August 10, 2026
Monday, August 10, 2026
spot_img

ಜೊತೆಯಾಗಿ ಬದುಕಿದರು, ಜೊತೆಯಾಗಿ ಹೊರಟರು: ಪತ್ನಿಯ ಅಂತ್ಯಕ್ರಿಯೆಗೂ ಮುನ್ನವೇ ಪ್ರಾಣ ಬಿಟ್ಟ ಪತಿ

ಹೊಸದಿಗಂತ ವರದಿ ದಾವಣಗೆರೆ:

ವಯೋ ಸಹಜ ಕಾಯಿಲೆಯಿಂದ ಭಾನುವಾರ ಮೃತಪಟ್ಟಿದ್ದ ಪತ್ನಿಯ ಅಂತ್ಯಕ್ರಿಯೆ ಸಿದ್ಧತೆ ವೇಳೆ ಮೃತಳ ಪತಿಯೂ ಸಾವನ್ನಪ್ಪಿದ ಮನ ಕಲುಕುವ ಘಟನೆ ತಾಲೂಕಿನ ಹದಡಿ ಗ್ರಾಮದಲ್ಲಿ ಸೋಮವಾರ ವರದಿಯಾಗಿದೆ.

ಗ್ರಾಮದ 68 ವರ್ಷದ ಸಿದ್ದಮ್ಮ(ಸಿದ್ದಜ್ಜಿ) ಭಾನುವಾರ ಅನಾರೋಗ್ಯದ ಹಿನ್ನೆಲೆಯಲ್ಲಿ ಸಾವನ್ನಪ್ಪಿದ್ದರು. ಪತ್ನಿಯ ಸಾವಿನಿಂದಾಗಿ ತೀವ್ರ ನೊಂದಿದ್ದ ಪತಿ ಮಲ್ಲಪ್ಪ(75 ವರ್ಷ) ಕೂಡ ಸೋಮವಾರ ಬೆಳಿಗ್ಗೆ ಸಾವನ್ನಪ್ಪಿದ್ದಾರೆ.

ಇಡೀ ಮನೆ ಮಂದಿಯೆಲ್ಲಾ ಮನೆ ಯಜಮಾನಿಯಾಗಿದ್ದ ಸಿದ್ದಮ್ಮನ ಸಾವಿನ ನೋವಿನಲ್ಲಿದ್ದರು. ಮನೆಯಲ್ಲಿ ದುಃಖತಪ್ತ ಕುಟುಂಬಸ್ಥರು ಸೋಮವಾರ ಮಧ್ಯಾಹ್ನ ಸಿದ್ದಮ್ಮನ ಅಂತ್ಯಕ್ರಿಯೆಗೆ ಸಿದ್ಧತೆ ಮಾಡಿಕೊಂಡಿದ್ದರಲ್ಲದೇ, ತಮ್ಮ ಬಂಧು-ಬಳಗ, ದೂರದ ಸಂಬಂಧಿಗಳಿಗೆ ವಿಷಯ ಮುಟ್ಟಿಸಿದ್ದರು. ಪತ್ನಿಯನ್ನು ಕಳೆದುಕೊಂಡಿದ್ದ ನೋವಿನಲ್ಲಿದ್ದ ಮಲ್ಲಪ್ಪ ಸಹ ಸೋಮವಾರ ಬೆಳಿಗ್ಗೆ 10.30ರ ವೇಳೆಗೆ ಮೃತಪಟ್ಟಿದ್ದು, ಇಡೀ ಕುಟುಂಬದ ಆಕ್ರಂದನ ಮುಗಿಲು ಮುಟ್ಟುವಂತಿತ್ತು.

ಮೊದಲೇ ಅಜ್ಜಿಯನ್ನು ಕಳೆದುಕೊಂಡು ಶೋಕ ಸಾಗರದಲ್ಲಿ ಮುಳುಗಿದ್ದ ಮನೆ ಮಂದಿಯು ಕುಟುಂಬದ ಆಧಾರ ಸ್ಥಂಭವಾಗಿದ್ದ ಹಿರಿಯ ತಲೆ ಮಲ್ಲಪ್ಪಜ್ಜನನ್ನೇ ಕಳೆದುಕೊಂಡು ರೋಧಿಸತೊಡಗಿತು. ವಯೋಸಹಜ ಕಾಯಿಲೆಯಿಂದ ಇಬ್ಬರೂ ಬಳಲುತ್ತಿದ್ದರು. ಪತ್ನಿಯ ಸಾವಿನ ಬೆನ್ನಲ್ಲೇ ಪತಿಯೂ ಸಾವನ್ನಪ್ಪಿರುವುದು ಇಡೀ ಕುಟುಂಬವನ್ನೇ ಶೋಕ ಸಾಗರದಲ್ಲಿ ಮುಳುಗಿಸಿದೆ. ಸೋಮವಾರ ಸಂಜೆ ಗ್ರಾಮದಲ್ಲಿ ಇಬ್ಬರ ಅಂತ್ಯಕ್ರಿಯೆಯೂ ನಡೆದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !