Monday, October 2, 2023

Latest Posts

ಜೀರ್ಣೋದ್ಧಾರದ ನಿರೀಕ್ಷೆಯಲ್ಲಿದೆ ನಾಡಿನ ಈ ಐತಿಹಾಸಿಕ ದೇಗುಲ

ಮಂಜುನಾಥ ಹೂಡೇಂ

ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಗುಣಸಾಗರದ ಶ್ರೀಕೃಷ್ಣದೇವಾಲಯ ನಾಡಿನ ಐತಿಹಾಸಿಕ ಪ್ರೇಕ್ಷಣೀಯ ತಾಣಗಳಲ್ಲೊಂದು. ಶ್ರೇಷ್ಠ ಶಿಲ್ಪಿ ಜಕಣಾಚಾರಿ ನಿರ್ಮಿಸದನೆಂದು ಹೇಳಲಾದ ಈ ಪುರಾತನ ದೇವಾಲಯ ಸದ್ಯ ಜೀರ್ಣೋದ್ಧಾರದ ನಿರೀಕ್ಷೆಯಲ್ಲಿದೆ.

ವಿಜಯನಗರ ಅರಸರ ಕಾಲದ ಈ ದೇವಾಲಯ ಏಕಶಿಲೆಯ ವೇಣುಗೋಪಾಲನ ಸುಂದರ ಮೂರ್ತಿ ಹೊಂದಿದೆ. ನಾಡಿನ ಈ ಪ್ರಮುಖ ಐತಿಹಾಸಿಕ ತಾಣ ಅಭಿವೃದ್ಧಿ ಕಾಣದೆ ಅವನತಿಯತ್ತ ಸಾಗುತ್ತಿರುವುದು ವಿಷಾದಕರ. ತಾಲೂಕು ಕೇಂದ್ರದಿಂದ 25 ಕಿ.ಮಿ. ಅಂತರದಲ್ಲಿರುವ ಈ ದೇವಾಲಯದಲ್ಲಿ ಕೊಳಲನೂದುತ್ತ ನಿಂತಿರುವ ಕಪ್ಪು ಶಿಲೆಯ ವೇಣುಗೋಪಾಲ ಮೂರ್ತಿಯೇ ಇಲ್ಲಿನ ಪ್ರಮುಖ ಆಕರ್ಷಣೆ.

ಗುಣಸಾಗರ ಎಂಬ ಹೆಸರು ಬಂದಿದ್ದು ಹೀಗೆ : 

ಗುಣಸಾಗರ ಎಂಬ ಹೆಸರಿನ ಕುರಿತು ಸ್ಥಳೀಯರೇ ಹೇಳುವಂತೆ, ಹಿಂದೊಮ್ಮೆ ಮತಿವಂತಿ, ಗುಣವಂತಿ ಎಂಬ ಸಹೋದರಿಯರು ಕೆರೆಗಳನ್ನು ಕಟ್ಟಿಸಿದರಂತೆ. ಗುಣವಂತಿ ಕಟ್ಟಿಸಿದ ಕೆರೆಗೆ ನೀರು ತುಂಬಿ, ಎಲ್ಲರಿಗೂ ಉಪಯುಕ್ತವಾಯಿತು. ಅದಕ್ಕಾಗಿ ಗುಣವಂತಿಯಿಂದ ಗುಣಸಾಗರ ಎಂಬ ಹೆಸರು ಬಂತೆಂಬ ಮಾತಿದೆ. ಗ್ರಾಮದ ಪಕ್ಕದಲ್ಲಿ ಕೆರೆ ಇರುವುದರಿಂದ ಗೌಣ ಎಂದರೆ ಸಣ್ಣದು, ಗೌಣ- ಸಾಗರ ಗುಣಸಾಗರವಾಗಿರಬಹುದೆಂದು ಇತಿಹಾಸ ತಜ್ಞ ಎಸ್.ಎಂ.ನಾಗಭೂಷಣ್ ಅಭಿಪ್ರಾಯಪಡುತ್ತಾರೆ.

ಬಾಲಕೃಷ್ಣನ ಲೀಲೆಗಳ ಕೆತ್ತನೆ : 

ದೇವಸ್ಥಾನದ ನಿರ್ಮಾಣ 12ನೇ ಶತಮಾನದಲ್ಲಾಗಿರಬಹುದು, ಮುಂದೆ ದೇವಸ್ಥಾನ ವಿಜಯನಗರ ಅರಸರ ಕಾಲದಲ್ಲಿ ಪಾಳೆಗಾರರಿಂದ ಪುನರುಜ್ಜೀವನ ಕಂಡಿದೆ. ಗರ್ಭಗುಡಿಯ ಹೊರಭಾಗದ ನವರಂಗದಲ್ಲಿನ ಚೌಕಾಕಾರದ ಕಂಬಗಳ ಮೇಲೆ ರಾಮ, ಲಕ್ಷ್ಮಣ, ಸೀತೆ, ಹನುಮಂತ, ನಾಗ, ಮತ್ಸ್ಯ, ಬಾಲಕೃಷ್ಣನ ಲೀಲೆಗಳ ಉಬ್ಬು ಕೆತ್ತನೆಗಳಿವೆ.

ಸಂಶೋಧನೆ ನಡೆಸಿದರೆ ಹೊಸ ಸಂಗತಿ ಅನ್ವೇಷಿಸಬಹುದು:

ಪ್ರಸ್ತುತ ದೇವಸ್ಥಾನದ ಸುತ್ತಲೂ ಶಿಥಿಲಾವಸ್ಥೆಗೊಂಡು ಬಿದ್ದಿರುವ ಕಂಬಗಳ, ಬೋದಿಗೆಗಳ ಅವಶೇಷಗಳಿವೆ. ಅನೇಕ ವೈಶಿಷ್ಟ್ಯತೆಗಳಿರುವ ಈ ದೇವಾಲಯದಲ್ಲಿ ಇನ್ನೂ ಹೆಚ್ಚಿನ ಸಂಶೋಧನೆ ನಡೆಸಿದರೆ ಹೊಸ ಸಂಗತಿಗಳನ್ನು ಅನ್ವೇಷಿಸಬಹುದು. ಕಂದಾಯ, ಧಾರ್ಮಿಕ ದತ್ತಿ, ಪುರಾತತ್ವ ಹಾಗೂ ಪ್ರವಾಸೋದ್ಯಮ ಇಲಾಖೆ ದೇವಸ್ಥಾನದ ಕುರಿತು ಆಸಕ್ತಿ ಹಾಗೂ ಕಾಳಜಿವಹಿಸಿ ಜೀರ್ಣೋದ್ಧಾರ ಮಾಡಬೇಕೆಂದು ಇತಿಹಾಸಕಾರರ ಹಾಗೂ ಸ್ಥಳೀಯರ ಕಳಕಳಿಯಾಗಿದೆ.

ಸ್ಥಳೀಯರೇನು ಹೇಳ್ತಾರೆ? 

12ನೇ ಶತಮಾನದಲ್ಲಿ ನಿರ್ಮಿಸಿದ ಈ ದೇವಸ್ಥಾನ, ಶ್ರೀ ಕೃಷ್ಣ ಮೂರ್ತಿಯು ಚೋಳರ ಕಾಲದ ವಾಸ್ತುಶಿಲ್ಪವನ್ನು ಹೋಲುತ್ತದೆ. ಪ್ರವಾಸೋದ್ಯಮ ಇಲಾಖೆ ಎಚ್ಚೆತ್ತುಕೊಂಡು ಈ ಪ್ರದೇಶವನ್ನು ಪ್ರವಾಸಿ ತಾಣವಾಗಿ ರೂಪಿಸಬೇಕು ಎಂದು ಸ್ಥಳೀಯ ನಿವಾಸಿ ನಾಗಭೂಷಣ್ ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!