October 16, 2026
Friday, October 16, 2026
spot_img

ಫರಹತಾಬಾದ್‌ನಲ್ಲಿ ಸೋಲಾರ್ ಪ್ಲಾಂಟ್‌ ಗೆ ಕನ್ನ ಹಾಕಿದ ಖದೀಮರು: 1.80 ಲಕ್ಷ ರೂ. ಮೌಲ್ಯದ ಸಾಮಗ್ರಿ ಕಳವು

ಹೊಸದಿಗಂತ ವರದಿ ಕಲಬುರಗಿ:

ಫರಹತಾಬಾದ್ ಗ್ರಾಮದ ಸೀಮಾಂತರದಲ್ಲಿರುವ ಬ್ಲೂಪಿನ್ ಸೋಲಾರ್ ಪ್ಲಾಂಟ್ ಕಂಪನಿಯ ಆವರಣದಿಂದ 1.80 ಲಕ್ಷ ಮೌಲ್ಯದ ವೈರ್‌ಗಳು ಹಾಗೂ ಇತರ ಸಾಮಗ್ರಿಗಳನ್ನು ಕಳ್ಳರು ಕಳವು ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಕಂಪನಿಯಲ್ಲಿ ಕಳೆದ ಒಂಬತ್ತು ವರ್ಷಗಳಿಂದ ಸೆಕ್ಯೂರಿಟಿ ಸೂಪರ್‌ವೈಸರ್ ಆಗಿ ಕೆಲಸ ಮಾಡುತ್ತಿರುವ ತಾಡತೆಗನೂರ ಗ್ರಾಮದ ಆನಂದ ಶರಣಪ್ಪ ನಡುವಿನಕೇರಿ ಅವರು ಈ ಕುರಿತು ಫರಹತಾಬಾದ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಅ. 10ರಂದು ರಾತ್ರಿ 8 ಗಂಟೆಯವರೆಗೆ ಕಂಪನಿಯ ಭದ್ರತಾ ಸಿಬ್ಬಂದಿ ಕರ್ತವ್ಯ ನಿರ್ವಹಿಸಿದ್ದು, ಬಳಿಕ ತಾವು ಕರ್ತವ್ಯ ಮುಗಿಸಿ ಮನೆಗೆ ತೆರಳಿದ್ದಾಗಿ ದೂರಿನಲ್ಲಿ ತಿಳಿಸಿದ್ದಾರೆ. ಅ. 11ರಂದು ಬೆಳಿಗ್ಗೆ 8 ಗಂಟೆಗೆ ಕಂಪನಿಯ ತಂತ್ರಜ್ಞ ಶಿವರಾಜ ಅವರು ಕಂಪನಿಯ ಆವರಣದಲ್ಲಿದ್ದ ಸಾಮಗ್ರಿಗಳು ಕಳವಾಗಿರುವುದಾಗಿ ಮಾಹಿತಿ ನೀಡಿದ್ದಾರೆ. ಬೆಳಿಗ್ಗೆ 8.30ಕ್ಕೆ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಸಾಮಗ್ರಿಗಳು ಕಾಣೆಯಾಗಿರುವುದು ತಿಳಿದುಬಂದಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಕಳವಾಗಿರುವ ಸಾಮಗ್ರಿಗಳ ವಿವರ ಹೀಗಿದೆ

18,000 ಮೀಟರ್ 6 ಚದರ ಮಿ.ಮೀ. ಸ್ಟ್ರಿಂಗ್ ಕೇಬಲ್‌ಗಳು (1.08 ಲಕ್ಷ), 300 ವೈ-ಕನೆಕ್ಟರ್‌ಗಳು (12 ಸಾವಿರ), 1,500 ಜೋಡಿ ಸೋಲಾರ್ ಪಿವಿ ಎಂಸಿ4 ಕನೆಕ್ಟರ್‌ಗಳು (30 ಸಾವಿರ), 200 ಪ್ಯಾಕೆಟ್ ನೈಲಾನ್ ಕೇಬಲ್ ಟೈಗಳು (10 ಸಾವಿರ), 1,000 ಮೀಟರ್ ಪಿವಿಸಿ ಕಂಡ್ಯೂಟ್ (15 ಸಾವಿರ) ಹಾಗೂ 50 ಪಿಯು ಫೋಮ್‌ಗಳು (5 ಸಾವಿರ). ಇವುಗಳ ಒಟ್ಟು ಮೌಲ್ಯ 1.80 ಲಕ್ಷ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಕಳವು ಘಟನೆ ಕುರಿತು ಕಂಪನಿಯ ಮೇಲಧಿಕಾರಿಗಳಿಗೆ ಮಾಹಿತಿ ನೀಡಿದ ಬಳಿಕ ತಡವಾಗಿ ಪೊಲೀಸ್ ಠಾಣೆಗೆ ಆಗಮಿಸಿ ದೂರು ನೀಡಿರುವುದಾಗಿ ತಿಳಿಸಿದ್ದಾರೆ.

ಈ ಸಂಬಂಧ ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ಗುನ್ನೆ ಸಂಖ್ಯೆ 107/2026ರ ಅಡಿಯಲ್ಲಿ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಕಲಂ 303(2)ರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

Must Read