನ ನಗರ, ಗ್ರಾಮೀಣ ಪ್ರದೇಶಗಳಲ್ಲಿ ಸಾಮಾನ್ಯ ಆಹಾರದ ಪೋಲಾಗುವಿಕೆ ಪ್ರಮಾಣ ಕಡಿಮೆ ಇದೆ. ಪ್ರಾಣಿಗಳಿಗೆ, ಜಾನುವಾರುಗಳಿಗೆ ಹಾಗೂ ಮನೆಯ ಸಾವಯವಗೊಬ್ಬರಕ್ಕೆ ಅವುಗಳನ್ನು ಪುನರ್ಬಳಕೆ ಮಾಡುವುದು ಇದಕ್ಕೆ ಕಾರಣವಾಗಿದೆ ಎಂದೂ ವರದಿ ಹೇಳಿದೆ.

ಇನ್ನೊಂದೆಡೆ ಜಗತ್ತಿನ ಮಾನವಕುಲದ ಮೂರನೇ ಒಂದು ಭಾಗವು ಆಹಾರದ ಅಭದ್ರತೆಯನ್ನು ಎದುರಿಸುತ್ತಿದೆ. ಪ್ರತಿದಿನವೂ ಜಗತ್ತಿನಲ್ಲಿ ಕೋಟ್ಯಂತರ ಮಂದಿ ಹಸಿದ ಹೊಟ್ಟೆಯಲ್ಲಿ ಮಲಗುತ್ತಿದ್ದಾರೆ. ಈ ಪ್ರಚಲಿತ ಸಮಸ್ಯೆಯು ಜಾಗತಿಕ ಆರ್ಥಿಕತೆಯ ಮೇಲೆ ಪರಿಣಾಮ ಬೀರುವ ಜೊತೆಗೆ, ಹವಾಮಾನ ಬದಲಾವಣೆ, ಜೀವವೈವಿಧ್ಯತೆಗೆ ಹಾನಿ ಹಾಗೂ ಪರಿಸರ ಮಾಲಿನ್ಯದಂತಹ ಸಮಸ್ಯೆಗಳು ಉಲ್ಬಣಗೊಳ್ಳುವಂತೆ ಮಾಡಿದೆ ಎಂಬುದನ್ನೂ ಯುಎನ್‌ಇಪಿ ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!