ಈ ದಿನವನ್ನು ಜನ್ಮ ದಿನ ಎನ್ನುವುದಕ್ಕಿಂತ ಅಭಿವೃದ್ಧಿಯ ದಿನ ಎನ್ನುವುದು ಸೂಕ್ತ: ಚಿವ ಬಿ.ಸಿ.ಪಾಟೀಲ್

ಹೊಸದಿಗಂತ ವರದಿ, ಹಾವೇರಿ:

ಈ ದಿನವನ್ನು ಜನ್ಮ ದಿನ ಎನ್ನುದಕ್ಕಿಂತ ಅಭಿವೃದ್ಧಿ ದಿನ ಎನ್ನುವುದು ಸೂಕ್ತವಾದುದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದರು.

ಜಿಲ್ಲೆಯ ಹಿರೇಕೆರೂರ ಪಟ್ಟಣದ ತಾಲೂಕಾ ಕ್ರಿಡಾಂಗಣದಲ್ಲಿ ಅವರ ಅಭಿಮಾನಿಗಳು ಆಯೋಜಿಸಿದ್ದ ಅವರ ೬೭ನೇ ಜನ್ಮ ದಿನಾಚರಣೆಯಲ್ಲಿ ಕೇಕ್ ಕತ್ತರಿಸಿ ಮಾತನಾಡಿದ ಅವರು, ನಮಗೆ ಜನ್ಮ ನೀಡು ಸಂದರ್ಭದಲ್ಲಿ ತಾಯಿ ಅನುಭವಿಸುವ ಕಷ್ಟವನ್ನು ಯಾರೂ ಅನುಭವಿಸುವುದಿಲ್ಲ ಹೀಗಾಗಿ ನಾವೆಲ್ಲ ಜನ್ಮ ದಿನ ಎನ್ನುವುದಕ್ಕಿಂತ ಅಂದಿನ ದಿನವನ್ನು ತಾಯಿಯನ್ನು ನೆನೆಯುವ ದಿನವನ್ನಾಗಿ ಆಚರಿಸುವುದು ಸರಿಯಾದುದು ಎಂದರು.

ಅಭಿಮಾನಿಗಳು ಆಚರಿಸಿದ ಇಂತಹ ಅದ್ಧೂರಿ ಜನ್ಮ ದಿನಾಚರಣೆಯನ್ನು ಈ ಹಿಂದೆ ಎಂದಿಗೂ ನಾನು ಆಚರಿಸಿಕೊಂಡಿಲ್ಲ. ನಿಮ್ಮ ಈ ಅಭಿಮಾನದ ಋಣವನ್ನು ಇನ್ನು ನೂರು ವರ್ಷವಾದರೂ ತಿರಿಸುವುದಕ್ಕೆ ಸಾಧ್ಯವಿಲ್ಲ ಎಂದು ತಮ್ಮ ಜನ್ಮ ದಿನಕ್ಕೆ ಆಗಮಿಸಿದ ಜನಸ್ತೋಮವನ್ನು ನೋಡಿ ಭಾವುಕರಾಗಿ ಹೇಳಿದರು.

ಈ ಕ್ಷೇತ್ರದ ಅಭಿವೃದ್ಧಿಗೆ ಒಂದು ಸಾವಿರ ಕೋಟಿಗೂ ಅಧಿಕ ಅನುದಾನವನ್ನು ತರುವ ಮೂಲಕ ಈ ಕ್ಷೇತ್ರದಲ್ಲಿ ಈ ಹಿಂದೆ ಎಂದೂ ಆಗದಂತಹ ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಮೂಲಕ ಈ ಕ್ಷೇತ್ರದ ಜನತೆಗೆ ನಾನು ಮಾತುಕೊಟ್ಟಂತೆ ನಡೆದುಕೊಂಡಿರುವೆ ಎಂದು ಹೇಳಿದರು.

ತುಂಗ ಭದ್ರಾ ನದಿಯಿಂದ ಕ್ಷೇತ್ರದ ಕೆರೆಗಳನ್ನು ತುಂಬಿಸುವ ಕೆಲಸವನ್ನು ಮಾಡುವ ಮೂಲಕ ರೈತರು ತಮ್ಮ ಜಮೀನುಗಳಲ್ಲಿ ವರ್ಷ ವಿಡೀ ನೀರಾವರಿಯನ್ನು ಮಾಡುವುದಕ್ಕೆ ಸಹಕಾರಿಯಾಗುವಂತೆ ಮಾಡಿರುವೆ. ಮನೆ ಮನೆಗೆ ಶುದ್ಧ ಕುಡಿಯುವ ನೀರು ಮತ್ತು ಹಿರೇಕೆರೂರ ಪಟ್ಟಣದಲ್ಲಿ ಒಳ ಚರಂಡಿ ಯೋಜನೆಯನ್ನು ಮಾಡಲಾಗುತ್ತಿದೆ ಎಂದು ತಿಳಿಸಿದರು.

ಚಲನ ಚಿತ್ರ ನಾಯಕ ನಟ ದರ್ಶನ್ ಮಾತನಾಡಿ, ಅವರಿಗೆ ಸಿಂಪತಿ ತೋರಿಸುವುದಕ್ಕಿಂತ ನ್ಯಾಯ ಸಮ್ಮತವಾಗಿ ದೊರೆಯಬೇಕಾದುದನ್ನು ನೀಡಿದರೆ ಅವರು ಮುಂದೆ ಬರುತ್ತಾರೆ ಎಂದು ಹೇಳಿದರು.

ಬಿ.ಸಿ.ಪಾಟೀಲ ಅವರ ಪುತ್ರಿ ಸೃಷ್ಠಿ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ, ೨೦೦೩ರ ಸಂದರ್ಭದಲ್ಲಿ ರೈತರ ಪರವಾಗಿ ಹೋರಾಟ ಮಾಡಿದ ಸಂದರ್ಭದಲ್ಲಿ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ೨೧೨ ರೈತರೊಂದಿಗೆ ಅವರು ಇದ್ದವರು. ಆ ಸಂದರ್ಭದಲ್ಲಿ ಈ ಕ್ಷೇತ್ರದ ಜನತೆನೇ ನನ್ನ ತಂದೆಯವರನ್ನು ರಾಜಕಾರಣಕ್ಕೆ ಕರೆತಂದರು. ಅವರು ಪೊಲೀಸ್ ವೃತ್ತಿಯಿಂದ ಆಕಸ್ಮಿಕವಾಗಿ ರಾಜಕಾರಣಕ್ಕೆ ಬಂದವರು ನಿಮ್ಮೆಲ್ಲರ ಆಶೀರ್ವಾದ ಸದಾ ಹೀಗೆ ಇರಲಿ ಎಂದರು.

ಜಿ.ಪಂ ಮಾಜಿ ಸದಸ್ಯ ಎನ್.ಎಂ.ಈಟೇರ ಮಾತನಾಡಿ, ಬಿ.ಸಿ.ಪಾಟೀಲರು ಮಾಡಿದಂತಹ ಅಭಿವೃದ್ಧಿ ಕಾರ್ಯಗಳನ್ನು ಬೇರೆ ಯಾವ ಜನಪ್ರತಿನಿಧಿಯಿಂದಲೂ ಕಾನುವುದಕ್ಕೆ ಸಾಧ್ಯವಿಲ್ಲ. ಯುವ ಜನತೆ ದುಶ್ಚಟಗಳಿಂದ ದೂರವಿದ್ದು ಕ್ರಿಡೆಯಲ್ಲಿ ಹೆಚ್ಚಿನ ಆಸಕ್ತಿ ತೋರಿಸಲೆಂದು ಈ ಕ್ಷೇತ್ರದಲ್ಲಿ ಕ್ರೀಡೆಗಳನ್ನು ಆಯೋಜಿಸುತ್ತಿರುವರು ಎಂದು ಹೇಳಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ, ಬಿಸಿಪಿ ಅವರು ಕೃಷಿ ಸಚಿವರಾದ ನಂತರದಲ್ಲಿ ಕೃಷಿ ಇಲಾಖೆಯಲ್ಲಿ ಅಮೂಲಾಗ್ರ ಬದಲಾವಣೆಯನ್ನು ತರುವ ಮೂಲಕ ಹಾಗೂ ಕೃಷಿಕರಿಗೆ ಪ್ರಯೋಜನವಾಗುವಮತಹ ಯೋಜನೆಗಳನ್ನು ಅನಿಷ್ಠಾನಗೊಳಿಸಿದರು ಎಂದು ತಿಳಿಸಿದರು.
ಮುಖಂಡ ಎಸ್.ಎಸ್.ಪಾಟೀಲ, ಚಲನ ಚಿತ್ರ ನಿರ್ದೇಶಕ ಯೋಗರಾಜ್ ಭಟ್ ಮಾತನಾಡಿದರು, ವೇದಿಕೆಯಲ್ಲಿ ಬಿಸಿಪಿ ಅವರ ಪತ್ನಿ ವನಜಾ ಪಾಟೀಲ, ಮಾಜಿ ಶಾಸಕ ಸುರೇಶಗೌಡ ಪಾಟೀಲ, ಆರ್.ಎನ್.ಗಂಗೋಳ, ದೊಡ್ಡಗೌಡ ಪಾಟೀಲ, ಗರಡಿ ಚಿತ್ರದ ನಾಯಕನಟ ಯಶಸ್ ಸೂರಿ, ಲಿಂಗರಾಜ ಚಪ್ಪರದಹಳ್ಳಿ, ಬಾಲು ಪಾಟೀಲ, ಆನಂದಪ್ಪ ಹಾಲಮನಿ, ಪ್ರತಾಪಗೌಡ ಪಾಟೀಲ, ಸೇರಿದಂತೆ ಅನೇಕರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!