ಇದು ದಿಕ್ಸೂಚಿ ಅಲ್ಲ, ದಿಕ್ಕು ತಪ್ಪಿದ ಸರ್ಕಾರ: ಮಾಜಿ ಸಿಎಂ ಬೊಮ್ಮಾಯಿ ಆಕ್ರೋಶ

ಹೊಸದಿಗಂತ ವರದಿ ಬೆಂಗಳೂರು:

ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯರ ನೇತೃತ್ವದ ನೂತನ ಕಾಂಗ್ರೆಸ್ ಸರಕಾರವು 5 ವರ್ಷಗಳ ದಿಕ್ಸೂಚಿ ಆಗಬೇಕಿತ್ತು. ಆದರೆ, ಅದು ದಿಕ್ಕು ತಪ್ಪಿದ ಸರಕಾರವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆಕ್ಷೇಪಿಸಿದರು.

ನಗರದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಣಕಾಸಿನ ವ್ಯವಸ್ಥೆಯನ್ನು ಹಳಿ ತಪ್ಪಿಸಿದ್ದಾರೆ. ನಾವು ಫೆಬ್ರವರಿಯಲ್ಲಿ ಮಿಗತೆ ಬಜೆಟ್ ಕೊಟ್ಟಿದ್ದೆವು. ಆದರೆ, ಇವರು ಬಂದ ಬಳಿಕ 8 ಸಾವಿರ ಕೋಟಿಗೂ ಹೆಚ್ಚು ಸಾಲ ಮಾಡಿದ್ದಾರೆ. ಸುಮಾರು 35 ಸಾವಿರ ಕೋಟಿ ಅಧಿಕ ತೆರಿಗೆ ವಿಧಿಸಿದ್ದಾರೆ ಎಂದು ಟೀಕಿಸಿದರು. ಮೋಟಾರು ವಾಹನ ತೆರಿಗೆ, ಅಬಕಾರಿ ಸುಂಕ ಹೆಚ್ಚಳ ಮೊದಲಾದವು ಇದ್ದರೂ 12 ಸಾವಿರ ಕೋಟಿ ರೂ. ಕೊರತೆ ಬಜೆಟ್ ನೀಡಿದ್ದಾರೆ ಎಂದರು.

ಕೋವಿಡ್ ವೇಳೆ 14 ಸಾವಿರ ಕೋಟಿ ಕೊರತೆ ಇದ್ದುದನ್ನು ನಾವು ಸರಿದೂಗಿಸಿ ಮಿಗತೆ ಬಜೆಟ್ ಮಂಡಿಸಿದ್ದೇವೆ. ಇವರು ಕೋವಿಡ್ ಇಲ್ಲದಿದ್ದರೂ ಮತ್ತೆ ಕೋವಿಡ್ ಸ್ಥಿತಿಗೆ ಹಣಕಾಸಿನ ಸ್ಥಿತಿಯನ್ನು ತೆಗೆದುಕೊಂಡು ಹೋಗಿದ್ದಾರೆ ಎಂದರು. ಸರಕಾರಿ ನೌಕರರ ವೇತನ ವಿಳಂಬವಾಗುತ್ತಿದೆ. ಇವರು ಅಧಿಕಾರಕ್ಕೆ ಬಂದ ಬಳಿಕ ಒಂದು ಕಿಮೀ ರಸ್ತೆಯನ್ನೂ ಮಾಡಿಲ್ಲ ಎಂದು ಆರೋಪಿಸಿದರು.

ಬರಗಾಲ ಬಂದಾಗ ರೈತರಿಗೆ ಕನಿಷ್ಠ ಸಹಾಯ ಮಾಡಿಲ್ಲ. 2 ಬಾರಿ ಬಿತ್ತನೆ ಮಾಡಿ ಬೀಜ ಗೊಬ್ಬರ ಹಾಕಿ ರೈತರು ಕಂಗಾಲಾಗಿದ್ದಾರೆ. ಸಾಲವೂ ಸಕಾಲದಲ್ಲಿ ಸಿಗುತ್ತಿಲ್ಲ ಎಂದರು. ನಾಲ್ಕು ದಿಕ್ಕಿನಲ್ಲಿ ಗಮನಿಸಿದರೂ ಸರಕಾರ ವಿಫಲವಾಗಿದೆ. ಗೊಂದಲಗಳಲ್ಲಿ ಅದು ಸಿಲುಕಿ ಹಾಕಿಕೊಂಡಿದೆ. ಇದರ ಒಟ್ಟು ಪರಿಣಾಮವೆಂಬಂತೆ ಜನರಿಗೆ ಕೊಟ್ಟ ಮಾತಿಗೆ ಅದು ತಪ್ಪಿ ನಡೆದಿದೆ ಎಂದರು.

ರೈತರ ಆತ್ಮಹತ್ಯೆ ನಡೆದಿದ್ದರೂ ತಿರುಗಿ ನೋಡುತ್ತಿಲ್ಲ…
ಕಳೆದ 2 ತಿಂಗಳಿನಲ್ಲಿ 50ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಿದ್ದರಾಮಯ್ಯರ ಸರಕಾರದ 2013-18ರ ನಡುವಿನ ಅಧಿಕಾರಾವಧಿಯಲ್ಲಿ ಭಾರತದಲ್ಲಿ ಅತಿ ಹೆಚ್ಚು ಅಂದರೆ 4,500 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ಅದು ನಮ್ಮ ಅಧಿಕಾರದ ಅವಧಿಯಲ್ಲಿ ನಿಂತು ಹೋಗಿತ್ತು. ಈಗ ಮತ್ತೆ ರೈತರ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಆತ್ಮಹತ್ಯೆ ನಡೆದಿದ್ದರೂ ತಿರುಗಿ ನೋಡುತ್ತಿಲ್ಲ ಎಂದು ಬಸವರಾಜ ಬೊಮ್ಮಾಯಿಯವರು ಆಕ್ಷೇಪಿಸಿದರು.
ರೈತರ ಸಾಲ ವಸೂಲಿ ನಿಲ್ಲಿಸಿ. ಹೊಸ ಸಾಲ, ಬೀಜ- ಗೊಬ್ಬರಕ್ಕೆ ಹೊಸ ಅನುದಾನ ನೀಡುವ ಮೂಲಕ ಆತ್ಮಹತ್ಯೆ ಮಾಡಿಕೊಳ್ಳದಂತೆ ನೋಡಿಕೊಳ್ಳಿ ಎಂದು ಅವರು ಕಿವಿಮಾತು ಹೇಳಿದರು.

ಕೃಷಿ ಇಲಾಖೆಯಲ್ಲಿ ಟ್ರಾನ್ಸ್‌ಫರ್ ಸುಗ್ಗಿ :
ಕೃಷಿ ಇಲಾಖೆಯಲ್ಲಿ ಇನ್ನೂ ಟ್ರಾನ್ಸ್‌ಫರ್ ಸುಗ್ಗಿ ನಡೆದಿದೆ. ಪಿಡಬ್ಲುಡಿ ಸೇರಿ ಎಲ್ಲ ಇಲಾಖೆಯಲ್ಲಿ ವರ್ಗಾವಣೆಯದೇ ಸುಗ್ಗಿ ನಡೆದಿದೆ. ರೈತ ವಿದ್ಯಾನಿಧಿ, ಭೂಸಿರಿ, ಜೀವನ ಜ್ಯೋತಿ ರೈತರ ವಿಮೆ ಸೇರಿ ನಮ್ಮ ಕಾಲದ ರೈತರ ಕಾರ್ಯಕ್ರಮಗಳು ಸ್ಥಗಿತಗೊಂಡಿವೆ ಎಂದು ಬೇಸರ ವ್ಯಕ್ತಪಡಿಸಿದರು. ರೈತರ ಆದಾಯ ಹೆಚ್ಚಳ ಕಾರ್ಯಕ್ರಮಗಳು ನಿಂತಿವೆ ಎಂದು ತಿಳಿಸಿದರು. ಈ ಸರಕಾರ ರೈತವಿರೋಧಿಯಾಗಿದೆ ಎಂದು ಟೀಕಿಸಿದರು.
ನಾವು ಆರಂಭಿಸಿದ 100 ಅಂಬೇಡ್ಕರ್ ಹಾಸ್ಟೆಲ್‍ಗಳಿಗೆ ಅನುದಾನ ಕೊಟ್ಟಿಲ್ಲ. 50 ಕನಕದಾಸ ಹಾಸ್ಟೆಲ್‍ಗೆ ಅನುದಾನ ಬಿಡುಗಡೆಗೊಳಿಸಿಲ್ಲ. 5 ಮೆಗಾ ಹಾಸ್ಟೆಲ್ ಮಂಜೂರು ಮಾಡಿದ್ದು, ಅನುದಾನ ಸಿಕ್ಕಿಲ್ಲ. ನಾವು ನಿರ್ಮಿಸಿದ 8 ಸಾವಿರ ಶಾಲಾ ಕೊಠಡಿಗೆ ಹಣಕಾಸು ಬಿಡುಗಡೆ ಮಾಡಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಶಿಕ್ಷಣ, ಆರೋಗ್ಯ, ಕೃಷಿ, ಹಿಂದುಳಿದ ವರ್ಗ, ಮಹಿಳೆಯರ ಆರ್ಥಿಕ ಸಂಕಷ್ಟ ನಿವಾರಿಸುವ ಯೋಜನೆಗಳನ್ನು ಕಡೆಗಣಿಸಲಾಗಿದೆ. ರಾಜ್ಯದ ಅಭಿವೃದ್ಧಿ ಸಂಪೂರ್ಣ ಸ್ತಬ್ದವಾಗಿದೆ ಎಂದ ಅವರು, ಹಗಲುದರೋಡೆ ರೀತಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಮಂತ್ರಿಗಳ ಮಧ್ಯೆ ಗಲಾಟೆ, ಮಂತ್ರಿಗಳು- ಸಿಎಂ ಕಚೇರಿ ಮಧ್ಯೆ ಭ್ರಷ್ಟಾಚಾರದ ವಿಚಾರಕ್ಕೆ ಸಂಬಂಧಿಸಿ ಗಲಾಟೆ ನಡೆದಿದೆ ಎಂದು ವಿವರಿಸಿದರು.

ಪ್ರಮುಖ ಹುದ್ದೆಗಳ ಹರಾಜು
ಬೆಂಗಳೂರು ಗ್ರಾಮಾಂತರ ಡಿ.ಸಿ, ಅಸಿಸ್ಟೆಂಟ್ ಕಮೀಷನರ್ ಹುದ್ದೆಗೆ ಸಂಬಂಧಿಸಿ ದೊಡ್ಡ ಪೈಪೋಟಿ, ಹರಾಜು ನಡೆದಿದೆ. ಈ ಥರ ಪ್ರಮುಖವಾದ ಎಲ್ಲ ಹುದ್ದೆಗೆ ಹರಾಜು ಮೂಲಕ ಟ್ರಾನ್ಸ್‍ಫರ್ ನಡೆದಿದೆ. ಬೆಂಗಳೂರು ಎ.ಸಿ. ದರ 13.5 ಕೋಟಿ ಆಗಿದೆಯಂತೆ. ಭಯ ಭೀತಿ ಇಲ್ಲದೆ ಭ್ರಷ್ಟಾಚಾರ ನಡೆದಿದೆ. ಪ್ರಶ್ನಿಸಿದರೆ ಕೇಸು ಹಾಕುತ್ತಾರೆ ಎಂದು ಬಸವರಾಜ ಬೊಮ್ಮಾಯಿ ನುಡಿದರು. ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಸಂಸದ ನಳಿನ್‍ಕುಮಾರ್ ಕಟೀಲ್, ಮಾಜಿ ಸಚಿವ ಗೋವಿಂದ ಕಾರಜೋಳ ಅವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!