ಹೊಸದಿಗಂತ ವರದಿ ತುಮಕೂರು:
ನಗರದ ಹೊರವಲಯದ ಭೀಮಸಂದ್ರದಲ್ಲಿ ನೈರುತ್ಯ ರೈಲ್ವೆ ಇಲಾಖೆ ವತಿಯಿಂದ 2.26 ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ರೈಲ್ವೆ ಕೆಳ ಸೇತುವೆಯನ್ನು ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಲೋಕಾರ್ಪಣೆ ಮಾಡಿದರು.
ಕಳೆದ 10 ತಿಂಗಳ ಹಿಂದೆ ಭೀಮಸಂದ್ರದಲ್ಲಿ ಹಳೇ ಎಲ್.ಸಿ. ಗೇಟ್ 43ರ ಬದಲಾಗಿ ರೈಲ್ವೆ ಕೆಳ ಸೇತುವೆ ನಿರ್ಮಿಸಲು ಗುದ್ದಲಿ ಪೂಜೆ ನೆರವೇರಿಸಿದ್ದ ಸಚಿವ ಸೋಮಣ್ಣ ಅವರು ಇಂದು ಕೆಳ ಸೇತುವೆಯನ್ನು ಉದ್ಘಾಟಿಸುವ ಮೂಲಕ ಈ ಭಾಗದ ಜನರ ಬಹುದಿನಗಳ ಬೇಡಿಕೆಯನ್ನು ಈಡೇರಿಸಿದ್ದಾರೆ.
ನಂತರ ಮಾತನಾಡಿದ ಸಚಿವ ಸೋಮಣ್ಣ ಅವರು, ಭೀಮಸಂದ್ರ ಭಾಗದಲ್ಲಿ ಜನರು ರೈಲ್ವೆ ಕೆಳ ಸೇತುವೆ ಇಲ್ಲದೆ ತೊಂದರೆ ಅನುಭವಿಸುವಂತಾಗಿತ್ತು. ಈ ಬಗ್ಗೆ ತಮ್ಮ ಗಮನಕ್ಕೆ ಬಂದ ತಕ್ಷಣ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಕಳೆದ 10 ತಿಂಗಳ ಹಿಂದೆ ಅಂಡರ್ ಪಾಸ್ ನಿರ್ಮಾಣಕ್ಕೆ ಕ್ರಮ ಕೈಗೊಂಡು ನೂತನವಾಗಿ ರೈಲ್ವೆ ಕೆಳ ಸೇತುವೆ ನಿರ್ಮಿಸಿ ಇಂದು ಉದ್ಘಾಟಿಸಲಾಗಿದೆ. ಇದರಿಂದ ಈ ಭಾಗದ ಜನರ ಹಲವು ವರ್ಷಗಳ ಬೇಡಿಕೆ ಈಡೇರಿದಂತಾಗಿದೆ ಎಂದರು.
ದೇಶ ಇದ್ದರೆ ನಾವು ಎಂಬುದನ್ನು ವಿಶ್ವಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ತೋರಿಸಿ ಕೊಟ್ಟಿದ್ದಾರೆ. ಅವರ ದೂರದೃಷ್ಟಿಯ ಚಿಂತನೆಯಿಂದ ಇಡೀ ವಿಶ್ವದಲ್ಲೇ ಭಾರತಕ್ಕೆ ವಿಶೇಷ ಸ್ಥಾನಮಾನ ದೊರೆತಿದೆ. 12 ವರ್ಷದಲ್ಲಿ ನಮ್ಮ ರಾಷ್ಟ್ರಕ್ಕೆ ಪ್ರಧಾನಿಗಳು ತುಂಬಾ ಕೊಡುಗೆ ಕೊಟ್ಟಿದ್ದಾರೆ ಎಂದು ಅವರು ಹೇಳಿದರು. ಭಾರತ ದೇಶವನ್ನು ವಿಶ್ವಗುರುವಾಗಿ ನೋಡುವ ಸಂದರ್ಭ ಸೃಷ್ಠಿಯಾಗಿದೆ. ದೇಶದ ಅಭಿವೃದ್ಧಿಯಲ್ಲಿ ಮೋದಿಯವರ ಚಿಂತನೆ, ಅನುಭವ ವಿಶ್ವವೇ ಮೆಚ್ಚುಕೊಳ್ಳುವಂತಾಗಿದೆ ಎಂದರು.
ಇಡೀ ವಿಶ್ವದಲ್ಲೇ 12 ವರ್ಷದಲ್ಲಿ 50 ವರ್ಷಗಳ ಸಾಧನೆ ಮಾಡಿರುವ ಪ್ರಧಾನಿ ನರೇಂದ್ರ ಮೋದಿಯವರು ಸುಮಾರು 25 ಕೋಟಿಗೂ ಹೆಚ್ಚು ಬಡ ಕುಟುಂಬಗಳನ್ನು ಮೇಲ್ಪಂಕ್ತಿಗೆ ತರುವ ಮೂಲಕ ಎಲ್ಲರಿಗೂ ಸಮಾನತೆ ನೀಡುವ ಚಿಂತನೆ ಅವರದ್ದಾಗಿದೆ. ನಮ್ಮ ದೇಶಕ್ಕೆ ಪ್ರಧಾನಿ ಮೋದಿಯವರ ಸೇವೆ ಅತ್ಯವಶ್ಯ ಎಂದರು. ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಪ್ರಧಾನಿಗಳು ಹಗಲಿರುಳು ಶ್ರಮಿಸುತ್ತಿದ್ದಾರೆ. ಪ್ರಧಾನಿಯವರ ಕಾರ್ಯವೈಖರಿಯನ್ನು ಬ್ರಿಕ್ಸ್ ಶೃಂಗ ಸಮ್ಮೇಳನದಲ್ಲಿ ಎಲ್ಲ ದೇಶದವರು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ. ಭಾರತದ ಅಖಂಡತೆ, ಇತಿಹಾಸವನ್ನು ಬೇರೆಯವರು ನೋಡಿ ಕಲಿಯುವಂತಹ ಸನ್ನಿವೇಶ ಸೃಷ್ಠಿಯಾಗಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯವೈಖರಿ ಎಲ್ಲರಿಗೂ ಮಾದರಿಯಾಗಿದೆ. ಅವರ ಹುಟ್ಟುಹಬ್ಬವನ್ನು ಹಳ್ಳಿಗಾಡಿನ ಸ್ವಚ್ಛತೆಯೊಂದಿಗೆ ಆಚರಣೆ ಮಾಡಿಕೊಳ್ಳುತ್ತಿದ್ದಾರೆ ಎಂದು ಅವರು ಹೇಳಿದರು.
ವಿಶ್ವದ ಎಲ್ಲಾ ರಾಷ್ಟ್ರಗಳಲ್ಲೂ ಸಹ ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬವನ್ನು ಆಚರಿಸಲಾಗುತ್ತಿದೆ. ಇದು ವಿಶ್ವದಲ್ಲೇ ಮೊದಲು ಎಂಬಂತಾಗಿದೆ ಎಂದು ಅವರು ಹೇಳಿದರು.
ತುಮಕೂರಿನ ಅಭಿವೃದ್ಧಿ, ಪರಿವರ್ತನೆಗೆ ಮುಂದಿನ 3 ವರ್ಷದಲ್ಲಿ ಸಾಕಷ್ಟು ಯೋಜನೆಗಳನ್ನು ತರಲಾಗುವುದು. ಮುಂದಿನ ಪೀಳಿಗೆಗೆ 100 ವರ್ಷದಲ್ಲಿ ಆಗಬೇಕಿರುವ ಅಭಿವೃದ್ಧಿ ಕಾರ್ಯಗಳನ್ನು 3 ವರ್ಷದಲ್ಲಿ ಮಾಡುವ ಸಂಕಲ್ಪ ಮಾಡಿದ್ದೇನೆ ಎಂದರು.
ಈ ಸಂದರ್ಭದಲ್ಲಿ ಶಾಸಕ ಜ್ಯೋತಿ ಗಣೇಶ್, ಬಿಜೆಪಿ ಜಿಲ್ಲಾಧ್ಯಕ್ಷ ರವಿಶಂಕರ್ ಹೆಬ್ಬಾಕ, ಮುಖಂಡರಾದ ವೈ.ಹೆಚ್. ಹುಚ್ಚಯ್ಯ, ಮನೋಹರಗೌಡ, ವೀಣಾ ಮನೋಹರಗೌಡ, ಟಿ.ಹೆಚ್.ಕೃಷ್ಣಪ್ಪ ಹಾಗೂ ರೈಲ್ವೆ ಇಲಾಖೆಯ ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.



