ಕೆಂಪುಕೋಟೆ ಮೇಲಿಂದ ಪ್ರಧಾನಿ ಮೋದಿಯ ಪಂಚಪ್ರಾಣ ಸೂತ್ರ

 

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಅಮೃತ ಮಹೋತ್ಸವ ವರ್ಷದ ಸ್ವಾತಂತ್ರ್ಯ ದಿನಕ್ಕೆ ಪ್ರಧಾನಿ ಮೋದಿ ಧ್ವಜಾರೋಹಣ ಮಾಡಿದ್ದು ತ್ರಿವರ್ಣದ ಪಟ್ಟೆಗಳುಳ್ಳ ರುಮಾಲು, ಬಿಳಿ ಅಂಗಿ ಮೇಲೊಂದು ಜಾಕೀಟು ಹಾಕಿರುವ ಆಕರ್ಷಕ ಧಿರಿಸಿನಲ್ಲಿ. ಅದೇ ಸಂಭ್ರಮ ಕೆಂಪುಕೋಟೆ ಎದುರು ನೆರೆದವರಲ್ಲೂ ಬಣ್ಣ ಬಣ್ಣಗಳಲ್ಲಿ ವ್ಯಕ್ತವಾಗಿತ್ತು.

ಪ್ರಧಾನಿ ನರೇಂದ್ರ ಮೋದಿ ತಮ್ಮ ಮಾತುಗಳಲ್ಲಿ ಹೇಳಿದ್ದು-

  • ಮುಂದಿನ 25 ವರ್ಷಗಳಲ್ಲಿ ಭಾರತ ಬಲಶಾಲಿ ದೇಶವಾಗಿ ಹೊರಹೊಮ್ಮಬೇಕು.
  • ಹೊಸಹಾದಿಯಲ್ಲಿ ನಡೆಯುವುದಕ್ಕೆ ಮುಂದಿನ 5 ವರ್ಷಗಳಿಗಾಗಿ ನಾವು ‘ಪಂಚಪ್ರಾಣ’ವನ್ನು ಅಳವಡಿಸಿಕೊಳ್ಳಬೇಕು. ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವಾಗಿಸುವ ದೊಡ್ಡ ಸಂಕಲ್ಪ, ಗುಲಾಮಿತನದ ಎಲ್ಲ ಶೃಂಖಲೆಗಳಿಂದ ಹೊರಬರುವುದು, ನಾವು ಯಾವುದಕ್ಕೆ ವಾರಸುದಾರರಾಗಿದ್ದೇವೋ ಆ ಬಗ್ಗೆ ಹೆಮ್ಮೆ ಹೊಂದುವುದು, ಏಕತೆ, ಐದನೆಯದಾಗಿ ಪ್ರಧಾನಿ-ಮುಖ್ಯಮಂತ್ರಿಗಳೂ ಸೇರಿದಂತೆ ಎಲ್ಲ ನಾಗರೀಕರು ತಮ್ಮ ಕರ್ತವ್ಯಗಳನ್ನು ಪಾಲಿಸುವುದು.
  • ತಮ್ಮ ಭಾಷಣದ ಆರಂಭದಲ್ಲಿಯೇ ಪ್ರಧಾನಿ ಮೋದಿಯವರು ಅಂಬೇಡ್ಕರ್, ನೆಹರು, ಸಾವರ್ಕರ್, ಬುಡಕಟ್ಟು ಹೋರಾಟಗಾರರಾರದ ಬಿರ್ಸಾ ಮುಂಡಾ ಸೇರಿದಂತೆ ಹಲವು ಸ್ವಾತಂತ್ರ್ಯ ಕಲಿಗಳು ಹಾಗೂ ರಾಣಿ ಲಕ್ಷ್ಮೀಬಾಯಿ ಸೇರಿದಂತೆ ಎಲ್ಲ ಮಹಿಳಾ ಹೋರಾಟಗಾರರನ್ನು ನೆನಪಿಸಿಕೊಂಡರು.
  • ಪ್ರಜಾಪ್ರಭುತ್ವ ಮಾದರಿಗಳ ತಾಯಿ ಭಾರತ. ಸ್ವಾತಂತ್ರ್ಯ ಸಿಕ್ಕ ಪ್ರಾರಂಭದಲ್ಲಿ ಈ ದೇಶ ಕೆಲ ದಿನಗಳಲ್ಲೇ ವಿಫಲವಾಗುವುದೆಂಬ ಅನುಮಾನಗಳಿದ್ದವು. ಆದರೆ ಜನ ಅದನ್ನು ತಮ್ಮ ಸಾಮೂಹಿಕ ಯತ್ನದಿಂದ ಸುಳ್ಳಾಗಿಸಿದರು.
  • ನಮ್ಮದು ಮಹತ್ವಾಕಾಂಕ್ಷಿಗಳ ನೆಲ. ಸರ್ಕಾರದ ಕಾರ್ಯಕ್ರಮಗಳಲ್ಲಿ ಜನರೂ ಭಾಗವಹಿಸುವಿಕೆ ಬಯಸುತ್ತಾರೆ. ಇದನ್ನು ಎಲ್ಲ ಸರ್ಕಾರಗಳೂ ಅರ್ಥ ಮಾಡಿಕೊಳ್ಳಬೇಕು.
  • ಭಾರತ ಮೊದಲು ಎಂಬ ಮಂತ್ರವೇ ನಮ್ಮನ್ನು ಮುನ್ನೆಡಸಬೇಕಿದೆ.
  • ಭಾರತದಲ್ಲೇ ತಯಾರಿಸುವ ಮೂಲಕ ದೇಶವನ್ನು ಆತ್ಮನಿರ್ಭರವಾಗಿಸುವುದಕ್ಕೆ ಖಾಸಗಿ ಕಂಪನಿಗಳು ಮುಂದೆ ಬರಬೇಕು.
  • ಇವತ್ತು ಚಿಕ್ಕ ಮಗುವೂ ಆತ್ಮನಿರ್ಭರ ಭಾರತ ಎಂಬ ಘೋಷಣೆಯನ್ನು ಹೇಳುತ್ತಿದೆ.
  • ಆಟದ ಮೈದಾನದಿಂದ ಯುದ್ಧಭೂಮಿವರೆಗೆ ಮಹಿಳೆಯರು ಮುಂದೆ ಬಂದಿದ್ದಾರೆ. ಮುಂದಿನ 25 ವರ್ಷಗಳ ಭಾರತದ ಭವಿಷ್ಯ ರೂಪಿಸುವಲ್ಲಿ ಅವರ ಕೊಡುಗೆ ಗಮನಾರ್ಹವಾಗಲಿದೆ.
  • ಮಹಿಳೆಯರ ಘನತೆ ಕುಗ್ಗಿಸುವ ಏನನ್ನೂ ಮಾಡುವುದಿಲ್ಲ ಎಂಬ ಸಂಕಲ್ಪ ಎಲ್ಲರೂ ಮಾಡಬೇಕಿದೆ.
  • ಶಾಸ್ತ್ರಿಯವರ ಜೈ ಜವಾನ್-ಜೈ ಕಿಸಾನ್ ಜತೆ ವಾಜಪೇಯಿಯವರು ಜೈ ವಿಜ್ಞಾನ್ ಜೋಡಿಸಿದರು. ಇವತ್ತು ನಮ್ಮ ಯುವಜನ ಸಂಶೋಧನೆ ಮತ್ತು ಅಭಿವೃದ್ಧಿಗಳತ್ತ ಹೊರಳುತ್ತಿದ್ದಾರೆ. ಮುಂದಿನ ಆವಿಷ್ಕಾರಗಳು ಬರಲಿರುವುದು ಸಮುದ್ರದಾಳ ಮತ್ತು ಬಾಹ್ಯಾಕಾಶದಿಂದ. ಈ ನಿಟ್ಟಿನಲ್ಲಿ ನಮ್ಮ ಯುವಕರು ತಮ್ಮ ಪ್ರತಿಭೆ ತೋರುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!