ಹೊಸದಿಗಂತ ಡಿಜಿಟಲ್ ಡೆಸ್ಕ್:
ನಗರದ ಟ್ರಾಫಿಕ್ ಸಮಸ್ಯೆಗೆ ಪರಿಹಾರ ನೀಡಲಿದೆ ಎನ್ನಲಾಗುತ್ತಿರುವ ಬೆಂಗಳೂರು ಉಪನಗರ ರೈಲು ಯೋಜನೆಗೆ ಮಹತ್ವದ ಬೆಳವಣಿಗೆ ನಡೆದಿದೆ.
ಯೋಜನೆಯ ಕಾರಿಡಾರ್-2 ಮತ್ತು ಕಾರಿಡಾರ್-4 ಮಾರ್ಗಗಳಿಗೆ ಅಗತ್ಯವಿರುವ 153 ಹವಾನಿಯಂತ್ರಿತ ಮೆಟ್ರೋ ಮಾದರಿಯ ಬೋಗಿಗಳ ನಿರ್ಮಾಣಕ್ಕಾಗಿ ಚೆನ್ನೈನ ಇಂಟೆಗ್ರಲ್ ಕೋಚ್ ಫ್ಯಾಕ್ಟರಿಗೆ ಭಾರೀ ಮೊತ್ತದ ಗುತ್ತಿಗೆ ನೀಡಲಾಗಿದೆ.
ಸುಮಾರು ₹1513.75 ಕೋಟಿ ಮೌಲ್ಯದ ಈ ಕಾರ್ಯಾದೇಶವನ್ನು Bi-RIDE ಸಂಸ್ಥೆ ಅಧಿಕೃತವಾಗಿ ಹೊರಡಿಸಿದೆ. ಮೇ 6, 2026 ರಂದು ನೀಡಲಾದ ಈ ಆದೇಶದ ಪ್ರಕಾರ, ಮುಂದಿನ 18 ತಿಂಗಳೊಳಗೆ ಬೋಗಿಗಳ ಪೂರೈಕೆ ಆರಂಭವಾಗಬೇಕಿದೆ.
ಇದನ್ನೂ ಓದಿ:
ಚಿಕ್ಕಬಾಣಾವರ-ಯಶವಂತಪುರ ಸಂಪರ್ಕ ಕಲ್ಪಿಸುವ ಕಾರಿಡಾರ್-2 ಮಾರ್ಗವನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವ ಉದ್ದೇಶದಿಂದ ಈ ಗಡುವು ನಿಗದಿಯಾಗಿದೆ. ಯೋಜನೆಗೆ ಸಂಬಂಧಿಸಿದಂತೆ ಬೋಗಿಗಳ ವಿನ್ಯಾಸ, ಉತ್ಪಾದನೆ, ಪರೀಕ್ಷೆ ಮತ್ತು ಸುರಕ್ಷತಾ ಮಾನದಂಡಗಳ ಜವಾಬ್ದಾರಿಯನ್ನೂ ಐಸಿಎಫ್ ವಹಿಸಿಕೊಳ್ಳಲಿದೆ.
ಇದರ ಜೊತೆಗೆ ಸಿಗ್ನಲಿಂಗ್ ವ್ಯವಸ್ಥೆ, ವಿದ್ಯುತ್ ಪೂರೈಕೆ ಮತ್ತು ಪ್ಲಾಟ್‌ಫಾರ್ಮ್ ಸ್ಕ್ರೀನ್ ಡೋರ್‌ಗಳ ಸಮನ್ವಯ ಕಾರ್ಯಗಳನ್ನೂ ಕೈಗೊಳ್ಳಲಾಗುತ್ತದೆ. ಯೋಜನೆ ಪೂರ್ಣಗೊಂಡ ಬಳಿಕ ಬೆಂಗಳೂರಿನ ಜನರಿಗೆ ವೇಗವಾದ ಹಾಗೂ ವಿಶ್ವಾಸಾರ್ಹ ಸಾರ್ವಜನಿಕ ಸಾರಿಗೆ ಸೌಲಭ್ಯ ದೊರೆಯಲಿದೆ.



