SPECIAL STORY | ಈ ದೀಪಾವಳಿಗೆ ನಿಮ್ಮ ಮನೆಯಲ್ಲೂ ಬೆಳಗಬೇಕಿದೆ ಈ ವಿಶೇಷ ‘ಚೇತನ’ದ ಹಣತೆ!!

ಮೇಘನಾ ಶೆಟ್ಟಿ, ಶಿವಮೊಗ್ಗ

ಇನ್ನೇನು ಕೆಲವೇ ದಿನಗಳಲ್ಲಿ ಬೆಳಕಿನ ಹಬ್ಬ ಬಂದೇಬಿಡುತ್ತದೆ, ದೀಪಾವಳಿ ಅಂದ್ರೆ ಮನೆಯ ಒಳಗೆ, ಹೊರಗೆ ದೀಪಗಳನ್ನು ಇಟ್ಟು ಸಂಭ್ರಮಿಸೋ ಖುಷಿ, ಇಷ್ಟದ ಪಟಾಕಿಗಳನ್ನು ಹೊಡೆದು, ಕತ್ತಲಲ್ಲೂ ಬೆಳಕು ಕಾಣೋ ಉಲ್ಲಾಸ.

ಹಣತೆಗಳಿಲ್ಲದೆ ಹಬ್ಬ ಮಾಡೋಕೆ ಸಾಧ್ಯವಾ? ದೀಪಾವಳಿಗೆ ದಿನಗಳು ಬಾಕಿ ಇರುವಂತೆಯೇ ಮಾಲ್, ಅಂಗಡಿಗಳನ್ನು ಸುತ್ತಾಡಿ ನಮ್ಮಿಷ್ಟದ ಡಿಸೈನ್, ಬಣ್ಣದ ದೀಪಗಳನ್ನು ಖರೀದಿ ಮಾಡ್ತೀವಿ. ಎಷ್ಟೇ ದುಬಾರಿಯಾಗಲಿ ದೀಪ ಇಷ್ಟವಾದ್ರೆ ಕೊಳ್ಳದೇ ಬರೋದಿಲ್ಲ.

ಆದರೆ ಈ ಬಾರಿ ನಿಮಗೆ ನಿಷ್ಕಲ್ಮಶ ಪ್ರೀತಿ ತುಂಬಿದ ದೀಪಗಳನ್ನು ಖರೀದಿ ಮಾಡೋ ಅವಕಾಶ ಇದೆ, ಯಾಕಂದ್ರೆ ಈ ದೀಪಗಳನ್ನು ತಯಾರು ಮಾಡೋದು ‘ವಿಶೇಷ ಚೇತನ’ರು.

ಹೌದು, ಮಂಗಳೂರಿನ ಸೇವಾಭಾರತಿ ಸಂಸ್ಥೆ ನಿರ್ವಹಿಸುವ ಚೇತನಾ ಬಾಲ ವಿಕಾಸ ಕೇಂದ್ರದಲ್ಲಿ ವಿಶೇಷ ಚೇತನ ವಿದ್ಯಾರ್ಥಿಗಳು ಶ್ರದ್ಧಾಭಕ್ತಿಯಿಂದ ಹಣತೆಗಳಿಗೆ ಬಣ್ಣಬಳಿದು, ವಿನ್ಯಾಸಗೊಳಿಸಿ ಸುಂದರವನ್ನಾಗಿಸಿದ್ದಾರೆ.

ಈ ಮಕ್ಕಳಿಗೆ ಯಾವ ಪ್ರೊಫೆಶನಲ್ ತರಬೇತಿ ಇಲ್ಲ, ಕಣ್ಣೆದುರು ಇರುವ ಬಣ್ಣಗಳಲ್ಲಿ ತಮಗಿಷ್ಟದ ಬಣ್ಣವನ್ನು ಆರಿಸ್ತಾರೆ, ದೀಪಗಳಿಗೆ ಬಣ್ಣ ಹಚ್ಚುತ್ತಾರೆ. ನಂತರ ಕಲರ್ ಕಾಂಬಿನೇಷನ್, ಡಿಸೈನ್ ಎಲ್ಲವನ್ನೂ ಆಲೋಚಿಸಿ ತಮಗೆ ಯಾವುದು ಇಷ್ಟವೋ ಹಾಗೆಯೇ ತಯಾರಿಸ್ತಾರೆ. ಈವರೆಗೂ ಈ ಮಕ್ಕಳು ಎರಡು ಸಾವಿರಕ್ಕೂ ಹೆಚ್ಚು ಹಣತೆಗಳನ್ನು ಅಂದಗೊಳಿಸಿದ್ದಾರೆ.

ಸ್ಥಳೀಯವಾಗಿ ತಯಾರಾದ ಮಣ್ಣಿನ ಹಣತೆಗಳನ್ನು ತಂದು ಮಕ್ಕಳಿಗೆ ನೀಡಲಾಗಿದೆ, ಮಕ್ಕಳು ತದೇಕಚಿತ್ತವಾಗಿ ಕುಳಿತು ಅವುಗಳಿಗೆ ಬಣ್ಣ ಹಚ್ಚಿ, ವಿಭಿನ್ನ ವಿನ್ಯಾಸ ಮಾಡಿ, ಅಂಗಡಿಗಳಲ್ಲಿ ಸಿಗುವ ದೀಪಗಳಿಗಿಂತ ಸುಂದರವಾಗಿ ತಯಾರಾಗಿಸಿದ್ದಾರೆ.

30 ಕ್ಕೂ ಹೆಚ್ಚು ವಿದ್ಯಾರ್ಥಿಗಳ ಪರಿಶ್ರಮದಿಂದ ತಯಾರಾದ ಈ ದೀಪಗಳನ್ನು ಸಾರ್ವಜನಿಕರು ಈಗಾಗಲೇ ಖರೀದಿ ಮಾಡ್ತಿದ್ದಾರೆ. ಒಳ್ಳೆಯ ಮನಸ್ಸಿನಿಂದ ತಯಾರಾದ ಈ ದೀಪಗಳು ಎಲ್ಲಕ್ಕಿಂತ ಶ್ರೇಷ್ಠ ಎನ್ನುವುದು ಖರೀದಿದಾರರ ಅಭಿಪ್ರಾಯವಾಗಿದೆ.

ಮಕ್ಕಳಿಗೆ ಕೆಲವೊಮ್ಮೆ ಯಾವ ಬಣ್ಣ ಹಚ್ಚಬೇಕು, ಈ ರೀತಿ ಬಣ್ಣ ಅಥವಾ ಡಿಸೈನ್ ಮಾಡಿದ್ರೆ ಚೆನ್ನಾಗಿ ಕಾಣುತ್ತದಾ ಎನ್ನುವ ಅನುಮಾನ ಮೂಡಿದಾಗಲೆಲ್ಲಾ, ಗುರುಗಳು ಹಾಜರ್ ಆಗಿಬಿಡುತ್ತಾರೆ, ಮಕ್ಕಳಿಗೆ ಸಹಾಯ ಮಾಡಿ ಕೆಲಸ ಮುಂದುವರಿಯುವಂತೆ ನೋಡಿಕೊಳ್ಳುತ್ತಾರೆ. ಗುರುಗಳ ಮಾರ್ಗದರ್ಶನದಲ್ಲಿ ದೀಪಗಳ ಮೆರುಗು ಇನ್ನಷ್ಟು ಹೆಚ್ಚಿದೆ.

ಇದು ಬರೀ ಕ್ರಿಯೇಟಿವಿಟಿ ಹಾಗೂ ಹಣದ ವಿಷಯ ಅಲ್ಲ. ಮಕ್ಕಳಿಗೆ ಈ ರೀತಿ ಕೆಲಸ ಮಾಡುವ ಕಲೆ ಕಲಿಸಿಕೊಟ್ಟರೆ ಅವರಿಗೆ ಸ್ವ ಉದ್ಯೋಗದ ಶಿಕ್ಷಣವೂ ದೊರೆಯುತ್ತದೆ. ದೀಪಗಳ ಖರೀದಿಯಿಂದ ಬಂದ ಹಣವನ್ನು ಈ ಮಕ್ಕಳ ಭವಿಷ್ಯಕ್ಕಾಗಿಯೇ ಬಳಸಲಾಗುತ್ತದೆ, ಮಕ್ಕಳಿಗೆ ಸ್ವ ಉದ್ಯೋಗದ ಬಗ್ಗೆ ತಿಳಿಸಿಕೊಡಲು ಇದಕ್ಕಿಂತ ಬೇರೆ ಪಾಠವಿಲ್ಲ ಎಂದು ಮುಖ್ಯ ಶಿಕ್ಷಕಿ ಸುಪ್ರೀತಾ ಹೇಳಿದ್ದಾರೆ.

ಎಲ್ಲಿದೆ ಈ ಚೇತನಾ ಬಾಲ ವಿಕಾಸ ಕೇಂದ್ರ?
ಮಂಗಳೂರಿನ ಸೇವಾಭಾರತಿ ಸಂಸ್ಥೆ ನಿರ್ವಹಿಸುವ ಈ ಚೇತನಾ ಬಾಲ ವಿಕಾಸ ಕೇಂದ್ರವು ಮಂಗಳೂರು ನಗರದ ಕೊಡಿಯಾಲ್‌ಬೈಲ್‌ನ ವಿ.ಟಿ. ರಸ್ತೆಯಲ್ಲಿದೆ.

ನಿಮ್ಮ ಮಕ್ಕಳು ಮೊದಲ ಬಾರಿಗೆ ಬಿಡಿಸಿದ ಚಿತ್ರ ಹೇಗೇ ಇದ್ದರೂ ನಿಮ್ಮ ಪಾಲಿಗೆ ಅದು ಅತ್ಯಂತ ಅದ್ಭುತ ಚಿತ್ರವಾಗಿ ಕಾಣಿಸುತ್ತದೆ, ಅದೇ ರೀತಿ ಈ ಮಕ್ಕಳು ನಿಷ್ಕಲ್ಮಶವಾಗಿ ತಯಾರಿಸಿದ ಈ ದೀಪಗಳನ್ನು ಆಸಕ್ತಿಯಿದ್ದಲ್ಲಿ ಬಂದು ಖರೀದಿ ಮಾಡಬಹುದಾಗಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!