ಸ್ವಿಸ್ ಬ್ಯಾಂಕ್ ನಲ್ಲಿ ಭಾರತೀಯರು ಠೇವಣಿ ಇಟ್ಟಿರೋ ಹಣದ ಪ್ರಮಾಣದ ನಿಖರ ಮಾಹಿತಿಯಿಲ್ಲ: ನಿರ್ಮಲಾ ಸೀತಾರಾಮನ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 

ಸ್ವಿಸ್ ಬ್ಯಾಂಕುಗಳಲ್ಲಿ ಭಾರತೀಯ ನಾಗರಿಕರು ಮತ್ತು ಕಂಪನಿಗಳು ಠೇವಣಿ ಇಟ್ಟಿರುವ ಹಣದ ನಿಖರ ಮೊತ್ತದ ಬಗ್ಗೆ ಯಾವುದೇ ಅಧಿಕೃತ ಅಂದಾಜು ಇಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ಭಾರತೀಯರು ಸ್ವಿಸ್ ಬ್ಯಾಂಕುಗಳಲ್ಲಿ ಠೇವಣಿಯಿಟ್ಟಿರುವ ಹಣದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ನಿರ್ಮಲಾ ಸೀತಾರಾಮನ್, ‘ಸ್ವಿಸ್ ಬ್ಯಾಂಕುಗಳಲ್ಲಿ ಭಾರತೀಯ ನಾಗರಿಕರು ಹಾಗೂ ಕಂಪನಿಗಳು ಠೇವಣಿಯಿಟ್ಟಿರುವ ಹಣದ ಮೊತ್ತದ ಬಗ್ಗೆ ಯಾವುದೇ ಅಧಿಕೃತ ಅಂದಾಜು ಇಲ್ಲ’ ಎಂದಿದ್ದಾರೆ.

2020ಕ್ಕೆ ಹೋಲಿಸಿದರೆ 2021ರಲ್ಲಿ ಸ್ವಿಸ್ ಬ್ಯಾಂಕುಗಳಲ್ಲಿನ ಭಾರತೀಯರ ಹಣದಲ್ಲಿ ಹೆಚ್ಚಳವಾಗಿದೆ ಎಂದು ಕೆಲವು ಮಾಧ್ಯಮ ವರದಿಗಳು ಉಲ್ಲೇಖಿಸಿವೆ. ಆದರೆ, ಈ ಠೇವಣಿಗಳು ಭಾರತೀಯರು ಸ್ವಿಜರ್ಲೆಂಡ್ ನಲ್ಲಿಟ್ಟಿರುವ ಕಪ್ಪು ಹಣದ ಮೊತ್ತವನ್ನು ಸೂಚಿಸೋದಿಲ್ಲ ಎಂದು ಕೂಡ ಈ ಮಾಧ್ಯಮ ವರದಿಗಳು ತಿಳಿಸಿವೆ. ಸ್ವಿಸ್ ರಾಷ್ಟ್ರೀಯ ಬ್ಯಾಂಕಿನ (SNB) ವಾರ್ಷಿಕ ಬ್ಯಾಂಕಿಂಗ್ ಅಂಕಿಅಂಶಗಳನ್ನು ಭಾರತೀಯ ನಿವಾಸಿಗಳು ಸ್ವಿಜರ್ಲೆಂಡ್ ನಲ್ಲಿಟ್ಟಿರುವ ಠೇವಣಿಗಳ ವಿಶ್ಲೇಷಣೆಗೆ ಬಳಸಬಾರದು ಎಂದು ಸ್ವಿಸ್ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಬಹಿರಂಗಪಡಿಸದ ವಿದೇಶಿ ಆಸ್ತಿಗಳು ಹಾಗೂ ಆದಾಯದ ಮೇಲೆ ತೆರಿಗೆ ವಿಧಿಸಲು ಸರ್ಕಾರ ಈಗಾಗಲೇ ಅನೇಕ ಕ್ರಮಗಳನ್ನು ಕೈಗೊಂಡಿದೆ. ಇದರಲ್ಲಿ ಕಪ್ಪು ಹಣ ಕಾಯ್ದೆ ರೂಪಿಸೋದು ಹಾಗೂ ತೆರಿಗೆ ಕಾಯ್ದೆ 2015ರ ಜಾರಿ ಸೇರಿದೆ. ಈ ಕಾಯ್ದೆ ಪರಿಣಾಮಕಾರಿ ಜಾರಿಗೆ ಭಾರತದಾದ್ಯಂತ ಆದಾಯ ತೆರಿಗೆ (ತನಿಖೆ) ನಿರ್ದೇಶನಾಲಯದ ಅಡಿಯಲ್ಲಿ 29 ವಿದೇಶಿ ಆಸ್ತಿಗಳ ತನಿಖಾ ಘಟಕಗಳನ್ನು ಸ್ಥಾಪಿಸಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ಮಾಹಿತಿ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!