May 10, 2026
Sunday, May 10, 2026
spot_img

ದೊರೆ ಮಾಡಿದ್ದಕ್ಕೆ ದಂಡವಿಲ್ಲ!: ಕಾಂಗ್ರೆಸ್ ಶಿಸ್ತಿನ ಬಗ್ಗೆ ರಾಜಣ್ಣ ಮಾರ್ಮಿಕ ನುಡಿ

ಹೊಸದಿಗಂತ ತುಮಕೂರು:

ಕಾಂಗ್ರೆಸ್ ಪಕ್ಷದಲ್ಲಿನ ಶಿಸ್ತಿನ ಕ್ರಮಗಳ ಬಗ್ಗೆ ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರು ತಮ್ಮದೇ ಶೈಲಿಯಲ್ಲಿ ವ್ಯಂಗ್ಯವಾಡಿದ್ದಾರೆ. “ದೊರೆ ಮಾಡಿದ್ದಕ್ಕೆ ದಂಡ ಇಲ್ಲ” ಎಂಬ ಗಾದೆಯಂತೆ ಪಕ್ಷದ ನಡವಳಿಕೆಗಳು ಇವೆ ಎಂದು ಅವರು ಪರೋಕ್ಷವಾಗಿ ಡಿ.ಕೆ. ಶಿವಕುಮಾರ್ ಅವರಿಗೆ ಟಾಂಗ್ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಕಾಂಗ್ರೆಸ್ ಎಂದರೆ ಶಿಸ್ತಿನ ಪಕ್ಷ ಎನ್ನುತ್ತಾರೆ. ಆದರೆ ರಾಹುಲ್ ಗಾಂಧಿಯವರನ್ನೇ ಟೀಕಿಸಿದ್ದ ಮತ್ತು ಆರ್‌ಎಸ್‌ಎಸ್ ಗೀತೆ ಹಾಡಿದ್ದ ಸದ್ಗುರು ಅವರ ಜೊತೆ ವೇದಿಕೆ ಹಂಚಿಕೊಂಡಾಗ ಶಿಸ್ತು ಎಲ್ಲಿ ಹೋಗಿತ್ತು? ಸಾಮಾನ್ಯ ಕಾರ್ಯಕರ್ತರಿಗೆ ಒಂದು ನ್ಯಾಯ, ದೊರೆಗಳಿಗೆ ಒಂದು ನ್ಯಾಯವೇ?” ಎಂದು ಪ್ರಶ್ನಿಸಿದರು. ವೇದಗಳು ಸುಳ್ಳಾದರೂ ಗಾದೆಗಳು ಸುಳ್ಳಾಗುವುದಿಲ್ಲ ಎನ್ನುವ ಮೂಲಕ ಸದ್ಯದ ರಾಜಕೀಯ ಸ್ಥಿತಿಯನ್ನು ಟೀಕಿಸಿದರು.

ಇದೇ ವೇಳೆ ಶಾಸಕರು ದೆಹಲಿಗೆ ತೆರಳುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅಗತ್ಯಬಿದ್ದರೆ ಮಾತ್ರ ತಾನು ದೆಹಲಿಗೆ ಹೋಗುವುದಾಗಿ ತಿಳಿಸಿದರು. “ನಾನು ಯಾವತ್ತೂ ಅಧಿಕಾರಕ್ಕಾಗಿ ಹಪಹಪಿಸಿದವನಲ್ಲ. ಅಧಿಕಾರ ಸಿಕ್ಕರೆ ಅದನ್ನು ಬಡವರ ಸೇವೆಗೆ ಬಳಸುತ್ತೇನೆಯೇ ಹೊರತು ಸ್ವಂತ ಲಾಭಕ್ಕಲ್ಲ” ಎಂದು ರಾಜಣ್ಣ ಮಾರ್ಮಿಕವಾಗಿ ನುಡಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !