September 17, 2026
Thursday, September 17, 2026
spot_img

ಇದು ನನಗೆ ಸಿಕ್ಕ ಅದೃಷ್ಟ: ಎಂ.ಎಸ್.ಸುಬ್ಬುಲಕ್ಷ್ಮಿ ಪಾತ್ರದ ಬಗ್ಗೆ ರಶ್ಮಿಕಾ ಭಾವುಕ ಮಾತು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಂಗೀತ ಸಾಮ್ರಾಜ್ಞಿ, ಭಾರತ ರತ್ನ ಎಂ.ಎಸ್. ಸುಬ್ಬುಲಕ್ಷ್ಮಿ ಅಮ್ಮನವರ ಬಯೋಪಿಕ್ ಅಫಿಷಿಯಲ್ ಆಗಿ ಅನೌನ್ಸ್ ಆಗಿದ್ದು, ಬೆಳ್ಳಿಪರದೆ ಮೇಲೆ ಅವರ ಪಾತ್ರಕ್ಕೆ ಬಣ್ಣ ಹಚ್ಚೋ ದೊಡ್ಡ ಜವಾಬ್ದಾರಿ ರಶ್ಮಿಕಾ ಮಂದಣ್ಣ ಹೆಗಲೇರಿದೆ. ಎಂ.ಎಸ್. ಸುಬ್ಬುಲಕ್ಷ್ಮಿ ಅಮ್ಮನವರ 110ನೇ ಜಯಂತಿಯ ಶುಭ ಸಂದರ್ಭದಲ್ಲೇ ಚೆನ್ನೈನಲ್ಲಿ ಈ ಪ್ಯಾನ್-ಇಂಡಿಯಾ ಬಿಗ್ ಪ್ರಾಜೆಕ್ಟ್‌ಗೆ ಚಾಲನೆ ಸಿಕ್ಕಿದ್ದು, ನಟ ಕಮಲ್ ಹಾಸನ್ ಕ್ಲಾಪ್ ಮಾಡಿ ಹೊಸ ಸಿನಿಮಾಗೆ ಶುಭ ಹಾರೈಸಿದ್ದಾರೆ.

‘ಕಿಂಗ್‌ಡಮ್’ ಹಾಗೂ ‘ಜರ್ಸಿ’ ಖ್ಯಾತಿಯ ಗೌತಮ್ ತಿನ್ನನೂರಿ ಈ ಸಿನಿಮಾವನ್ನು ಡೈರೆಕ್ಟ್ ಮಾಡುತ್ತಿದ್ದು, ಟಾಲಿವುಡ್‌ನ ನಿರ್ಮಾಪಕ ಅಲ್ಲು ಅರವಿಂದ್, ನಮ್ಮ ಸ್ಯಾಂಡಲ್‌ವುಡ್‌ನ ಪ್ರಸಿದ್ಧ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಹಾಗೂ ಬನ್ನಿ ವಾಸು ಜೊತೆಗೂಡಿ ಅದ್ಧೂರಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ಈ ಐಕಾನಿಕ್ ಕಥೆಗೆ ಸಂಗೀತ ನಿರ್ದೇಶನ ಮಾಡುತ್ತಿರುವುದು ತಮಿಳಿನ ರಾಕ್‌ಸ್ಟಾರ್ ಅನಿರುದ್ಧ್ ರವಿಚಂದರ್.

ತಮ್ಮ ಕೆರಿಯರ್‌ನಲ್ಲೇ ಅತಿ ದೊಡ್ಡ ಹಾಗೂ ಜವಾಬ್ದಾರಿಯುತ ಪಾತ್ರ ಸಿಕ್ಕಿದ್ದಕ್ಕೆ ರಶ್ಮಿಕಾ ಮಂದಣ್ಣ ಫುಲ್ ಎಮೋಷನಲ್ ಆಗಿದ್ದಾರೆ. ಈ ಬಗ್ಗೆ ಮಾತನಾಡಿದ ರಶ್ಮಿಕಾ, “ಒಬ್ಬ ನಟಿಯಾಗಿ ನಂಗೆ ಇಂಥದ್ದೊಂದು ಅಪರೂಪದ ಅವಕಾಶ ಸಿಕ್ಕಿರೋದು ನನ್ನ ಪುಣ್ಯ, ನನ್ನ ಹೃದಯದಲ್ಲಿ ಬರೀ ಕೃತಜ್ಞತೆ ತುಂಬಿದೆ. ಎಂ.ಎಸ್. ಸುಬ್ಬುಲಕ್ಷ್ಮಿ ಅಮ್ಮನವರ 110ನೇ ಜಯಂತಿಯ ದಿನವೇ ಈ ಸುದ್ದಿಯನ್ನು ನಿಮ್ಮ ಜೊತೆ ಹಂಚಿಕೊಳ್ಳುತ್ತಿರೋದು ನನ್ನ ಸೌಭಾಗ್ಯ. ಈ ವೇದಿಕೆ ಮೇಲೆ ನಿಂತಿದ್ದರೆ, ಸಾಕ್ಷಾತ್ ದೇವರ ಮುಂದೆ ನಿಂತಷ್ಟು ಭಾವನೆ ಮೂಡುತ್ತಿದೆ. ಅವರ ಅದ್ಭುತ ಜೀವನದ ಪ್ರಯಾಣದಲ್ಲಿ ನಾನೂ ಒಂದು ಸಣ್ಣ ಭಾಗವಾಗುತ್ತಿದ್ದೇನೆ ಅನ್ನೋದೇ ನನಗೆ ದೊಡ್ಡ ಹೆಮ್ಮೆ. ನನ್ನಿಂದ ಎಷ್ಟು ಸಾಧ್ಯವೋ ಅಷ್ಟು ಶ್ರದ್ಧೆ, ಕಷ್ಟಪಟ್ಟು ಈ ಪಾತ್ರಕ್ಕೆ ನ್ಯಾಯ ಒದಗಿಸುತ್ತೇನೆ” ಎಂದು ಭಾವನಾತ್ಮಕವಾಗಿ ಹೇಳಿದ್ದಾರೆ.

ಇನ್ನು ಈ ಈವೆಂಟ್‌ನಲ್ಲಿ ಮುಖ್ಯ ಅತಿಥಿಯಾಗಿ ಬಂದಿದ್ದ ನಟ ಕಮಲ್ ಹಾಸನ್, ಎಂ.ಎಸ್. ಸುಬ್ಬುಲಕ್ಷ್ಮಿ ಅವರ ಶ್ರೇಷ್ಠತೆಯನ್ನು ನೆನೆದರು. “ಅವರ ಧ್ವನಿ ಇಡೀ ಭಾರತವನ್ನು, ವಿಶೇಷವಾಗಿ ದಕ್ಷಿಣ ಭಾರತವನ್ನು ಒಂದಾಗಿ ಜೋಡಿಸಿತ್ತು. ಸಂಸ್ಕೃತ, ಹಿಂದಿ, ತೆಲುಗು, ತಮಿಳು, ಕನ್ನಡ ಹೀಗೆ ಯಾವುದೇ ಭಾಷೆಯಲ್ಲಿ ಅವರು ಹಾಡಿದರೂ, ಆ ಭಾಷೆಯಂದವನ್ನು ಹೆಚ್ಚಿಸುತ್ತಿದ್ದರು. ಅವರ ಸಂಗೀತಕ್ಕೆ ಗಡಿಗಳ ಹಂಗಿರಲಿಲ್ಲ” ಎಂದು ಕೊಂಡಾಡಿದರು.

ಅಷ್ಟೇ ಅಲ್ಲದೆ, “ಮೈಕಲ್ ಜಾಕ್ಸನ್ ಬಯೋಪಿಕ್‌ನಲ್ಲಿ ನಟಿಸೋದು ಎಷ್ಟು ಪ್ರೆಶರ್ ತರುತ್ತೋ, ಅಷ್ಟೇ ಪ್ರೆಶರ್ ಎಂ.ಎಸ್. ಅಮ್ಮನವರ ಪಾತ್ರ ಮಾಡೋಕೂ ಇರುತ್ತೆ. ಆದರೆ ರಶ್ಮಿಕಾ ತಮ್ಮ ಕಣ್ಣುಗಳಲ್ಲಿ ಆ ಕರುಣೆ ತಂದರೆ, ಅರ್ಧ ಗೆದ್ದಂತೆ. ಧೈರ್ಯವಾಗಿ ಮಾಡಿ!” ಎಂದು ರಶ್ಮಿಕಾಗೆ ಸ್ಪೂರ್ತಿಯ ಮಾತುಗಳನ್ನಾಡಿದ್ದಾರೆ.

ಮಹಾನ್ ಗಾಯಕಿ ಕಥೆಯನ್ನು ಭಾರತೀಯ ಚಿತ್ರರಂಗದ ಟಾಪ್ ತಂತ್ರಜ್ಞರು ಒಟ್ಟಾಗಿ ಬೆಳ್ಳಿಪರದೆ ಮೇಲೆ ತರುತ್ತಿರುವುದು ಸಹಜವಾಗಿಯೇ ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !