ಶಾಲಾ ಪಠ್ಯದಲ್ಲಿ ಇನ್ಮುಂದೆ ಇರಲಿದೆ ‘ತುರ್ತು ಪರಿಸ್ಥಿತಿ’ಯ ಅಧ್ಯಾಯ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಸ್ವತಂತ್ರ ಭಾರತದ ಇತಿಹಾಸದಲ್ಲಿ ತುರ್ತು ಪರಿಸ್ಥಿತಿ ಹೇರಿ 49 ವರ್ಷ ಕಳೆದಿದೆ. 1975ರ ಜೂನ್‌ 25ರಂದು ಅಂದಿನ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ತುರ್ತು ಪರಿಸ್ಥಿತಿಯನ್ನು ಹೇರಿದ್ದರು.

ಇದೀಗ ಮಧ್ಯ ಪ್ರದೇಶದ ಬಿಜೆಪಿ ಸರ್ಕಾರ ಶಾಲಾ ಪಠ್ಯಕ್ರಮದಲ್ಲಿ ತುರ್ತು ಪರಿಸ್ಥಿತಿ ಕುರಿತು ಅಧ್ಯಾಯವೊಂದನ್ನು ಅಳವಡಿಸಲು ಮುಂದಾಗಿದೆ. ಮುಖ್ಯಮಂತ್ರಿ ಮೋಹನ್ ಯಾದವ್ ಈ ಕುರಿತು ಮಾಹಿತಿ ನೀಡಿದ್ದಾರೆ.

ಈ ಅಧ್ಯಾಯ 1975ರಲ್ಲಿ ಕಾಂಗ್ರೆಸ್ ಸರ್ಕಾರವು ಹೇರಿದ ತುರ್ತು ಪರಿಸ್ಥಿತಿಯ ಸಮಯದಲ್ಲಿ ನಡೆದ ʼಅತಿರೇಕಗಳು ಮತ್ತು ದಬ್ಬಾಳಿಕೆʼಯನ್ನು ವಿವರಿಸಲಿದೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ‘1975ರಿಂದ 1977ರ ತುರ್ತು ಪರಿಸ್ಥಿತಿಯ ಅವಧಿಯಲ್ಲಿನ ಹೋರಾಟದ ಬಗ್ಗೆ ಇಂದಿನ ಪೀಳಿಗೆಗೆ ಅರಿವು ಮೂಡಿಸುವುದು ಈ ಕ್ರಮದ ಹಿಂದಿನ ಉದ್ದೇಶ’ ಎಂದು ಹೇಳಿದ್ದಾರೆ.

‘ದೇಶದಲ್ಲಿ ಅಂದು ಚಾಲ್ತಿಯಲ್ಲಿದ್ದ ಪರಿಸ್ಥಿತಿಗಳು, ದಬ್ಬಾಳಿಕೆ ಮತ್ತು ಆಗಿನ ಕಾಂಗ್ರೆಸ್ ಸರ್ಕಾರ ತೆಗೆದುಕೊಂಡ ಕಠಿಣ ಕ್ರಮವನ್ನು ವಿರೋಧಿಸಿದ ಲೋಕತಂತ್ರ ಸೇನಾನಿ (ತುರ್ತು ಪರಿಸ್ಥಿತಿ ವಿರುದ್ಧ ಹೋರಾಡಿದವರು)ಗಳ ಹೋರಾಟವನ್ನು ಶಾಲಾ ಪಠ್ಯಕ್ರಮದಲ್ಲಿ ಸೇರಿಸಲಾಗುವುದು’ ಮೋಹನ್ ಯಾದವ್ ತಿಳಿಸಿದ್ದಾರೆ.

ಜೊತೆಗೆ ಲೋಕತಂತ್ರ ಸೇನಾನಿಗಳಿಗೆ ವಿವಿಧ ಸವಲತ್ತುಗಳನ್ನು ಘೋಷಿಸಿದ್ದಾರೆ. ಶೇ. 50ರಷ್ಟು ರಿಯಾಯಿತಿಯೊಂದಿಗೆ ಲೋಕತಂತ್ರ ಸೇನಾನಿಗಳು ಮೂರು ದಿನಗಳ ಕಾಲ ಸರ್ಕಾರಿ ಸರ್ಕ್ಯೂಟ್ ಮತ್ತು ವಿಶ್ರಾಂತಿ ಗೃಹಗಳಲ್ಲಿ ಉಳಿಯಬಹುದು. ಹೆದ್ದಾರಿಗಳ ಟೋಲ್ ಮೊತ್ತದಲ್ಲಿ ರಿಯಾಯಿತಿ ದೊರೆಯಲಿದೆ. ತಮ್ಮ ಆಯುಷ್ಮಾನ್ ಆರೋಗ್ಯ ಕಾರ್ಡ್ ಮೂಲಕ ಪಡೆದ ಚಿಕಿತ್ಸೆಗಾಗಿ ಮಾಡಿದ ವೆಚ್ಚವನ್ನು ತ್ವರಿತವಾಗಿ ಪಾವತಿಸಲು ಕ್ರಮ ಕೂಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಘೋಷಿಸಿದ್ದಾರೆ. ಇದಲ್ಲದೆ ಲೋಕತಂತ್ರ ಸೇನಾನಿಗಳಿಗೆ ಗಂಭೀರ ಆರೋಗ್ಯ ಸಮಸ್ಯೆಗಳ ಎದುರಾದರೆ ಅವರಿಗೆ ಏರ್ ಆಂಬ್ಯುಲೆನ್ಸ್‌ ನೆರವು ಒದಗಿಸಲಾಗುತ್ತದೆ.ಸಕಲ ಸರ್ಕಾರಿ ಗೌರವಗಳೊಂದಿಗೆ ಮೃತ ಲೋಕತಂತ್ರ ಸೇನಾನಿಗಳ ಅಂತ್ಯ ಸಂಸ್ಕಾರ ನೆರವೇರಿಸಲಾಗುವುದು. ಜತೆಗೆ ಅಂತ್ಯಸಂಸ್ಕಾರಕ್ಕಾಗಿ ಅವರ ಕುಟುಂಬಸ್ಥರಿಗೆ ನೀಡುವ ಸಹಾಯಧನವನ್ನು 8,000 ರೂ.ಯಿಂದ 10,000 ರೂ.ಗೆ ಏರಿಸಲಾಗುವುದು. ಅವರ ಕುಟುಂಬದ ಸದಸ್ಯರಿಗೆ ಅಗತ್ಯ ತರಬೇತಿ ನೀಡಿ ಉದ್ಯೋಗಾವಕಾಶವನ್ನೂ ನೀಡಲಾಗುವುದು ಎಂದು ಮೋಹನ್‌ ಯಾದವ್‌ ಘೋಷಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!