ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳು ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ಸಿಇಒ ಕಾವ್ಯಾ ಮಾರನ್ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
ನವೆಂಬರ್‌ನಲ್ಲಿ ವಿವಾಹ ನಡೆಯಬಹುದು ಎಂಬ ವದಂತಿಗಳು ಹರಿದಾಡುತ್ತಿದ್ದರೂ, ಈ ಬಗ್ಗೆ ಇಬ್ಬರ ಕುಟುಂಬಗಳಿಂದಲೂ ಯಾವುದೇ ಅಧಿಕೃತ ಮಾಹಿತಿ ಹೊರಬಂದಿಲ್ಲ. ಹೀಗಾಗಿ ಈ ಸುದ್ದಿ ಸದ್ಯಕ್ಕೆ ಊಹಾಪೋಹಗಳ ಮಟ್ಟದಲ್ಲೇ ಉಳಿದಿದ್ದು, ಅಭಿಮಾನಿಗಳ ಕುತೂಹಲ ಮಾತ್ರ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.
ವದಂತಿಗೆ ವೇಗ ತಂದಿದ್ದು ಏನು?
ಅನಿರುದ್ಧ್ ಮತ್ತು ಕಾವ್ಯಾ ನಡುವಿನ ಆತ್ಮೀಯತೆಯ ಬಗ್ಗೆ ಈ ಹಿಂದೆಯೂ ಹಲವು ಬಾರಿ ಸುದ್ದಿಗಳು ಹರಿದಾಡಿದ್ದವು. ಆದರೆ ಈ ಬಾರಿ ಮದುವೆಯ ದಿನಾಂಕದವರೆಗೂ ಚರ್ಚೆಯಾಗುತ್ತಿರುವುದು ಸುದ್ದಿಗೆ ಹೊಸ ತಿರುವು ನೀಡಿದೆ. ಹಿರಿಯ ನಟ ಹಾಗೂ ಅನಿರುದ್ಧ್ ಅವರ ಸಂಬಂಧಿ ವೈ.ಜಿ. ಮಹೇಂದ್ರನ್ ಇತ್ತೀಚಿನ ಸಂದರ್ಶನವೊಂದರಲ್ಲಿ ಈ ಜೋಡಿ ಉತ್ತಮ ಜೋಡಿಯಾಗಬಹುದು ಎಂಬ ಅಭಿಪ್ರಾಯ ವ್ಯಕ್ತಪಡಿಸಿರುವುದು ವದಂತಿಗೆ ಮತ್ತಷ್ಟು ಬಲ ನೀಡಿದೆ ಎನ್ನಲಾಗುತ್ತಿದೆ.
ಚಿತ್ರರಂಗದಲ್ಲಿ ಕೇಳಿಬರುತ್ತಿರುವ ಮಾಹಿತಿಯ ಪ್ರಕಾರ, ಸನ್ ಪಿಕ್ಚರ್ಸ್ ನಿರ್ಮಿಸಿದ ಕೆಲವು ಸಿನಿಮಾಗಳ ಸಂದರ್ಭದಲ್ಲಿ ಅನಿರುದ್ಧ್ ಮತ್ತು ಕಾವ್ಯಾ ನಡುವೆ ಉತ್ತಮ ಪರಿಚಯ ಬೆಳೆದಿದ್ದು, ಬಳಿಕ ಸ್ನೇಹ ಮತ್ತಷ್ಟು ಗಾಢವಾಗಿದೆ ಎಂಬ ಮಾತುಗಳು ಹರಿದಾಡುತ್ತಿವೆ. ಆದರೆ ಈ ಎಲ್ಲವೂ ಅಧಿಕೃತವಾಗಿ ದೃಢಪಟ್ಟಿಲ್ಲ.
ಇದನ್ನೂ ಓದಿ:
ಅಧಿಕೃತ ಪ್ರತಿಕ್ರಿಯೆ ಇನ್ನೂ ಇಲ್ಲ
ಸಾಮಾಜಿಕ ಜಾಲತಾಣಗಳಲ್ಲಿ ಮದುವೆ ಕುರಿತ ಚರ್ಚೆ ಜೋರಾಗಿದ್ದರೂ ಅನಿರುದ್ಧ್ ರವಿಚಂದರ್ ಅಥವಾ ಕಾವ್ಯಾ ಮಾರನ್ ಕುಟುಂಬದವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ಹಿಂದೆ ಇಂತಹ ವದಂತಿಗಳು ಕೇಳಿಬಂದಾಗ ಅನಿರುದ್ಧ್ ಅವುಗಳನ್ನು ಸ್ಪಷ್ಟವಾಗಿ ತಳ್ಳಿಹಾಕಿದ್ದರು. ಈ ಬಾರಿ ಮಾತ್ರ ಮೌನ ವಹಿಸಿರುವುದು ಅಭಿಮಾನಿಗಳ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.
ಕಾವ್ಯಾ ಮಾರನ್ ಸನ್ ನೆಟ್‌ವರ್ಕ್ ಕುಟುಂಬದ ಪ್ರಮುಖ ಸದಸ್ಯೆಯಾಗಿದ್ದು, ಐಪಿಎಲ್ ತಂಡ ಸನ್‌ರೈಸರ್ಸ್ ಹೈದರಾಬಾದ್‌ನ ಸಿಇಒ ಆಗಿ ಗುರುತಿಸಿಕೊಂಡಿದ್ದಾರೆ. ಅನಿರುದ್ಧ್ ರವಿಚಂದರ್ ‘ವೈ ದಿಸ್ ಕೊಲಾವೆರಿ ಡಿ’ ಹಾಡಿನಿಂದ ರಾಷ್ಟ್ರವ್ಯಾಪಿ ಖ್ಯಾತಿ ಪಡೆದಿದ್ದು, ಜೈಲರ್, ಲಿಯೋ, ವಿಕ್ರಂ, ಬೀಸ್ಟ್ ಸೇರಿದಂತೆ ಹಲವು ಬ್ಲಾಕ್‌ಬಸ್ಟರ್ ಸಿನಿಮಾಗಳಿಗೆ ಸಂಗೀತ ನೀಡಿದ್ದಾರೆ.



