ಚಂದಾ ಕೊಚ್ಚಾರ್‌ ಸಾಲವಂಚನೆ ಪ್ರಕರಣದ ಬಗ್ಗೆ ನೀವು ತಿಳಿಯಬೇಕಿರೋ ಸಂಗತಿಗಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ದೇಶದ ಪ್ರತಿಷ್ಟಿತ ಖಾಸಗಿ ಬ್ಯಾಂಕ್‌ ಐಸಿಐಸಿಐ ನ ಮಾಜಿ ಮುಖ್ಯಸ್ಥೆ ಚಂದಾಕೊಚ್ಚಾರ್‌ ಅವರ ವಿರುದ್ಧ ಸಾಲ ವಂಚನೆ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆಗಾಗಿ ಅವರ ಪತಿ ದೀಪಕ್‌ ಕೊಚ್ಚಾರ್‌ ಹಾಗೂ ಚಂದಾ ಕೊಚ್ಚಾರ್‌ ಅವರನ್ನು ಸಿಬಿಐ ವಶಕ್ಕೆ ಒಪ್ಪಿಸಲಾಗಿದೆ. ದೇಶದಾದ್ಯಂತ ಚರ್ಚೆಗೆ ಕಾರಣವಾದ ಈ ಪ್ರಕರಣದ ಬಗ್ಗೆ ನೀವು ತಿಳಿದುಕೊಳ್ಳಬೇಕಿರೋ ಕೆಲ ಅಂಶಗಳ ವಿವರಣೆ ಇಲ್ಲಿವೆ.

1984ರಲ್ಲಿ ಐಸಿಐಸಿಐ ಬ್ಯಾಂಕ್‌ ಗೆ ಸೇರಿದ ಚಂದಾ ಕೊಚ್ಚಾರ್‌ 2009ರಲ್ಲಿ ಬ್ಯಾಂಕಿನ ನಿರ್ದೇಶಕಿ ಹಾಗೂ ಮುಖ್ಯಕಾರ್ಯನಿರ್ವಹಣಾಧಿಕಾರಿ (ಸಿಇಒ) ಸ್ಥಾನಕ್ಕೇರಿ ದೇಶದ ಪ್ರಭಾವಿ ಮಹಿಳೆಯರಲ್ಲೊಬ್ಬರು ಎನಿಸಿಕೊಂಡರು.  ಅವರು ಫೋರ್ಬ್ಸ್ ಇಂಟರ್‌ನ್ಯಾಶನಲ್‌ನ “ವಿಶ್ವದ 100 ಅತ್ಯಂತ ಶಕ್ತಿಶಾಲಿ ಮಹಿಳೆಯರ” ಪಟ್ಟಿಯಲ್ಲಿ ಸತತ ಏಳು ವರ್ಷಗಳ ಕಾಲ ಕಾಣಿಸಿಕೊಂಡಿದ್ದಾರೆ. ಮತ್ತು 2015 ರಲ್ಲಿ ಟೈಮ್ ಮ್ಯಾಗಜೀನ್‌ನ ವಿಶ್ವದ “100 ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳ ಸಾಲಿನಲ್ಲಿ ಗುರುತಿಸಿಕೊಂಡಿದ್ದರು.

ಐಸಿಐಸಿಐ ಮುಖ್ಯಸ್ಥರಾಗಿದ್ದ ಅವರ ವಿರುದ್ಧ 2016ರಲ್ಲಿಯೇ ಅವರ ಹಿತಾಸಕ್ತಿ ಸಂಘರ್ಷದ ಬಗ್ಗೆ ಚರ್ಚೆಗಳು ಎದ್ದಿದ್ದವು. ಆದರೆ 2018ರ ನಂತರದಲ್ಲಿ ಅದು ಉಲ್ಬಣಿಸಿ ಚಂದಾ ಕೊಚ್ಚಾರ್‌ ಅವರ ಹಿತಾಸಕ್ತಿ ಸಂಘರ್ಷ ಮತ್ತು ಆಂತರಿಕ ಸಾಲದ ಬಗ್ಗೆ ಬ್ಯಾಂಕಿನ ನೀತಿಗಳನ್ನು ಉಲ್ಲಂಘಿಸಿರುವ ಕುರಿತು ವ್ಯಾಪಕವಾಗಿ ಪ್ರಶ್ನೆಗಳು ಎದ್ದಿದ್ದರಿಂದ ಬ್ಯಾಂಕ್‌ ಆಂತರಿಕ ತನಿಖೆಗೆ ಮುಂದಾಯಿತು. ಕೊನೆಗೆ ಚಂದಾ ಕೊಚ್ಚರ್ ರಾಜೀನಾಮೆ ನೀಡಿದ್ದರು. ಪ್ರಸ್ತುತ ಮೇಲೆ ದಾಖಲಾಗಿರುವ ಸಾಲವಂಚನೆ ಪ್ರಕರಣದ ಕುರಿತು ಸರಳವಾಗಿ ಹೇಳಬೇಕೆಂದರೆ ವಿಡಿಯೋಕಾನ್ ಗ್ರೂಪ್‌ಗೆ ಒದಗಿಸಲಾದ ಸಾಲಗಳಿಗೆ ಬದಲಾಗಿ ಆಕೆಯ ಅಧಿಕಾರಾವಧಿಯಲ್ಲಿ ಆಕೆ ಮತ್ತು ಆಕೆಯ ಕುಟುಂಬವು ಹಲವಾರು ಕಿಕ್‌ಬ್ಯಾಕ್‌ಗಳನ್ನು ಪಡೆದಿದೆ ಎನ್ನಲಾಗಿದೆ. ವಿಡಯೋಕಾನ್‌ ಗ್ರುಪ್‌ ಗೆ ನೀಡಿದ ಸಾಲಗಳಲ್ಲಿನ ಹಲವು ಅಂತಿಮವಾಗಿ ಅನುತ್ಪಾದಕ ಆಸ್ತಿಗಳಾಗಿ (NPA) ಬದಲಾಗುತ್ತಿವೆ ಎನ್ನಲಾಗಿದೆ.

ಅವರ ಪತಿ ದೀಪಕ್‌ ಕೊಚ್ಚಾರ್‌ ಅವರ ನ್ಯೂಪವರ್ ರಿನ್ಯೂವಬಲ್ಸ್ ಕಂಪನಿಯು ವಿಡಿಯೋಕಾನ್ ಗ್ರುಪ್‌ನ ವೇಣುಗೋಪಾಲ್‌ ಧೂತ್‌ ಅವರಿಂದ 64ಕೋಟಿ ರೂಪಾಯಿ ಹಣ ಪಡೆದಿದೆ ಎಂದು 2019ರಲ್ಲಿ ಜಾರಿ ನಿರ್ದೇಶನಾಲಯ ಆರೋಪಿಸಿದೆ. ಐಸಿಐಸಿಐ ಬ್ಯಾಂಕ್‌ನಿಂದ ವಿಡಿಯೋಕಾನ್ ಗ್ರೂಪ್ 3,250 ಕೋಟಿ ಸಾಲವನ್ನು ಪಡೆದ ಕೆಲವೇ ವಾರಗಳಲ್ಲಿ ಈ ಬೆಳವಣಿಗೆ ನಡೆದಿದೆ ಎನ್ನಲಾಗಿದೆ. 2009-11ರ ಅವಧಿಯಲ್ಲಿ ಚಂದಾ ಕೊಚ್ಚಾರ್ ಬ್ಯಾಂಕ್‌ನ ಚುಕ್ಕಾಣಿ ಹಿಡಿದಿದ್ದಾಗ ವಿಡಿಯೋಕಾನ್ ಗ್ರೂಪ್ ಮತ್ತು ಅದರ ಸಂಬಂಧಿತ ಕಂಪನಿಗಳಿಗೆ 1,875 ಕೋಟಿ ರೂ ಮೊತ್ತದ ಆರು ಸಾಲಗಳನ್ನು ಮಂಜೂರು ಮಾಡಲಾಗಿದೆ. ಈ ಸಾಲಗಳೆಲ್ಲವೂ ಈಗ ಅನುತ್ಪಾದಕ ಆಸ್ತಿಯಾಗಿ ಬದಲಾಗಿದ್ದು ಬ್ಯಾಂಕ್‌ಗೆ 1,730 ಕೋಟಿ ರೂ. ನಷ್ಟ ಉಂಟಾಗಿದ್ದು 2019 ರಲ್ಲಿ, ಜಾರಿ ನಿರ್ದೇಶನಾಲಯವು ಕೊಚ್ಚರ್, ಧೂತ್ ಮತ್ತು ಇತರ ಕೆಲವರ ವಿರುದ್ಧ ಮನಿ ಲಾಂಡರಿಂಗ್ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಿದೆ.

ಕೊಚ್ಚಾರ್ ಸದಸ್ಯರಾಗಿದ್ದ ಸಮಿತಿಯು ಸಾಲವನ್ನು ತೆರವುಗೊಳಿಸಿದೆ ಎಂದು ಸಿಬಿಐ ಆರೋಪಿಸಿದೆ. ಅಲ್ಲದೇ ತಮ್ಮ ಅಧಿಕಾರವನ್ನು ಚಂದಾ ಕೊಚ್ಚಾರ್‌ ದುರುಪಯೋಗಪಡಿಸಿಕೊಂಡಿದ್ದು ವೀಡಿಯೋಕಾನ್‌ಗೆ ಸಾಲ ಮಂಜೂರು ಮಾಡಿದ್ದಕ್ಕಾಗಿ ತನ್ನ ಪತಿಯ ಮೂಲಕ ಅಕ್ರಮ ಲಾಭ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!