ಬಿದಿರಿನ ಪುಟ್ಟ ಸಸ್ಯಗಳನ್ನು ಕಳಲೆ ಎನ್ನುತ್ತಾರೆ. ಕಳಲೆಯ ಪಲ್ಯವನ್ನು ವರ್ಷಕ್ಕೊಮ್ಮೆಯಾದರೂ ತಿನ್ನಬೇಕು. ಇದು ನಮ್ಮ ದೇಹದಲ್ಲಿರುವ ಎಲ್ಲ ಕೆಟ್ಟ ಅಂಶಗಳನ್ನು ತೆಗೆದು ಹಾಕುತ್ತದೆ. ಇಷ್ಟೇ ಅಲ್ಲದೆ ಅನೇಕ ರೋಗಗಳಿಂದಲೂ ಮುಕ್ತಿ ನೀಡುತ್ತದೆ. ಆದರೆ ಕಳಲೆಯ ಪದಾರ್ಥವನ್ನು ಮಾಡುವ ಮುನ್ನ ಸಾಕಷ್ಟು ಮುನ್ನೆಚ್ಚರಿಕೆ ವಹಿಸಬೇಕಿದೆ. ಕಳಲೆ ಯಾಕೆ ತಿನ್ನಬೇಕು? ಹೇಗೆ ತಿನ್ನಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ..
ಕಳಲೆ ಅಥವಾ ಬಿದಿರಿನ ಚಿಗುರು ಎಂದು ಕಡೆಯಲ್ಪಡುವ ಈ ಸಸ್ಯದಲ್ಲಿ ಸೈನೋಜೆನಿಕ್ ಗ್ಲೈಕೋಸೈಡ್ ಎಂಬ ನೈಸರ್ಗಿಕ ಜೀವಾಣು ತುಂಬಿರುತ್ತದೆ. ಇದು ಒಂದು ಬಗೆಯ ವಿಷದ ರೂಪ. ಅಡುಗೆ ಮಾಡುವಾಗ ಇದನ್ನು ಕುದಿಯುವ ನೀರಿನಲ್ಲಿ ಹಲವಾರು ಬಾರಿ ಕುದಿಸಿ, ಸ್ವಚ್ಛಮಾಡಲಾಗುವುದು. ಹಾಗಾಗಿ ಈ ಅಂಶವು ಸಂಪೂರ್ಣವಾಗಿ ನಾಶವಾಗುವುದು. ನಂತರ ಇದನ್ನು ಅಡುಗೆಯಲ್ಲಿ ಬಳಸಲಾಗುವುದು. ಜಪಾನ್, ತೈವಾನ್ ಮತ್ತು ಚೀನಾಗಳಲ್ಲಿ ಇದ್ದನು ಬೇಸಿಗೆಯಲ್ಲಿಯೇ ಕೊಯ್ಲು ಮಾಡುತ್ತಾರೆ. ನಮ್ಮ ಭಾರತದ ಅಸ್ಸಾಂ, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್, ಮಣಿಪುರ, ಜಾರ್ಖಂಡ್, ಒಡಿಶಾ ಮತ್ತು ಕರ್ನಾಟಕದಲ್ಲಿ ಇದನ್ನು ಹೆಚ್ಚಾಗಿ ಬೆಳೆಸಲಾಗುತ್ತದೆ.
ಬಿದಿರಿನಲ್ಲಿ ಪ್ರೋಟೀನ್, ಕಾರ್ಬೋಹೈಡ್ರೇಷನ್, ನಾರಿನಂಶ, ಖನಿಜಗಳು, ನಾರಿನಂಶ ಇರುತ್ತದೆ. ಕಳಲೆಯಲ್ಲಿರುವ ಫಿನಾಲಿಕ್ ಎನ್ನುವ ಅಂಶದಿಂದ ಕ್ಯಾನ್ಸರ್ ತಡೆಗಟ್ಟಬಹುದು. ಇದರಲ್ಲಿ ಆಂಟಿ ವೈರಲ್ ಗುಣಗಳು, ವಿಟಮಿನ್ ಎ, ಇ, ಬಿ, ಕ್ಯಾಲ್ಶಿಯಂ ಕೂಡ ಇದೆ.
ಪ್ರತಿ 100 ಗ್ರಾಂ ಕಳಲೆಯಲ್ಲಿ 20 ಗ್ರಾಂ ನಷ್ಟು ಕ್ಯಾಲೋರಿ ಇರುತ್ತದೆ. ಕಾರ್ಬೋಹೈಡ್ರೇಟ್ ಪ್ರಮಾಣವು ಅತ್ಯಂತ ಕಡಿಮೆ ಪ್ರಮಾಣದಲ್ಲಿ ಇರುತ್ತದೆ. 100 ಗ್ರಾಂ. ಬಿದುರಿನ ಚಿಗುರಲ್ಲಿ ಕೇವಲ 3 ರಿಂದ 4 ಗ್ರಾಂ ನಷ್ಟು ಕಾರ್ಬೋ ಹೈಡ್ರೇಟ್ ಇರುತ್ತವೆ. ಇದು ಹೃದಯ ಸಮಸ್ಯೆ ಇರುವವರಿಗೆ ಅತ್ಯುತ್ತಮವಾದ ಆಹಾರ ಆಗುವುದು. ಕೆಟ್ಟ ಕೊಲೆಸ್ಟ್ರಾಲ್ ವಿರುದ್ಧ ಹೋರಾಡುವುದರ ಜೊತೆಗೆ ರಕ್ತದ ಸ್ಥಿತಿ ಸಮತೋಲನದಲ್ಲಿ ಇರುವಂತೆ ಮಾಡುವುದು.
ಜೀವಸತ್ವಗಳು ಮತ್ತು ಖನಿಜಗಳು ಬಿದಿರಿನ ಚಿಗುರಲ್ಲಿ ಹೇರಳವಾಗಿವೆ. ಇವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ವೈರಸ್, ಬ್ಯಾಕ್ಟೀರಿಯಾ ಮತ್ತು ಸೋಂಕುಗಳು ತಗುಲದಂತೆ ರಕ್ಷಣೆ ನೀಡುವುದು. ಹಾಗಾಗಿ ಮಳೆಗಾಲ ಮತ್ತು ಚಳಿಗಾಲದ ಸಮಯದಲ್ಲಿ ಇದನ್ನು ತಪ್ಪದೇ ಸೇವಿಸಬೇಕು.
ಹೇಗೆ ವಿಷ ತೆಗೆಯಬೇಕು?
ಕಳಲೆಯನ್ನು ತಂದ ನಂತರ ಸಣ್ಣಗೆ ಹೆಚ್ಚಬೇಕು, ನಂತರ ಉಪ್ಪಿರುವ ನೀರಿನಲ್ಲಿ ರಾತ್ರಿಯಿಡೀ ನೆನೆಹಾಕಿ.
ಫರ್ಮೆಂಟ್ ಆದ ನಂತರ ನೀರನ್ನು ಚೆಲ್ಲಿ, ಕಳಲೆಯನ್ನು ಚೆನ್ನಾಗಿ ತೊಳೆದು ನಂತರ ಪಲ್ಯ ಮಾಡಲು ಬಳಕೆ ಮಾಡಬಹುದು.



