ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೋಲ್ಕತ್ತಾ ಆರ್.ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದ ಟ್ರೈನಿ ವೈದ್ಯೆ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಭಟನೆ ನಡೆಸುತ್ತಿರುವ ಕಿರಿಯ ವೈದ್ಯರೊಂದಿಗೆ ಮಾತುಕತೆಗಾಗಿ ಸಿಎಂ ಮಮತಾ ಬ್ಯಾನರ್ಜಿ ಸರ್ಕಾರ 5ನೇ ಹಾಗೂ ಕೊನೇ ಬಾರಿ ಆಹ್ವಾನ ನೀಡಿದೆ.
ಕೆಲ ದಿನಗಳಿಂದ ಟ್ರೈನಿ ವೈದ್ಯೆ ಅತ್ಯಾಚಾರ ಪ್ರಕರಣ ಖಂಡಿಸಿ ಕಿರಿಯ ವೈದ್ಯರು ಪ್ರತಿಭಟನೆಯಲ್ಲಿತೊಡಗಿದ್ದಾರೆ. ಪ್ರಕರಣದಲ್ಲಿ ನ್ಯಾಯ ಸಿಗುವವರೆಗೆ ಮತ್ತು ಕಿರುಕುಳ ನೀಡುತ್ತಿರುವ ಕೆಲ ಉನ್ನತಾಧಿಕಾರಿಗಳನ್ನ ಕಿತ್ತೊಗೆಯುವವರೆಗೆ ಸೇವೆಗೆ ಸೇರಲು ನಿರಾಕರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಕಾಲಿಘಾಟ್ ನಿವಾಸದಲ್ಲಿ ಸೋಮವಾರ (ಸೆ.16) ಸಂಜೆ 5 ಗಂಟೆಗೆ ವೇಳೆಗೆ ಸಭೆಗೆ ಪತ್ರದ ಮೂಲಕ ಆಹ್ವಾನ ನೀಡಲಾಗಿದೆ.
ಇದು 5ನೇ ಮತ್ತು ಕೊನೇ ಬಾರಿಗೆ ಸಿಎಂ ನಿಮ್ಮನ್ನು ಆಹ್ವಾನಿಸಿದ್ದಾರೆ. ವೈದ್ಯರು ಈಗ ಸಾಮಾನ್ಯ ಸಭೆ ನಡೆಸುತ್ತಿದ್ದಾರೆ. ನಂತರ ಕಿರಿಯ ವೈದ್ಯರೊಂದಿಗೆ ಮಾತುಕತೆ ನಡೆಸಲಿದ್ದಾರೆ ಎಂದು ಸಿಎಂ ಅವರ ಆಪ್ತ ಕಾರ್ಯದರ್ಶಿ ಮನೋಜ್ ಪಂತ್ ವೈದ್ಯರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಸಭೆಯಲ್ಲಿ ಯಾವುದೇ ಲೈವ್ ಸ್ಟ್ರೀಮಿಂಗ್ ಅಥವಾ ವೀಡಿಯೋಗ್ರಫಿ ಮಾಡಲಾಗುವುದಿಲ್ಲ. ಬದಲಿಗೆ ಸಭೆಯ ನಡಾವಳಿಗಳನ್ನು ಎರಡೂ ಪಕ್ಷಗಳು ದಾಖಲಿಸಿ, ಕಡತಕ್ಕೆ ಸಹಿ ಮಾಡಲಿವೆ. ನಿಮ್ಮ ಸಕಾರಾತ್ಮಕ ಪ್ರತಿಕ್ರಿಯೆ ನಾವು ಎದುರು ನೋಡುತ್ತಿದ್ದೇವೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.