ಹೊಸದಿಗಂತ ಡಿಜಿಟಲ್ ಡೆಸ್ಕ್:
ಶಬರಿಮಲೆ ದೇವಸ್ಥಾನದ ಪ್ರಧಾನ ಅರ್ಚಕರ (ಮೇಲ್ಯಾಂತಿ) ಆಯ್ಕೆ ಮತ್ತು ಲಕ್ಕಿ ಡ್ರಾ ಪದ್ಧತಿಯನ್ನು ರದ್ದು ಮಾಡಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಕೇರಳ ಹೈಕೋರ್ಟ್ ಗುರುವಾರ ವಜಾ ಮಾಡಿದೆ.
ಲಕ್ಕಿ ಡ್ರಾ ಮೂಲಕ ನಡೆದ ಮುಖ್ಯ ಅರ್ಚಕರ ಆಯ್ಕೆಯಲ್ಲಿ ಮೋಸವಾಗಿದೆ. 2 ಚೀಟಿಗಳನ್ನು ಮಡಚಿದ್ದರೆ, ಉಳಿದವುಗಳನ್ನು ಸುತ್ತಲಾಗಿದೆ. ಮಡಚಿದ ಚೀಟಿಗಳನ್ನೇ ಡ್ರಾದಲ್ಲಿ ಎತ್ತಲಾಗಿದ್ದು, ಅನ್ಯಾಯವಾಗಿದೆ ಎಂದು ಅರ್ಜಿಯಲ್ಲಿ ದೂರಲಾಗಿದೆ. ಆದರೆ, ಕೋರ್ಟ್ ತಿರಸ್ಕರಿಸಿದ್ದು, ಆಯ್ಕೆಯನ್ನು ರದ್ದುಪಡಿಸುವ ಬೇಡಿಕೆಯಲ್ಲಿ ಮಧ್ಯಪ್ರವೇಶಿಸಲು ಶಕ್ತ ಕಾರಣವಿಲ್ಲ ಎಂದು ಹೇಳಿದೆ.
ಅರ್ಚಕರ ಚುನಾವಣೆ ರದ್ದು ಕೋರಿ ತಿರುವನಂತಪುರಂ ಮೂಲದ ಮಧುಸೂಧನ್ ನಂಬೂತಿರಿ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಿಚಾರಣೆ ನಡೆಸಿ, ಲಕ್ಕಿ ಡ್ರಾ ವೇಳೆ ಕೆಲವು ಪೇಪರ್‌ಗಳು ಮಡಚಿರುವುದು ಆಕಸ್ಮಿಕ ಎಂದು ಅಮಿಕಸ್ ಕ್ಯೂರಿ ಮತ್ತು ನ್ಯಾಯಾಲಯ ನೇಮಿಸಿದ ವೀಕ್ಷಕರು ನೀಡಿದ ವರದಿಗಳನ್ನು ಪರಿಗಣಿಸಲಾಗಿದೆ. ಈ ಹಿಂದಿನ ವಿಚಾರಣೆಯಲ್ಲಿ ಡ್ರಾ ವೇಳೆ ದೇವಸ್ಥಾನದೊಳಗೆ ಅನ್ಯ ವ್ಯಕ್ತಿಗಳು ಇದ್ದರು ಎಂಬ ವಾದವನ್ನು ಪರಿಗಣಿಸಿತ್ತು.ಬಳಿಕ ಈ ಬಗ್ಗೆ ತನಿಖೆ ನಡೆಸಲು ವೀಕ್ಷಕರನ್ನು ನೇಮಿಸಿತ್ತು. ಇದೀಗ ವೀಕ್ಷಕರು ವರದಿಯನ್ನು ನೀಡಿದ್ದು, ಆಯ್ಕೆಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದಿದೆ. ಅಲ್ಲದೇ, ವೀಕ್ಷಕರ ಸಮ್ಮುಖದಲ್ಲಿ ಪಾರದರ್ಶಕವಾಗಿ ಚುನಾವಣೆ ನಡೆಸಲಾಗಿದೆ ಎಂದು ದೇವಸ್ವಂ ಮಂಡಳಿ ನ್ಯಾಯಾಲಯಕ್ಕೆ ಮಾಹಿತಿ ನೀಡಿತ್ತು. ಸರ್ಕಾರವೂ ದೇವಸ್ವಂ ಮಂಡಳಿಯ ನಿಲುವನ್ನು ಬೆಂಬಲಿಸಿದೆ.
ಡ್ರಾ ವೇಳೆಯ ಸಿಸಿಟಿವಿ ದೃಶ್ಯಾವಳಿ ಮತ್ತು ಚಾನೆಲ್ ದೃಶ್ಯಾವಳಿಗಳನ್ನು ನ್ಯಾಯಾಲಯ ಪರಿಶೀಲಿಸಿದೆ. ಇದರ ಬಳಿಕ ಆಯ್ಕೆ ರದ್ದು ಕೋರಿ ಸಲ್ಲಿಸಿದ ಅರ್ಜಿಯನ್ನು ವಜಾ ಮಾಡಿತು.
ಮುವಾಟ್ಟುಪುಳ ಎನನಲ್ಲೂರು ಪುತಿಲ್ಲಾತ್ ಮನ ಪಿ.ಎನ್.ಮಹೇಶ್ ನಂಬೂತಿರಿ ಅವರು ಶಬರಿಮಲೆ ಅಯ್ಯಪ್ಪ ದೇವಸ್ಥಾನದ ನೂತನ ಪ್ರಧಾನ ಅರ್ಚಕರಾಗಿ ಆಯ್ಕೆಯಾಗಿದ್ದಾರೆ. ಮಾಲಿಕಪ್ಪುರಂ ಮುಖ್ಯ ಅರ್ಚಕರಾಗಿ ತ್ರಿಶೂರ್ ವಡಕೆಕಾಡ್ ಪೂಂಗಟ್ ಮನದ ಪಿ.ಜಿ.ಮುರಳಿ ಆಯ್ಕೆಯಾಗಿದ್ದಾರೆ.