October 9, 2026
Friday, October 9, 2026
spot_img

JUST LIFE | ಮಧ್ಯಾಹ್ನದ ಗಾಳಿಯಲ್ಲೇನೋ ಜಾದೂವಿದೆ, ಶಬ್ದದೊಳಗಣ ನಿಶ್ಯಬ್ಧದಲ್ಲೊಂದು ನೆಮ್ಮದಿಯಿದೆ

ಮೇಘನಾ ಶೆಟ್ಟಿ ಶಿವಮೊಗ್ಗ

ಮನೆಯ ಹೊರಬದಿಯಲ್ಲಿ ಡ್ರಿಲ್ಲಿಂಗ್‌ ಸೌಂಡು, ಹಿಂಬದಿಯಲ್ಲಿ ಮಕ್ಕಳಾಡುವ ಸದ್ದು, ಬೇಸಿಗೆ ಬಿರುಬಿಸಿಲಲ್ಲೂ ಸಣ್ಣ ತಂಗಾಳಿ ಕಿಟಕಿಯಾಸಿ ಮುಖಕ್ಕೆ ತಾಗುತ್ತದೆ.. ಇಷ್ಟರ ಮಧ್ಯೆ ಊಟಕ್ಕೆ ಹೋಗೋಣ ಬನ್ನಿ ಎನ್ನುವ ಶಬ್ದ ಅಷ್ಟೆ! ಅದಾದಮೇಲೆ ಮೌನ, ಸಂಪೂರ್ಣ ಮೌನ.

ಮನೆಯಲ್ಲಿ ಯಾರೂ ಇಲ್ಲದೆ, ಇದ್ದರೂ ಅವರವರ ರೂಮು ಸೇರುವ ಸಮಯವೇ ಮಧ್ಯಾಹ್ನ. ಅರ್ಧದಿನದ ಗೋಜಿನಿಂದ, ಇನ್ನರ್ಧದಿನದ ಗೋಜಿಗೆ ಹೋಗುವ ಮುನ್ನ ಸಣ್ಣದೊಂದು ರೆಸ್ಟ್‌, ನ್ಯಾಪ್‌ ಇನ್ನೇನೋ..

ಅಡುಗೆ ಮನೆಯ ಕಟ್ಟೆ ಕ್ಲೀನಾಗಿದೆ, ಒಣಗಲು ಬಿಸಿಲಿಗೆ ಹಾಕಿದ್ದ ಬಟ್ಟೆ ಗರಿಗರಿಯಾಗಿದೆ. ಮನೆಯಲ್ಲಿ ಯಾರೂ ಇಲ್ಲ. ನಿಮ್ಮದೇ ಹಾಸಿಗೆ ಮೇಲೆ ಮಲಗಿ ಯೋಚಿಸಿ, ಹಾಗೆ ಒಮ್ಮೆ ಕಿಟಕಿ ನೋಡಿ, ತಂಗಾಳಿಯನ್ನು ಫೀಲ್‌ ಮಾಡಿ. ನನ್ನ ಲೈಫ್‌ ಎಷ್ಟು ಚನಾಗಿದೆ ಎನ್ನುವ ಗ್ರಾಟಿಟ್ಯೂಡ್‌ ತಾನಾಗಿಯೇ ಬರುತ್ತದೆ. ಬೆಳಗಿನ ಜಾವ ಬರುವ ಪಕ್ಷಿಗಳ ಚಿವ್‌ ಚಿವ್‌ ಮಧ್ಯಾಹ್ನವೂ ಇದೆ. ಆದರೆ ಗಮನಿಸುವಷ್ಟು ಪುರುಸೊತ್ತು ನಮಗಿಲ್ಲ.

ಈ ಅನುಭವ ಎಲ್ಲರಿಗೂ ಆಗೋದಿಲ್ಲ. ಮನೆಯಲ್ಲಿ ಕೆಲಸ ಮಾಡುವವರು, ಮನೆಯಲ್ಲಿಯೇ ಇರುವವರು, ರಜೆ ದಿನಗಳನ್ನು ಮನೆಯಲ್ಲಿ ಕಳೆಯುವವರಿಗೆ ಮಾತ್ರ ಇದರ ಪರಿಚಯ ಇದೆ. ನಿತ್ಯವೂ ಓಡ್ತೇವೆ, ಓಡುತ್ತಲೇ ಇದ್ದೇವೆ. ಬ್ರಶ್‌ ಮಾಡುವಾಗ ಶುರು ಮಾಡಿದ ಅರ್ಜೆಂಟ್‌ ದಿನವಿಡೀ ಕಂಟಿನ್ಯು ಆಗುತ್ತದೆ. ಬೇಗ ತಿಂಡಿ ಕೊಡು ಟೈಮ್‌ ಆಯ್ತು, ಲೇಟಾಗಿ ಬಸ್‌ ಮಿಸ್‌ ಆದ ಟೆನ್ಶನ್‌, ಮೆಟ್ರೋ ಸೀಟ್‌ ಸಿಗದೇ ನೇತಾಡಿಕೊಂಡು ಹೋದ ನೋವು, ಆಫೀಸಿನ ಎಲ್ಲ ಕೆಲಸವೂ ತಕ್ಷಣವೇ ಆಗಬೇಕು. ಮನೆಗೆ ಬರೋಕೂ ಅವಸರ, ಬಂದು ತಿನ್ನೋಕೂ ಗಡಿಬಿಡಿ. ಕಡೆಗೆ ಮಲಗುವಾಗಲೂ ಬೇಗ ಮಲಗಬೇಕು, ಯಾಕಂದ್ರೆ ಬೆಳಗ್ಗೆ ಮತ್ತದೇ ಓಟಕ್ಕೆ ಬೇಗ ಏಳ್ಬೇಕಲ್ಲ.

ಎಲ್ಲ ಕೆಲಸಗಳನ್ನು ನಿಧಾನವಾಗಿ ಮಾಡುವಷ್ಟು ಅದೃಷ್ಟವಂತರು ನಾವಲ್ಲ. ಆದರೆ ಸಿಗುವ ವಾರದ ಒಂದು ದಿನವಾದ್ರೂ ಮಧ್ಯಾಹ್ನವನ್ನು ಅನುಭವಿಸಿ. ಎಲ್ಲ ಯೋಚನೆಯನ್ನು ಬದಿಗೊತ್ತಿ. ಎಷ್ಟೋ ಮಂದಿಗೆ ಬೆಳಗ್ಗೆ ಅಂದ್ರೆ ಇಷ್ಟ, ಕೆಲವರಿಗೆ ರಾತ್ರಿಯೆಂದರೆ ಇಷ್ಟ, ಸಂಜೆಗೂ ಫೇವರೆಟ್‌ ಲಿಸ್ಟ್‌ನಲ್ಲಿ ಜಾಗ ಇದೆ. ಆದರೆ ರೆಸ್ಟ್‌ ಮಾಡೋಕೆ, ಕೆಲಸ ಸ್ಲೋ ಮಾಡೋಕೆ, ಜೀವನಕ್ಕೆ ಪಾಸ್‌ ಹಾಕುವ ಮಧ್ಯಾಹ್ನ ತುಂಬಾ ಅಂಡರ್‌ರೇಟೆಡ್‌ ಅಲ್ವಾ?

ಮಧ್ಯಾಹ್ನದಲ್ಲಿ ಇದನ್ನೆಲ್ಲ ಮಾಡ್ಬೋದು ನೋಡಿ..

ಮನೆಯಲ್ಲೇ ನಾಲ್ಕು ರೌಂಡ್‌ ಹಾಕಿ ರೆಸ್ಟ್‌ ಮಾಡಿ, ನಂತರ ಸಣ್ಣ ನಿದ್ದೆಗೆ ಜಾರಬಹುದು. ಮನೆಯಲ್ಲಿ ನಿಮಗೆ ಸಿಗುವ ಈ ಫ್ರೀ ಟೈಮ್‌ನಲ್ಲಿ ಜರ್ನಲಿಂಗ್‌, ಮೆಡಿಟೇಷನ್‌ ಇನ್ನಿತರ ಸೆಲ್ಫ್‌ಕೇರ್‌ ಮಾಡಿಕೊಳ್ಳಬಹುದು.

ಆರೋಗ್ಯಕರವಾದ ಊಟ ಮಾಡಿ, ಒಂದಷ್ಟು ಸಮಯ ನಿಮ್ಮಿಷ್ಟದ ಶೋ ನೋಡಿ ಬೇರೆ ಕೆಲಸಕ್ಕೆ ಮೂವ್‌ ಆನ್‌ ಆಗಬಹುದು. ನಿಮ್ಮ ಕಂಪನಿಯನ್ನು ನೀವು ಎಂಜಾಯ್‌ ಮಾಡಬಹುದು. ಹಳೆಯ ಆಲ್ಬಂ, ಹಳೆಯ ರೆಕಾರ್ಡ್‌ಗಳು ನಿಮ್ಮ ಬೆಸ್ಟ್‌ ಫ್ರೆಂಡ್ಸ್‌. ನಿಮ್ಮ ಮಧ್ಯಾಹ್ನದ ಟೈಮ್‌ನಲ್ಲಿ ನೀವೇನ್‌ ಮಾಡ್ತೀರಾ?



Must Read