ಹೊಸದಿಗಂತ ವರದಿ ಕಲಬುರಗಿ:
ಬಿಡದಿ ಟೌನ್‌ಶಿಪ್ ಯೋಜನೆಯ ಹೆಸರಿನಲ್ಲಿ ರಾಜ್ಯ ಸರ್ಕಾರ ರೈತರ ಭಾವನೆಗಳ ಜೊತೆ ಚೆಲ್ಲಾಟವಾಡುತ್ತಿದೆ.ಅವರ ಎದೆಯ ಮೇಲೆ ಮರಣ ಶಾಸನ ಬರೆಯುತ್ತಿದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸರ್ಕಾರದ ವಿರುದ್ಧ ಕಿಡಿಕಾರಿದರು.
ಕಲಬುರಗಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಪ್ರತಿಷ್ಠೆಯನ್ನು ಬಿಟ್ಟು ರೈತರ ನಿಜವಾದ ಸಂಕಷ್ಟವನ್ನು ಕೇಳುವ ಕೆಲಸವನ್ನು ಸರ್ಕಾರ ಮಾಡಬೇಕು ಎಂದು ಒತ್ತಾಯಿಸಿದರು.
ಕಡಿಮೆ ಜಮೀನು ಹೊಂದಿರುವ ರೈತರು ಅಲ್ಲಿ ಹೈನುಗಾರಿಕೆ, ತೋಟಗಾರಿಕೆ ಮಾಡಿ ಬದುಕುತ್ತಿದ್ದಾರೆ. ಆದರೆ ಲಕ್ಷಾಂತರ ಗಿಡ ಮರಗಳನ್ನು ಕಡಿದು ಸರ್ಕಾರ ಪರಿಸರ ಹಾನಿ ಮಾಡುತ್ತಿದೆ. ಇದು ಅಭಿವೃದ್ಧಿಯಲ್ಲ, ಇದು ವಿನಾಶ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಈಗಾಗಲೇ ಬಿಡದಿ ಭಾಗದಲ್ಲಿ ಪಕ್ಷದ ವತಿಯಿಂದ ಪಾದಯಾತ್ರೆ ಮಾಡಲಾಗಿದೆ. ಬಿಡದಿ ಟೌನ್‌ಶಿಪ್‌ಗೆ ರೈತರ ಒಪ್ಪಿಗೆ ಇದ್ದರೆ ಮುಂದುವರಿಸಲಿ. ಆದರೆ ರೈತರ ವಿರೋಧವಿದ್ದರೆ ಇದನ್ನು ಕೂಡಲೇ ಬಿಟ್ಟುಬಿಡಿ ಎಂದು ಸರ್ಕಾರಕ್ಕೆ ಖಡಕ್ ಎಚ್ಚರಿಕೆ ನೀಡಿದರು.
ಇದನ್ನೂ ಓದಿ:
ರೈತರ ಒಪ್ಪಿಗೆ ಇಲ್ಲದೇ, ಯಾವುದೇ ಮಾಹಿತಿ ನೀಡದೆ ಜೆಎಂಸಿ ಸರ್ವೇ ಮಾಡಲು ಹೊರಟಿರುವುದನ್ನು ತೀವ್ರವಾಗಿ ಖಂಡಿಸುತ್ತೇನೆ. ರೈತರ ಭಾವನೆಗಳನ್ನು ಅರ್ಥ ಮಾಡಿಕೊಳ್ಳಲು ವಿಫಲವಾಗಿರುವ ಸರ್ಕಾರ, ಏನಾದರೂ ಮಾಡಿ ಈ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಹೊರಟಿರುವುದು ದುರ್ದೈವದ ಸಂಗತಿ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಈ ಕೂಡಲೇ ಸರ್ಕಾರವು ವಶಕ್ಕೆ ಪಡೆದಿರುವ ರೈತರನ್ನು ಬಿಡುಗಡೆ ಮಾಡಬೇಕು. ರೈತ ವಿರೋಧಿ ಬಿಡದಿ ಟೌನ್‌ಶಿಪ್ ಯೋಜನೆಯನ್ನು ಸಂಪೂರ್ಣವಾಗಿ ಕೈಬಿಡಬೇಕು. ಅನ್ನದಾತರ ಹಕ್ಕು ಮತ್ತು ಬದುಕಿನ ರಕ್ಷಣೆಗೆ ನಾವು ಸದಾ ರೈತರೊಂದಿಗೆ ದೃಢವಾಗಿ ನಿಲ್ಲುತ್ತೇವೆ ಎಂದು ನಿಖಿಲ್ ಕುಮಾರಸ್ವಾಮಿ ಸ್ಪಷ್ಟಪಡಿಸಿದರು.



