ಇದು ಸೌದಿ ಅಚ್ಚರಿ- ರಂಜಾನ್‌ಗೆ ಇಫ್ತಾರ್‌, ಲೌಡ್‌ ಸ್ಪೀಕರ್‌ ಇಲ್ಲ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಪವಿತ್ರ ರಂಜಾನ್‌ ಹಬ್ಬದ ಆಚರಣೆಯ ಕುರಿತು ಇಸ್ಲಾಮಿನ ಜನ್ಮಸ್ಥಾನವಾದ ಸೌದಿ ಅರೇಬಿಯಾ ತೆಗೆದುಕೊಂಡಿರುವ ನಿರ್ಧಾರವು ಈಗ ಅಚ್ಚರಿ ಮೂಡಿಸುವಂತಿದೆ. ಇಸ್ಲಾಮಿನ ಪವಿತ್ರ ಹಬ್ಬಗಳಲ್ಲೊಂದಾದ ರಂಜಾನ್‌ ಹಬ್ಬದ ಆಚರಣೆಯ ಮೇಲೆ ಸೌದಿ ಅರೇಬಿಯಾ ಆಡಳಿತ ಕೆಲ ನಿಯಮಗಳು ಹಾಗು ನಿರ್ಬಂಧಗಳನ್ನು ವಿಧಿಸಿದೆ. ಈ ಬಾರಿ ಸೌದಿಯ ರಂಜಾನ್‌ ಆಚರಣೆಯ ವೇಳೆ ಧ್ವನಿವರ್ಧಕಗಳನ್ನು ನಿರ್ಬಂಧಿಸಲಾಗಿದ್ದು ಐಡಿಪ್ರೂಫ್‌ ಇಲ್ಲದೇ ಇತಿಕಾಫ್‌ ಗೆ ಅನುಮತಿಯನ್ನು ನಿರಾಕರಿಸಲಾಗಿದೆ. ಹಾಗು ಮಸೀದಿಗಳಲ್ಲಿ ಇಫ್ತಿಕಾರ್‌ ಕೂಟಗಳು ಇರುವುದಿಲ್ಲ ಎನ್ನಲಾಗಿದೆ.

ಈ ಕುರಿತು ಸೌದಿ ಅರೇಬಿಯಾದ ಇಸ್ಲಾಮಿಕ್ ವ್ಯವಹಾರಗಳು, ದಾವಾ ಮತ್ತು ಮಾರ್ಗದರ್ಶನದ ಸಚಿವ ಶೇಖ್ ಡಾ ಅಬ್ದುಲ್ಲತೀಫ್ ಬಿನ್ ಅಬ್ದುಲಜೀಜ್ ಅಲ್-ಅಲ್ಶೇಖ್ 10 ಅಂಶಗಳ ನಿರ್ದೇಶನಗಳನ್ನು ಪ್ರಕಟಿಸಿದ್ದು ಹಲವು ನಿರ್ಬಂಧಗಳನ್ನು ಘೋಷಿಸಿದ್ದಾರೆ. ಮಸೀದಿಗಳಲ್ಲಿ ಧ್ವನಿವರ್ಧಕಗಳ ಬಳಕೆಯ ಮೇಲಿನ ನಿರ್ಬಂಧವು ಅವುಗಳಲ್ಲೊಂದಾಗಿದ್ದು ಪ್ರಾರ್ಥನೆಯ ಕರೆಯ ಪರಿಮಾಣ ಮತ್ತು ಆವರ್ತನವನ್ನು ಸೀಮಿತಗೊಳಿಸಲಾಗಿದೆ. ಪ್ರಾರ್ಥನೆಗಳನ್ನು ರೆಕಾರ್ಡಿಂಗ್ ಅಥವಾ ಪ್ರಸಾರ ಮಾಡುವುದನ್ನು ಸರ್ಕಾರ ನಿಷೇಧಿಸಿದೆ. ಜೊತೆಗೆ ಆದಷ್ಟು ಕಡಿಮೆ ಸಮಯದಲ್ಲಿ ಪ್ರಾರ್ಥನೆಗಳನ್ನು ಮುಗಿಸುವಂತೆ ನಿರ್ದೇಶಿಸಲಾಗಿದೆ.

ಅಲ್ಲದೇ ಹಬ್ಬದ ಸಂದರ್ಭದಲ್ಲಿ ಮಸೀದಿಗಳಿಗೆ ಮಕ್ಕಳನ್ನು ಕರೆತರದಂತೆಯೂ ಸರ್ಕಾರವು ವಿನಂತಿಸಿದೆ. ಮಕ್ಕಳಿಂದ ಪ್ರಾರ್ಥಕರಿಗೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ಈ ನಿರ್ಧಾರ ಮಾಡಲಾಗಿದೆ. ಜೊತೆಗೆ ಆಚರಣೆಯ ಸಮಯದಲ್ಲಿ ಮಸೀದಿಯಲ್ಲಿ ಕ್ಯಾಮರಾ ರೆಕಾರ್ಡಿಂಗ್‌ ಅಥವಾ ಮಾಧ್ಯಮಗಳಲ್ಲಿ ಪ್ರಸಾರ ಮಾಡುವದುನ್ನೂ ನಿಷೇಧಿಸಲಾಗಿದೆ. ಜೊತೆಗೆ ಉಪವಾಸ ಮಾಡುವವರಿಗೆ ಇಫ್ತಾರ್‌ ಕೂಟವನ್ನು ಆಯೋಜಿಸಲು ದೇಣಿಗೆ ಸಂಗ್ರಹಿಸುವುದರ ಮೇಲೂ ನಿರ್ಭಂಧಗಳನ್ನು ವಿಧಿಸಲಾಗಿದೆ.

ಇಫ್ತಾರ್‌ ಕೂಟಗಳನ್ನು ಆಯೋಜಿಸುವುದನ್ನು ನಿರ್ಬಂಧಿಸಿದ್ದು ಜಗತ್ತಿನೆಲ್ಲೆಡೆ ಕೋವಿಡ್‌ ಭೀತಿ ಇನ್ನೂ ಇರುವುದರಿಂದ ಈ ಕ್ರಮ ಎಂದು ಸರ್ಕಾರ ಹೇಳಿದೆ. ಒಂದು ವೇಳೆ ಆಯೋಜಿಸುವುದಾದರೂ ಮಸೀದಿಯ ಒಳಗಡೆ ಆಯೋಜಿಸಬಾರದು ಎಂದು ಸರ್ಕಾರ ತಾಕೀತು ಮಾಡಿದ್ದು ಅದಕ್ಕೆಂದೇ ಮೀಸಲಿರುವ ಅಂಗಳದಲ್ಲಿ ಮಾತ್ರವೇ ಆಯೋಜಿಸಬೇಕು. ಇಮಾಮ್‌ ಮತ್ತು ಮುಝಿನ್ ಇದರ ಜವಬ್ದಾರಿ ವಹಿಸಿಕೊಳ್ಳಬೇಕು, ಇಫ್ತಾರ್ ಮುಗಿಸಿದ ತಕ್ಷಣ ಸ್ಥಳವನ್ನು ಸ್ವಚ್ಛಗೊಳಿಸಬೇಕು ಎಂದು ಸರ್ಕಾರ ನಿರ್ದೇಶಿಸಿದ್ದು ಉಪವಾಸಮಾಡುವವರಿಗೆ ಯಾವುದೇ ರೀತಿಯ ತಾತ್ಕಾಲಿಕ ಡೇರೆಗಳನ್ನು ನಿರ್ಮಿಸಬಾರದು ಎಂದೂ ನಿರ್ದೇಶನ ನೀಡಲಾಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!