May 9, 2026
Saturday, May 9, 2026
spot_img

ಮೊದಗಾ ಗ್ರಾಮದಲ್ಲಿ ಜಂಗಿ ಶರ್ಯತ್ ಸಂಭ್ರಮ: ಎತ್ತಿನ ಬಂಡಿ ಓಟಕ್ಕೆ ಚನ್ನರಾಜ ಹಟ್ಟಿಹೊಳಿ ಚಾಲನೆ

ಹೊಸದಿಗಂತ ವರದಿ ಬೆಳಗಾವಿ:

ಗ್ರಾಮೀಣ ಕ್ಷೇತ್ರದ ಮೊದಗಾ ಗ್ರಾಮದ ತಹಶೀಲ್ದಾರ್ ಗಲ್ಲಿಯಲ್ಲಿ ಶ್ರೀ ಬಾಲ ಗಜಾನನ ಯುವಕ ಮಂಡಳಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ “ಭವ್ಯ ಜಂಗಿ ಶರ್ಯತ್” (ಎತ್ತಿನ ಬಂಡಿ ಓಟ) ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.

ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಸ್ಪರ್ಧೆಗೆ ಚಾಲನೆ ನೀಡಿ ಸ್ಪರ್ಧಾಳುಗಳಿಗೆ ಶುಭ ಕೋರಿದರು.
ಶನಿವಾರರಂದು ಮೋದಾಗಾ ಗ್ರಾಮದಲ್ಲಿ ಗ್ರಾಮೀಣ ಸಂಸ್ಕೃತಿ, ರೈತರ ಬದುಕು ಹಾಗೂ ಸಾಹಸ ಕ್ರೀಡೆಗಳ ಪ್ರತಿಬಿಂಬವಾಗಿರುವ ಎತ್ತಿನ ಬಂಡಿ ಓಟಕ್ಕೆ ಸಾವಿರಾರು ಜನರು ಸಾಕ್ಷಿಯಾದರು.

ಸಂಭ್ರಮ, ಹುರುಪು ಮತ್ತು ಕ್ರೀಡಾಸ್ಫೂರ್ತಿಯಿಂದ ಕೂಡಿದ ಈ ಕಾರ್ಯಕ್ರಮದಲ್ಲಿ ಯುವಕರು ಹಾಗೂ ರೈತರು ಉತ್ಸಾಹದಿಂದ ಭಾಗವಹಿಸಿದರು.

ಇದನ್ನೂ ಓದಿ:

ಈ ಸಂದರ್ಭದಲ್ಲಿ ಮಾತನಾಡಿದ ಚನ್ನರಾಜ ಹಟ್ಟಿಹೊಳಿ, “ನಮ್ಮ ಗ್ರಾಮೀಣ ಭಾಗದ ಕಲೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಯುವ ಪೀಳಿಗೆ ಉಳಿಸಿಕೊಂಡು ಸಾಗಿಸುತ್ತಿರುವುದು ಅತ್ಯಂತ ಸಂತೋಷದ ವಿಷಯ. ಇಂತಹ ಕ್ರೀಡೆಗಳು ಗ್ರಾಮೀಣ ಬದುಕಿನ ಶಕ್ತಿ ಹಾಗೂ ರೈತರ ಆತ್ಮವಿಶ್ವಾಸವನ್ನು ಪ್ರತಿಬಿಂಬಿಸುತ್ತವೆ,” ಎಂದು ಹೇಳಿದರು.

ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ರೈತ ಬಾಂಧವರನ್ನು ಅಭಿನಂದಿಸಿದ ಅವರು, ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸಿದ ಶ್ರೀ ಬಾಲ ಗಜಾನನ ಯುವಕ ಮಂಡಳಿಯ ಪದಾಧಿಕಾರಿಗಳ ಕಾರ್ಯವನ್ನು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ಗಂಗಣ್ಣ ಕಲ್ಲೂರ್, ಶಿವಾಜಿ ಅಷ್ಟೇಕರ್, ಸಂಜಯ ಅಷ್ಟೇಕರ್, ಮಂಜುನಾಥ ತುಕ್ಕಾರ, ತೇಜರಾಜ್ ಮಾರಿಹಾಳ, ಬಸವರಾಜ್ ಕಲ್ಲೂರ್, ಸಂಗಯ್ಯ ಹಿರೇಮಠ್, ಅಬ್ದುಲ್ ಬಾಗವಾನ್, ದಿಲಾವರ್ ಪೆಂಡಾರಿ, ಬಸನಗೌಡ ಪಾಟೀಲ, ಸ್ಥಳೀಯ ಜನಪ್ರತಿನಿಧಿಗಳು, ಮುಖಂಡರು ಹಾಗೂ ಗ್ರಾಮಸ್ಥರು ಸೇರಿದಂತೆ ಇತರರು ಇದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !