Wednesday, February 28, 2024

ಮೋದಿಯವರ ಕೆಲವು ನಿರ್ಧಾರಗಳ ಬಗ್ಗೆ ಆಕ್ಷೇಪವಿದೆ: ಡಾ.ಸುಬ್ರಮಣಿಯನ್ ಸ್ವಾಮಿ

ಹೊಸದಿಗಂತ ವರದಿ, ಮಡಿಕೇರಿ:

ಪ್ರಧಾನಮಂತ್ರಿ ನರೇಂದ್ರಮೋದಿ ಅವರ ಬಗ್ಗೆ ವೈಯಕ್ತಿಕ ಭಿನ್ನಾಭಿಪ್ರಾಯಗಳಿಲ್ಲ. ಆದರೆ ಪ್ರಧಾನಿಯಾಗಿ ಕೈಗೊಂಡ ಕೆಲವೊಂದು ನಿರ್ಧಾರಗಳ ಬಗ್ಗೆ ಆಕ್ಷೇಪವಿದೆ. ಕೆಲವು ವಿಚಾರಗಳಲ್ಲಿ ದಿಟ್ಟ ಹೆಜ್ಜೆ ಇಡುತ್ತಿಲ್ಲವೆಂದು ಅರ್ಥಶಾಸ್ತ್ರಜ್ಞ ಹಾಗೂ ಮಾಜಿ ಕೇಂದ್ರ ಸಚಿವ ಡಾ.ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.

ಮಡಿಕೇರಿ ಸಮೀಪದ ಕ್ಯಾಪಿಟಲ್ ವಿಲೇಜ್’ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವು ವಿಚಾರಗಳ ಬಗ್ಗೆ ಬಿಗಿ ನಿರ್ಧಾರಗಳನ್ನು ಮೋದಿ ಕೈಗೊಂಡಿಲ್ಲ ಎಂಬ ಅಸಮಾಧಾನವಿದೆ. ಹೀಗಿದ್ದರೂ ದೇಶದ ಹಿಂದೂ ಸಂಘಟನೆಗಳ ಕಾರ್ಯಕರ್ತರ ಬೆಂಬಲದಿಂದ ಮುಂದಿನ ಚುನಾವಣೆಯಲ್ಲಿಯೂ ಬಿಜೆಪಿಯೇ ಅಧಿಕಾರಕ್ಕೆ ಬರಲಿದೆ ಸುಬ್ರಮಣಿಯನ್ ಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.
ದೇಶದ ಅಧಿಕಾರಸ್ಥರು ತಪ್ಪು ನಿರ್ಧಾರ ಕೈಗೊಂಡಾಗ ತಿಳಿದಿದ್ದೂ ಯಾಕೆ ನೀವು ಮೌನವಾಗಿದ್ದೀರಿ ಎಂದು ಜನರು ಪ್ರಶ್ನಿಸುತ್ತಾರೆ. ಪ್ರಜಾಪ್ರಭುತ್ವದಲ್ಲಿ ಪ್ರಧಾನಿ ಬಗ್ಗೆ ಶ್ಲಾಘಿಸುವುದು, ಟೀಕಿಸುವುದು ಒಳ್ಳೆಯ ಲಕ್ಷಣ. ತಪ್ಪು ತೀರ್ಮಾನಗಳ ಕುರಿತಂತೆ ಹಲವೊಮ್ಮೆ ಪ್ರಧಾನಿಗೆ ತಾನು ಪತ್ರ ಬರೆದಿದ್ದೇನೆ. ಆದರೆ ಸ್ಪಂದಿಸುತ್ತಿಲ್ಲ ಎಂದು ಅವರು ಆರೋಪಿಸಿದರು.

ಭಾರತವನ್ನು ಒಡೆದವರಿಂದ ಜೋಡೋ ಕಾರ್ಯಕ್ರಮ
ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಕೈಗೊಂಡಿರುವ ಭಾರತ್ ಜೋಡೋ ಯಾತ್ರೆ ಬಗ್ಗೆ ವ್ಯಂಗ್ಯವಾಡಿದ ಡಾ.ಸುಬ್ರಮಣಿಯನ್ ಸ್ವಾಮಿ, ಯಾರು ಭಾರತವನ್ನು ಒಡೆದರೋ ಅವರೇ ತಾವು ಮಾಡಿದ ಕೃತ್ಯಕ್ಕೆ ಪ್ರಾಯಶ್ಚಿತವಾಗಿ “ಭಾರತ್ ಜೋಡೋ” ಎಂದು ತಾವೇ ಒಡೆದ ಭಾರತವನ್ನು ಜೋಡಿಸಲು ಹೊರಟಂತಿದೆ. ರಾಹುಲ್ ಗಾಂಧಿಗೆ ಮಾತ್ರ ಭಾರತ ಒಡೆದಂತೆ ಕಾಣುತ್ತಿದೆಯೇ ವಿನಾ ನಿಜವಾದ ಭಾರತ ಒಗ್ಗಟ್ಟಿನ ಭಾರತವಾಗಿದೆ. ಎಲ್ಲೂ ಒಡೆದ ಭಾರತದಂತಿಲ್ಲ ಎಂದು ಹೇಳಿದರು. ಸದ್ಯದಲ್ಲಿಯೇ ಜೈಲು: ಸದ್ಯದಲ್ಲಿಯೇ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಯಂಗ್ ಇಂಡಿಯಾ ಪ್ರಕರಣದಲ್ಲಿ ಜೈಲು ಸೇರಲಿದ್ದಾರೆ ಅವರು ಭವಿಷ್ಯ ನುಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!