ಹೊಸದಿಗಂತ ಡಿಜಿಟಲ್ ಡೆಸ್ಕ್:
ಶಾಪಿಂಗ್ ಮಾಲ್‌ನಲ್ಲಿ ಕೆಲಸ ಮಾಡುವ ಉದ್ಯೋಗಿ ತನ್ನ ಮಾಲೀಕರ ಮೇಲೆ ಸೇಡು ತೀರಿಸಿಕೊಳ್ಳಲು ಬರೋಬ್ಬರಿ 18 ಲಕ್ಷ ರೂ. ಮೌಲ್ಯದ ಎಲೆಕ್ಟ್ರಾನಿಕ್ ವಸ್ತುಗಳನ್ನು ಹಾನಿಗೊಳಪಡಿಸಿದ್ದಾರೆ. ಇಡೀ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ತನಗೆ ಸಂಬಳ ಜಾಸ್ತಿ ಮಾಡಿಲ್ಲವೆಂದು ಕೋಪಗೊಂಡಿದ್ದ ಉದ್ಯೋಗಿ ಶಾಪಿಂಗ್ ಮಾಲ್‌ನ ಎಲೆಕ್ಟ್ರಾನಿಕ್ಸ್ ವಿಭಾಗದಲ್ಲಿ ಪ್ರದರ್ಶಿಸಲಾಗಿದ್ದ ಎಲ್‌ಇಡಿ ಟಿವಿಗಳು ಮತ್ತು ಫ್ರಿಜ್‌ಗಳನ್ನು ಧ್ವಂಸಗೊಳಿಸುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಆರೋಪಿ ನೌಕರ ಕಮಲ್ ಪವಾರ್ ಟಿವಿ-ಫ್ರಿಡ್ಜ್ ಅನ್ನು ಒಡೆದು ನಾಶಪಡಿಸಿದ್ದಾರೆ. ಅವರು 11 ಟಿವಿ ಸ್ಕ್ರೀನ್ ಒಡೆದು ಹಾಕಿದ್ದು, ಬಳಿಕ ಫ್ರಿಡ್ಜ್ ವಿಭಾಗಕ್ಕೆ ತೆರಳಿ 71 ಫ್ರಿಡ್ಜ್ ಗಳನ್ನು ಒಡೆದು ಹಾನಿಗೊಳಿಸಿದ್ದಾರೆ. ಅಂಗಡಿಯ ಅವಸ್ಥೆಯನ್ನು ಕಂಡು ಗಾಬರಿಯಾದ ಮಾಲ್‌ನ ಉದ್ಯೋಗಿಗಳು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಅವರಿಗೆ ದೊಡ್ಡ ಶಾಕ್ ಕಾದಿತ್ತು. ಇಷ್ಟೆಲ್ಲ ಡ್ಯಾಮೇಜ್ ಮಾಡಿದ್ದು ಮಾಲ್ ಉದ್ಯೋಗಿಯೇ ಹೊರತು ಹೊರಗಿನವರಲ್ಲ ಎಂದು ಗೊತ್ತಾಗಿ ಎಲ್ಲರೂ ಬೆಚ್ಚಿಬಿದ್ದರು.
ಮಾಲ್‌ನಲ್ಲಿ ಕೆಲಸ ಮಾಡುವ ಈ ಉದ್ಯೋಗಿ ದೀಪಾವಳಿ ಸಂದರ್ಭದಲ್ಲಿ ಮಾಲ್ ನಿರ್ದೇಶಕರಿಗೆ ಸಂಬಳವನ್ನು ಹೆಚ್ಚಿಸುವಂತೆ ಒತ್ತಾಯಿಸಿದ್ದರು. ಆದರೆ ಅವರ ಬೇಡಿಕೆ ಈಡೇರಿರಲಿಲ್ಲ, ಸಂಬಳ ಹೆಚ್ಚಿಸಿರಲಿಲ್ಲ. ಇದರಿಂದ ಕೋಪಗೊಂಡ ಉದ್ಯೋಗಿ ನಂತರ ಮೂರು ದಿನಗಳ ರಜೆ ತೆಗೆದುಕೊಂಡರು. ಕೆಲಸಕ್ಕೆ ಹಿಂತಿರುಗಿದ ನಂತರವೂ ಕೋಪದಲ್ಲಿಯೇ ಇದ್ದರು. ಅದೇ ಸಿಟ್ಟಿನಲ್ಲಿ ಮಾಲ್‌ನ ಅಂಗಡಿಯನ್ನು ಧ್ವಂಸಗೊಳಿಸಿದರು.
ಈ ಘಟನೆಯ ನಂತರ ಮಾಲ್ ಮ್ಯಾನೇಜರ್ ಸಂಜಯ್ ಗುಪ್ತಾ ಪೊಲೀಸರಿಗೆ ಧಾವಿಸಿ ದೂರು ದಾಖಲಿಸಿದ್ದಾರೆ. ಮಾಲ್‌ನಲ್ಲಿನ ಸರಕುಗಳನ್ನು ಹಾನಿಗೊಳಿಸಿದ್ದಕ್ಕಾಗಿ ಪೊಲೀಸರು ನೌಕರನ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ. ಆದರೆ ಆರೋಪಿ ಮಾನಸಿಕ ಸ್ಥಿತಿಯ ಆಧಾರದ ಮೇಲೆ ಜಾಮೀನು ಪಡೆದಿದ್ದಾನೆ. ಇದೀಗ ಪೊಲೀಸರು ಮುಂದಿನ ಕ್ರಮದಲ್ಲಿ ನಿರತರಾಗಿದ್ದಾರೆ.