Thursday, October 6, 2022

Latest Posts

ಮೂಢನಂಬಿಕೆಗೆ ಸೆಡ್ಡುಹೊಡೆದು ಅಳಿವಿನಂಚಿನ ಶ್ರೀತಾಳೆ ಮರದ ರಕ್ಷಣೆಗೆ ಮುಂದಾಗಿದ್ದಾರೆ ಈ ಕೃಷಿಕ!

ಐ.ಬಿ. ಸಂದೀಪ್ ಕುಮಾರ್

ಪುರಾತನ ಕಾಲದಿಂದಲೂ ಅಕ್ಷರ ಸಂಪತ್ತ ನ್ನು ತಲೆತಲಾಂತರಕ್ಕೆ ಕಾಯ್ದಿರಿಸಿದ ಕೀರ್ತಿ ಶ್ರೀತಾಳೆ ಮರಗಳದ್ದು. ಇದರ ಗರಿ, ಎಲೆಗಳು ಎಷ್ಟೇ ಸಾವಿರ ವರ್ಷಗಳಾದರೂ ಹಾಳಾಗುವುದಿಲ್ಲ, ಆದರೆ, ಮರಗಳು ಮಾತ್ರ ಅಲ್ಪಾಯುಷಿ…. ವಿಶ್ವದಲ್ಲಿ ಕೆಂಪು ಪಟ್ಟಿಯಲ್ಲಿ ಗುರುತಿಸಿಕೊಂಡಿರುವ ಈ ಮರ ಇಂದು ವಿನಾಶದಂಚಿನಲ್ಲಿದ್ದು, ವರ್ಷದಿಂದ ವರ್ಷಕ್ಕೆ ಈ ಮರಗಳ ಸಂಖ್ಯೆ ಇಳಿಮುಖವಾಗುತ್ತಾ ಬರುತ್ತಿದೆ. ಈ ಕಾರಣಕ್ಕಾಗಿಯೇ ಇವುಗಳನ್ನು ಸಂರಕ್ಷಿಸುವ ಪ್ರಯತ್ನಗಳು ಅಲ್ಲಲ್ಲಿ ನಡೆಯುತ್ತಿದೆ.

ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕಾವು, ಅರಿಯಡ್ಕ ಗ್ರಾಮದ ಮುಂಡಕೊಚ್ಚಿಯ ಸುನೀಲ್ ಬೋರ್ಕರ್, ತಮ್ಮ ಜಮೀನಿನಲ್ಲಿರುವ ಹೂಬಿಟ್ಟಿರುವ ಶ್ರೀತಾಳೆ ಮರವನ್ನು ಸಂರಕ್ಷಿಸಿ ಅದರ ಬೀಜಗಳನ್ನು ಆಸಕ್ತರಿಗೆ ವಿತರಿಸಲು ಮುಂದಾಗಿದ್ದಾರೆ.
ಬೋರ್ಕರ್ ಜಮೀನಿನಲ್ಲಿರುವ ಶ್ರೀತಾಳೆ ಮರದಲ್ಲಿ ಜನವರಿ ತಿಂಗಳಲ್ಲೇ ಹೂವು ಬಿಟ್ಟಿದ್ದು, ಇದೀಗ ಕಾಯಿ ಬಲಿಯುತ್ತಿದೆ. ಮುಂದಿನ ಫೆಬ್ರವರಿ-ಮಾರ್ಚ್ ತಿಂಗಳಲ್ಲಿ ಕಾಯಿಗಳು ಹಣ್ಣಾಗುವ ನಿರೀಕ್ಷೆಯಲ್ಲಿದೆ. ಮರದಲ್ಲಿ ಕಾಯಿಗಳು ಹಣ್ಣಾಗುವ ಸಮಯಕ್ಕೆ ಮರದ ಕಾಂಡದಲ್ಲಿ ಅಕ್ಕಿಯ ಪುಡಿಯಂತೆ ಸುಮಾರು 2-3 ಕ್ವಿಂಟಾಲಿನಷ್ಟು ಹುಡಿಯೂ ದೊರೆಯುವುದು. ಈ ಹುಡಿ ದೋಸೆಗೆ ಅತ್ಯುತ್ತಮ.

ಶ್ರೀತಾಳೆ ಕೊರಿಫಾ ಉಂಬ್ರಾಕ್ಯುಲಿಫೆರಾ ಪ್ರಭೇದಕ್ಕೆ ಸೇರಿದ ಮರ. ಸ್ಥಳೀಯ ತುಳು ಭಾಷೆಯಲ್ಲಿ ‘ಪಣೆ’ ‘ಪಣೋಲಿ’ ಎಂದು ಕರೆಯಲ್ಪಡುವ ಶ್ರೀತಾಳೆ ಮರವು ಈಗ ಹೂ ಹೋಗಿ ಕಾಯಿಕಟ್ಟುತ್ತಿರುವ ಸಮಯ. 80 ರಿಂದ 100 ಅಡಿ ಎತ್ತರ ಹೋಗುವ ಮರವು ಸರಿಸುಮಾರು 60 ರಿಂದ 65 ವರ್ಷ ಬಾಳುತ್ತದೆ. ತನ್ನ ಜೀವಮಾನದಲ್ಲಿ ಒಮ್ಮೆ ಮಾತ್ರ ಹೂ ಬಿಡುವ ಶ್ರೀತಾಳೆ ಮರದಲ್ಲಿ ಹೂವು ಬಾಳೆ ಗೊನೆಯಂತೆ ಮರದ ತುದಿಯಿಂದ ಹೊರ ಬರುತ್ತದೆ. ಈ ಮರದ ಹೂವಿನ ದಂಟಿನ ಉದ್ದವು ಸುಮಾರು 20 ಅಡಿಗಳಷ್ಟು ಇರುತ್ತದೆ. ಆ ಹೂವಿನ ದಂಟಿನಲ್ಲಿ ದೊಡ್ಡ ಅಡಿಕೆ ಗಾತ್ರದ ಸುಮಾರು 3 ಲಕ್ಷ ಕಾಯಿಗಳಿರುತ್ತವೆ. ಹೂವಿನ ದಂಟು ಹೊರ ಬಂದು ಕಾಯಿ ಕಟ್ಟಿ ಪೂರ್ಣವಾಗಿ ಬೆಳೆಯಲು 15 ರಿಂದ 16 ತಿಂಗಳು ಸಮಯ ತಗಲುತ್ತದೆ. ಈ ಮರವನ್ನು ಸುನೀಲ್ ಬೋರ್ಕರ್ ಬಹಳಷ್ಟು ಜಾಗರೂಕತೆಯಿಂದ ಕಾಪಾಡಿಕೊಂಡು ಬಂದಿದ್ದು, ಇದೀಗ ಫಲ ನೀಡಿದೆ.

ಶ್ರೀತಾಳೆಯ ಗರಿಗಳು/ಎಲೆಗಳು ಎಷ್ಟೇ ಸಾವಿರ ವರ್ಷಗಳಾದರೂ ಹಾಳಾಗುವುದಿಲ್ಲ, ಆದರೆ, ಮರಗಳು ಮಾತ್ರ ಅಲ್ಪಾಯುಷಿ.
ಶ್ರೀತಾಳೆ ಮರ ಸ್ತಂಭಜಾತಿಯ (ಏಕಸ್ತಂಭ/ಪಿಲ್ಲರ್ ಮಾದರಿ) ವಿಶೇಷ ವನ ಸಂಪತ್ತು. ಇಂತಹ ಮರಗಳು ಕೇರಳ, ಕೊಡಗು, ಕರಾವಳಿ ಜಿಲ್ಲೆಗಳಲ್ಲಿ ಹೇರಳವಾಗಿದ್ದವು. ಇದೀಗ ಬೆರಳೆಣಿಕೆಯಷ್ಟು ಮರಗಳು ಮಾತ್ರ ಉಳಿದುಕೊಂಡಿದೆ. ಇದಕ್ಕೆ ಸಮಾಜದಲ್ಲಿ ಬೇರು ಬಿಟ್ಟಿರುವ ಮೂಢನಂಬಿಕೆಯೇ ಮುಖ್ಯ ಕಾರಣವಾಗಿದೆ. ಶ್ರೀತಾಳೆ ಮರ ಹೂ ಬಿಟ್ಟರೆ ಮನೆ ಯಜಮಾನ ಮೃತಪಡುತ್ತಾನೆ ಎಂಬ ಮೂಢನಂಬಿಕೆಯ ಭಯದಿಂದ ಕಡಿದು ಹಾಕಲಾರಂಭಿಸಿದ ಕಾರಣ ಇವುಗಳು ವಿನಾಶದ ಅಂಚಿಗೆ ತಲುಪುವಂತಾಗಿದೆ. ಇವುಗಳನ್ನು ರಕ್ಷಿಸುವಲ್ಲಿನ ಸುನೀಲ್ ಬೋರ್ಕರ್ ಕಾರ್ಯ ಎಲ್ಲರಿಗೂ ಮಾದರಿಯಾಗಿದೆ.

ಮರ ಉಳಿಸಿದರೆ ಕೊಡುಗೆ ಕೊಡುತ್ತೇವೆ!

ಶ್ರೀತಾಳೆ ಮರದ ಕುರಿತು ಸಮಾಜ ದಲ್ಲಿರುವ ಮೌಢ್ಯವನ್ನು ಹೋಗಲಾಡಿಸಬೇಕಾಗಿದೆ. ಆತ್ರಾಡಿಯಲ್ಲಿ ಹಿರಿಯರೋರ್ವರ ಮನೆಯಲ್ಲಿ ಶ್ರೀತಾಳೆ ಮರ ಬೆಳೆದಿತ್ತು. ಈ ಮರ ಹೂವು ಬಿಟ್ಟಾಗ ಅದನ್ನು ಕಡಿಯಲು ಮುಂದಾಗಿದ್ದರು. ಆದರೆ, ಒಪ್ಪಿಕೋ ಪಚ್ಚೆವನ ಸಿರಿ ತಂಡ ಅವರ ಮನೆಗೆ ತೆರಳಿ ಈ ಕುರಿತು ಜಾಗೃತಿ ಮೂಡಿಸಿದ್ದೆವು. ಇದಾಗಿ ಕೆಲ ವರ್ಷಗಳು ಸಂದಿವೆ. ಆ ಮನೆಯ ಯಜಮಾನ ಇಂದಿಗೂ ಆರೋಗ್ಯದಿಂದ ಹೊಸ ಮನೆಯನ್ನೂ ಕಟ್ಟಿಸಿದ್ದಾರೆ. ನಾವು ಅವರಿಗೆ ಕೊಡುಗೆ ನೀಡಿದ್ದೇವೆ. ಮರ ಉಳಿಸಲು ಮುಂದಾಗುವವರಿಗೆ ಕೊಡುಗೆಯ ಪ್ರೋತ್ಸಾಹ ನೀಡಲಾಗುವುದು ಎನ್ನುತ್ತಾರೆ ಉಡುಪಿ ಒಪ್ಪಿಕೋ ಪಚ್ಚೆವನ ಸಿರಿ ಅಭಿಯಾನದ ಪ್ರೊ.ಎಸ್.ಎ. ಕೃಷ್ಣಯ್ಯ.

ಅನಂತಾಡಿ ಸಮೀಪದಲ್ಲಿ ಧರೆಗುರುಳಿತು ಶ್ರೀತಾಳೆ

ಪಾಣೆಮಂಗಳೂರು ಮತ್ತು ಬಿ.ಸಿ. ರೋಡ್ ರಾಷ್ಟ್ರೀಯ ಹೆದ್ದಾರಿ ಪರಿವರ್ತಿತ ರಾ.ಹೆ. 75ರ ಅನಂತಾಡಿ ಸಮೀಪ ಹೆದ್ದಾರಿ ಇಕ್ಕೆಲಗಳ ನಡುವೆ ಇದ್ದ ಸುಮಾರು 20 ವರ್ಷದ ಶ್ರೀತಾಳೆ ಮರ ಇಂದು ನೆಲಕಚ್ಚಿದೆ. ರಸ್ತೆ ಅಗಲೀಕರಣದ ಅಭಿವೃದ್ಧಿ ಧಾವಂತದಲ್ಲಿ ಶ್ರೀತಾಳೆ ಮರ ನೆಲಸಮಗೊಂಡಿದೆ. ಧಾರ್ಮಿಕ ಕಾರ್ಯಗಳಲ್ಲಿ ಮಹತ್ವದ ಪಾತ್ರ ವಹಿಸುವ ಶ್ರೀತಾಳೆ ಸಾಕಷ್ಟು ಔಷಧೀಯ ಗುಣಗಳನ್ನು ಹೊಂದಿದೆ. ಜತೆಗೆ, ಪ್ರಕೃತಿಯ ಸಂರಕ್ಷಣೆಯಲ್ಲಿ ಶ್ರೀತಾಳೆ ಮಹತ್ವದ ಪಾತ್ರ ವಹಿಸುತ್ತಿರುವುದನ್ನು ಇಂದಿನ ಪಾಕೃತಿಕ ವಿಕೋಪಗಳ ಸಂದರ್ಭದ ಘಟನೆಗಳು ಸ್ಪಷ್ಟಪಡಿಸಿವೆ.

‘ಭಗೀರಥ’ನ ಪ್ರಯತ್ನಕ್ಕೆ ಸಾಥ್ ನೀಡಿದ ಭಟ್ಟಾರಕ ಶ್ರೀ

ಪ್ರಾಚೀನ ಕಾಲದ ಸಾಹಿತ್ಯ ಸಂರಕ್ಷಣೆಗೆ ತನ್ನ ಗರಿಗಳ ಮೂಲಕ ಆಸರೆಯಾದ ಸಸ್ಯ ಸಂಕುಲದಲ್ಲಿನ ಅಪರೂಪವೆನಿಸಿದ ಬಹುಪಯೋಗಿ ವೃಕ್ಷ ಇತ್ತೀಚಿನ ದಿನಗಳಲ್ಲಿ ಮೌಢ್ಯಕ್ಕೆ ಬಲಿಯಾಗುತ್ತಿರುವ ಹಿನ್ನೆಲೆಯಲ್ಲಿ ಅವುಗಳ ಉಳಿವಿಗೆ ಉಡುಪಿಯ ಜೈವಿಕ ಪರಿಸರಾಸಕ್ತ ಪ್ರೊ.ಎಸ್.ಎ. ಕೃಷ್ಣಯ್ಯ ಮೌನಕ್ರಾಂತಿಯನ್ನೇ ಮಾಡುತ್ತಿದ್ದಾರೆ. ಅವರ ಈ ಭಗೀರಥ ಯತ್ನಕ್ಕೆ ಮೂಡುಬಿದಿರೆ ಶ್ರೀ ಜೈನ ಮಠದ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಅವರು ಬೀಜಾಕ್ಷತೆಯ ಹೊಸ ಪರಿಕಲ್ಪನೆಯ ಮೂಲಕ ಬೆಂಬಲಿಸಿ ಗಮನ ಸೆಳೆದಿದ್ದಾರೆ.

ಶ್ರೀತಾಳೆ ಬೆಳೆಸುವ ಆಸಕ್ತರು ಸಂಪರ್ಕಿಸಿ

ಶ್ರೀತಾಳೆ ಮರದಿಂದ ಅನಿಷ್ಟ ಉಂಟಾಗುವುದೆಂಬ ಮಾತುಗಳನ್ನು ನಂಬುವುದಿಲ್ಲ. ಅಪರೂಪವಾಗುತ್ತಿರುವ ಇಂತಹ ಮರಗಳನ್ನು ರಕ್ಷಿಸಲು ಮುಂದಾಗ ಬೇಕಿದೆ. ಶ್ರೀತಾಳೆ ಮರವನ್ನು ಬೆಳೆಸಲು ಆಸಕ್ತರು ತನ್ನನ್ನು ಫೆಬ್ರವರಿ, ಮಾರ್ಚ್ ತಿಂಗಳಲ್ಲಿ ಸಂಪರ್ಕಿಸಿ (9686914639) ಶ್ರೀತಾಳೆ ಮರದ ಬೀಜಗಳನ್ನು ಪಡೆದು ಕೊಳ್ಳಬಹುದು. ಶ್ರೀತಾಳೆ ಮರ ಉಳಿಸಲು ಪಣ ತೊಡಬೇಕಾಗಿದೆ.- ಸುನೀಲ್ ಬೋರ್ಕರ್, ಕೃಷಿಕರು

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!