April 15, 2026
Wednesday, April 15, 2026
spot_img

ಇದೇ ಸರಿಯಾದ ಸಮಯ, ಟೀಮ್ ಇಂಡಿಯಾಗೆ ಆಯ್ಕೆ ಮಾಡಿ: ಸೌರವ್ ಗಂಗೂಲಿ ಹೇಳಿದ್ದು ಯಾರ ಬಗ್ಗೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜಮ್ಮು-ಕಾಶ್ಮೀರದ ವೇಗಿ ಆಖಿಬ್ ನಬಿ ಅವರನ್ನು ಭಾರತ ತಂಡಕ್ಕೆ ಆಯ್ಕೆ ಮಾಡುವಂತೆ ಟೀಮ್ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಸೂಚಿಸಿದ್ದಾರೆ.

2025-26ರ ದೇಶೀಯ ಸೀಸನ್‌ನಲ್ಲಿ ನಬಿ ತೋರಿದ ಅದ್ಭುತ ಲಯವನ್ನು ಕೊಂಡಾಡಿದ ಗಂಗೂಲಿ, ಇದೀಗ ಆಯ್ಕೆ ಮಾಡುವುದೇ ಸರಿಯಾದ ಸಮಯ ಎಂದಿದ್ದಾರೆ.

ರಣಜಿ ಟ್ರೋಫಿ ಫೈನಲ್‌ನಲ್ಲಿ ಕರ್ನಾಟಕ ವಿರುದ್ಧ ಐದು ವಿಕೆಟ್ ಪಡೆದು ಜಮ್ಮು-ಕಾಶ್ಮೀರಕ್ಕೆ ಚಾಂಪಿಯನ್ ಪಟ್ಟ ತಂದುಕೊಟ್ಟ ನಬಿ, ಸೀಸನ್ ಪೂರ್ತಿ ಪ್ರಭಾವಶಾಲಿ ಪ್ರದರ್ಶನ ನೀಡಿದ್ದಾರೆ. ಕೇವಲ 10 ಪಂದ್ಯಗಳಲ್ಲಿ 60 ವಿಕೆಟ್ ಕಬಳಿಸಿದ ಅವರು, ಒಂದೇ ಋತುವಿನಲ್ಲಿ ಏಳು ಬಾರಿ ಐದು ವಿಕೆಟ್ ಗೊಂಚಲು ಸಾಧನೆ ಮಾಡಿ ದಾಖಲೆ ಬರೆದಿದ್ದಾರೆ. ಕಳೆದ ಎರಡು ರಣಜಿ ಟೂರ್ನಿಗಳಲ್ಲಿ ಒಟ್ಟು 104 ವಿಕೆಟ್ ಪಡೆದಿರುವುದು ಗಮನಾರ್ಹ.

ಇದನ್ನೂ ಓದಿ:

ಇಂಗ್ಲೆಂಡ್ ಪರಿಸ್ಥಿತಿಗಳಲ್ಲಿ ಚೆಂಡನ್ನು ಎರಡೂ ದಿಕ್ಕಿಗೆ ಮೂವ್ ಮಾಡುವ ನಬಿ ಕಲೆ ತಂಡಕ್ಕೆ ಬಲ ನೀಡಲಿದೆ ಎಂದು ಗಂಗೂಲಿ ಅಭಿಪ್ರಾಯಪಟ್ಟಿದ್ದಾರೆ.

ಮಾಜಿ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಹಾಗೂ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಕೂಡಾ ನಬಿ ಪ್ರದರ್ಶನವನ್ನು ಮೆಚ್ಚಿಕೊಂಡಿದ್ದಾರೆ. ಇತ್ತೀಚಿನ ಐಪಿಎಲ್ ಹರಾಜಿನಲ್ಲಿ 8.40 ಕೋಟಿ ರೂ.ಗೆ ಆಯ್ಕೆಯಾದ ನಬಿ, ಡೆಲ್ಲಿ ಕ್ಯಾಪಿಟಲ್ಸ್ ಪರ ಕಣಕ್ಕಿಳಿಯಲಿದ್ದಾರೆ. ಇದೀಗ ಇಂಗ್ಲೆಂಡ್ ಸರಣಿಗೆ ಅವಕಾಶ ಸಿಗುತ್ತದೆಯೇ ಎಂಬುದು ಕುತೂಹಲ ಮೂಡಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !