ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೋಲಾರದಲ್ಲಿಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಆಗಮಿಸಿದ್ದರು. ಈ ವೇಳೆ ಕಾಂಗ್ರೆಸ್ ಕಚೇರಿಯಲ್ಲಿ ವಿದ್ಯುತ್ ಕಟ್ ಆಯಿತು. ಅಕಸ್ಮಿಕವಾಗಿ ವಿದ್ಯುತ್ ಹೋಗಿರಬಹುದು ಎಂದು ಅರಿತ ಸಚಿವರು, ಸಭೆಯನ್ನು ಮುಂದುವರಿಸಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿ ಸಭೆ ಮುಗಿಸಿದರೂ ವಿದ್ಯುತ್ ಬರಲೇ ಇಲ್ಲ.
ಬಳಿಕ ಜಿಲ್ಲಾ ಪಂಚಾಯತ್ ನಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಈ ವೇಳೆ ಕೂಡ ವಿದ್ಯುತ್ ಹೋಗಿ ಬಂತು. ವಿದ್ಯುತ್ ಕಣ್ಣಾಮುಚ್ಚಾಲೆ ಆಟಕ್ಕೆ ಬೇಸತ್ತ ಸಚಿವ ಕೆ.ಜೆ.ಜಾರ್ಜ್, ಬೆಸ್ಕಾಂ ಅಧಿಕಾರಿಗಳಿಗೆ ಸಭೆಯಲ್ಲಿಯೇ ಕ್ಲಾಸ್ ತೆಗೆದುಕೊಂಡರು.
ನಂತರ ಬೆಂಗಳೂರಿಗೆ ಹೋಗುವಾಗ ಇಇ ಶೋಭಾ ಅವರನ್ನು ತೀವ್ರ ತರಾಟೆ ತೆಗೆದುಕೊಂಡರು. ಈ ಸಂದರ್ಭ ಅಧಿಕಾರಿಗಳು ಸಮಾಧಾನ ಪಡಿಸಿದರು. ಇನ್ನು ವಿದ್ಯುತ್ ಕಿರಿಕಿರಿ ಬಗ್ಗೆ ನಾನು ಅಡ್ಜೆಸ್ಟ್ ಮಾಡಿಕೊಳ್ಳುವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಂದಾಗ ವಿದ್ಯುತ್ ಸಮಸ್ಯೆ ಆಗಬಾರದು. ಕೂಡಲೇ ಈ ಬಗ್ಗೆ ಎಚ್ಚೇತ್ತುಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸಚಿವರು ಎಚ್ಚರಿಕೆ ನೀಡಿದರು.