ಪ್ರಾದೇಶಿಕ ಪಕ್ಷದ ಬಗ್ಗೆ ಅಭಿಮಾನವಿದೆ; ಜೆಡಿಎಸ್ ವರಿಷ್ಠರ ನಿಲುವಿನ ಬಗ್ಗೆ ಬೇಸರವಿದೆ- ಮರಿತಿಬ್ಬೇಗೌಡ

ಹೊಸದಿಗಂತ ವರದಿ, ಮಂಡ್ಯ:
ಪ್ರಾದೇಶಿಕ ಪಕ್ಷ ಬೆಳೆಯಬೇಕೆಂಬ ಆಶಯವಿರುವ ನನಗೆ ಜೆಡಿಎಸ್ ಬಗ್ಗೆ ಅಭಿಮಾನವಿದೆ. ಆದರೆ, ವರಿಷ್ಠರ ಮೇಲಿಲ್ಲ. ಜೆಡಿಎಸ್ ವರಿಷ್ಠರ ಕೆಲವು ನಿಲುವುಗಳ ಬಗ್ಗೆ ಬೇಸರವಿದೆ. ಹೀಗಾಗಿ ನಾನು ದಕ್ಷಿಣ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಮತ ಕೇಳುತ್ತಿದ್ದೇನೆ ಎಂದು ವಿಧಾನ ಪರಿಷತ್ ಸದಸ್ಯ, ಮಾಜಿ ಉಪಸಭಾಪತಿ ಮರಿತಿಬ್ಬೇಗೌಡ ಸ್ಪಷ್ಟಪಡಿಸಿದರು.
ಸುದ್ಧಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ವಿಧಾನ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಅವರು ದಿನಕ್ಕೊಂದು ಹೇಳಿಕೆ ನೀಡುವ ಮೂಲಕ ಜನರು, ಮತದಾರರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ. ಹೀಗಾಗಿ ನಾನಿಂದು ಸುದ್ದಿಗೋಷ್ಠಿ ಮೂಲಕ ಸ್ಪಷ್ಟನೆ ನೀಡುವ ಪ್ರಯತ್ನ ಮಾಡುತ್ತಿದ್ದೇನೆ. ಯಾವ ಪಕ್ಷದ ಮುಖಂಡರೂ ನನ್ನ ಸಂಪರ್ಕದಲ್ಲಿಲ್ಲ. ನಾನಿನ್ನೂ ಜೆಡಿಎಸ್‌ನಲ್ಲೇ ಇದ್ದೇನೆ. ಪಕ್ಷ ವಿರೋಧಿ ಚಟುವಟಿಕೆ ಆಧಾರದ ಮೇಲೆ ನನ್ನ ವಿರುದ್ಧ ಕ್ರಮ ಕೈಗೊಳ್ಳುವುದು ವರಿಷ್ಠರಿಗೆ ಬಿಟ್ಟ ವಿಚಾರ ಎಂದು ಅವರು ಹೇಳಿದರು.
ಹಿಂದಿನ ಚುನಾವಣೆಯಲ್ಲಿ ಟಿಕೆಟ್ ಕೊಟ್ಟ ವರಿಷ್ಠರು ನನ್ನ ಪರವಾಗಿ ಎಷ್ಟುದಿನ ಬಂದು ಪ್ರಚಾರ ಮಾಡಿದ್ದಾರೆ. ಮತ ಕೇಳಿದ್ದಾರೆ ಹೇಳಲಿ? ವರಿಷ್ಠರು ಕೇವಲ ಭರವಸೆಗಳನ್ನು ಕೊಡುತ್ತಾರೆ. ಆದರೆ, ಪಕ್ಷದ ಯಾವುದೇ ಶಾಸಕರ ಸಲಹೆಗಳ ಬಗ್ಗೆ ವಿಮರ್ಶೆ ಮಾಡಿದ್ದಾರಾ? ಈ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲಿ. 35 ವರ್ಷಗಳಿಂದ ಪಕ್ಷಕ್ಕಾಗಿ ಕೆಲಸ ಮಾಡಿದ ವ್ಯಕ್ತಿಯನ್ನು ಬಿಟ್ಟು ನಾಲ್ಕು ದಿನವೂ ಪಕ್ಷದ ಬಾವುಟ ಕಟ್ಟಿ ಓಡಾಡದ ಎಚ್.ಕೆ.ರಾಮು ಅವರಿಗೆ ಟಿಕೆಟ್ ನೀಡಲಾಗಿದ್ದು ಏಕೆಂಬುದನ್ನು ಸ್ಪಷ್ಟಪಡಿಸಲಿ ಎಂದು ಸವಾಲು ಹಾಕಿದರು.
2024ಕ್ಕೆ ನಡೆಯಲಿರುವ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲೂ ನಾನು ಸ್ಪರ್ಧಿಸುತ್ತೇನೆ. ಆದರೆ, ಪಕ್ಷೇತರವೂ ಅಥವಾ ರಾಜಕೀಯ ಪಕ್ಷದ ಅಭ್ಯರ್ಥಿಯಾಗಿಯೋ ಎಂಬುದು ಗೊತ್ತಿಲ್ಲ. ನನ್ನ ಕಾರ್ಯಕರ್ತರು, ಹಿತೈಷಿಗಳು, ಸ್ನೇಹಿತರೊಂದಿಗೆ ಚರ್ಚಿಸಿ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇನೆ. ಚುನಾವಣೆಗೆ ಇನ್ನು 2 ವರ್ಷವಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
2 ಬಾರಿ ಪದವೀಧರರ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಹಾಗೂ ಉತ್ತಮವಾಗಿ ಕೆಲಸ ಮಾಡಿದ್ದೇನೆನ್ನುವ ಕೆ.ಟಿ.ಶ್ರೀಕಂಠೇಗೌಡರು ಯಾವ ಕಾರಣಕ್ಕೆ ಚುನಾವಣೆಗೆ ನಿಲ್ಲುತ್ತಿಲ್ಲ. ಕ್ಷೇತ್ರವನ್ನು ಬೇರೊಬ್ಬ ವ್ಯಕ್ತಿಗೆ ಬಿಟ್ಟುಕೊಡಲಾಗಿದೆ ಎನ್ನುವುದನ್ನು ಸ್ಪಷ್ಟಪಡಿಸಲಿ. ಹಣಕ್ಕಾಗಿ ಮಾರಿಕೊಂಡಿದ್ದಾರೆಯೇ ಎಂದು ಪ್ರಶ್ನಿಸಿದ ಅವರು, ಕೀಲಾರ ಜಯರಾಮು ಅವರಿಗೆ ಟಿಕೆಟ್ ನೀಡಿದ ಹಿನ್ನೆಲೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಬೇಡವೆಂದು ನಿರ್ಧರಿಸಿ, ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಧು ಮಾದೇಗೌಡರನ್ನು ಬೆಂಬಲಿಸಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!