ಹೊಸದಿಗಂತ ಡಿಜಿಟಲ್ ಡೆಸ್ಕ್:
ಈ ಸಂಭ್ರಮಾಚರಣೆಯಲ್ಲಿ ಸಮುದಾಯದ ಜೊತೆ ನಾವೂ ಭಾಗಿಯಾಗುವ ಪ್ರಯತ್ನ.
ಖ್ಯಾತ ಹಿನ್ನೆಲೆ ಧ್ವನಿ ಕಲಾವಿದ, ಹಾಗೂ ನಟ, ನಿರೂಪಕ, ಬಡೆಕ್ಕಿಲ ಪ್ರದೀಪ್ ತಮ್ಮನವೋನ್ನತಿ ಫೌಂಡೇಶನ್ ಮುಖಾಂತರ ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ಸಮುದಾಯದ ಜೊತೆ ಕನೆಕ್ಟ್ ಆಗುವ, ಕನ್ನಡದ ೭೬ ಧ್ವನಿಗಳ ಮೂಲಕ ಭಾರತದ ೭೬ ವರ್ಷಗಳ ಕಥೆಯನ್ನು ಹೇಳಲಿದ್ದಾರೆ.
ಭಾರತದ ಸ್ವಾತಂತ್ರ್ಯೋತ್ತರ ೭೬ ವರ್ಷಗಳನ್ನು ೭೬ ವಿವಿಧ ಧ್ವನಿಗಳನ್ನು ಬಳಸಿಕೊಂಡು ಸಂಚಿಕೆಯಲ್ಲಿ ಸ್ವಾತಂತ್ರ್ಯ ಹೋರಾಟದ ಗೆಲುವಿನ ನಂತರ ಭಾರತ ಕಂಡ ಏರಿಳಿತದ ಪರಿಚಯ ಮಾಡಲಾಗಿದೆ. ರಾಜ್ಯದ ವಿವಿಧ ಭಾಗಗಳಿಂದ ಬೇರೆ ಬೇರೆ ಮಂದಿ ಭಾರತದ ಕುರಿತು ಮಾತುಗಳನ್ನಾಡುತ್ತಾ ಸಾಗುವ ಈ ಕಾರ್ಯಕ್ರಮ ಸಮುದಾಯದ ಜೊತೆ ನಮ್ಮ ಸಂಬಂಧದ ಅನಾವರಣ.
೧೪೦ ಕೋಟಿ ಜನಸಂಖ್ಯೆಯ ನಮ್ಮ ದೇಶದ ಕಥೆಯನ್ನು ಇಪ್ಪತ್ತು ನಿಮಿಷದ ಈ ಕಾರ್ಯಕ್ರಮದಲ್ಲಿ ಹೇಳುವುದು ಅಸಾಧ್ಯವೇ ಆದರೂ, ನಮ್ಮ ಮಾತುಗಳಲ್ಲಿ ಅದರ ಅವಲೋಕನ ಮಾಡಿದರೆ, ಅದು ನಮ್ಮೊಳಗೆ ದೇಶಭಕ್ತಿಯ ಬೆಳಕನ್ನು ಹಚ್ಚುತ್ತದೆ ಅನ್ನುವುದು ನಮ್ಮ ನಂಬಿಕೆ.
ಕಳೆದ ೧೭ ವರ್ಷಗಳಿಂದ ಮಾಧ್ಯಮದ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ, ಹಿನ್ನೆಲೆ ಧ್ವನಿಗೆ ರಾಜ್ಯಾದ್ಯಂತ ಮನೆಮಾತಾಗಿರುವ ಬಡೆಕ್ಕಿಲ ಪ್ರದೀಪ್ ಪರಿಕಲ್ಪನೆಯಲ್ಲಿ ಈ ಕಾರ್ಯಕ್ರಮ ಮೂಡಿಬರಲಿದೆ. ಅವರ ರಿವರ್ಬ್ ಇಂಕ್, ಅನ್ನುವ ಸಂಸ್ಥೆ ಇದರ ನಿರ್ಮಾಣ ಮಾಡಿದರೆ, ಅವರೇ ನಡೆಸುತ್ತಿರುವ ನವೋನ್ನತಿ ಫೌಂಡೇಶನ್ ಅಡಿಯಲ್ಲಿ ಈ ಕಾರ್ಯಕ್ರಮ ಅನಾವರಣಗೊಳ್ಳುತ್ತಿದೆ.
ನವೋನ್ನತಿ ಫೌಂಡೇಶನ್, ಭಾರತದ ಸಂಸ್ಕೃತಿ, ಇತಿಹಾಸ ಹಾಗೂ ಭಾರತೀಯತೆಯ ಕುರಿತು ಕಾರ್ಯಕ್ರಮಗಳನ್ನು ಮಾಡುವ ಹಾಗೂ ಕೆಲಸಗಳನ್ನು ಮಾಡುವ ಉದ್ದೇಶದಿಂದ ಹುಟ್ಟಿದ ಸಂಸ್ಥೆಯಾಗಿದ್ದು, ಈ ಕಾರ್ಯಕ್ರಮವನ್ನೂ ಕೂಡ ಬಡೆಕ್ಕಿಲ ಪ್ರದೀಪ್ ಅವರು ಧ್ವನಿಯ ಮೂಲಕ ತನಗೆ ಸಿಕ್ಕ ಪ್ರೀತಿಯನ್ನು ಧ್ವನಿಯ ಕಾರ್ಯಕ್ರಮದ ಮೂಲಕವೇ ಜನರಿಗೆ ಮರು ಹಂಚುವ ಕಿಂಚಿತ್ ಪ್ರಯತ್ನ ಇದು.
ಜೊತೆಗೆ ರಾಜ್ಯದ ಹಲವು ಕಾಲೇಜುಗಳ ಮಾಧ್ಯಮ ವಿದ್ಯಾರ್ಥಿಗಳನ್ನೂ ಈ ಕೆಲಸದಲ್ಲಿ ತೊಡಗಿಸಿಕೊಳ್ಳಲಾಗಿದೆ. ಪ್ರದೀಪ್ ಅವರ ತಂಡದ ಶರ ಆರ್ ಫಡ್ಕೆ ಅಲ್ಲದೇ ದೊಡ್ಡದೊಂದು ತಂಡ ೨೦ ರಿಂದ ೩೦ ನಿಮಿಷದೊಳಗಿನ ಈ ಕಾರ್ಯಕ್ರಮಕ್ಕಾಗಿ ಕೆಲಸಮಾಡಿದೆ.
ಇದೇ ಆಗಸ್ಟ್ ೧೫ರಂದು ರಾಜ್ಯದ ಹಲವು ಸಮುದಾಯ ಬಾನುಲಿಗಳಲ್ಲಿ ಈ ಕಾರ್ಯಕ್ರಮ ಪ್ರಸಾರಗೊಳ್ಳಲಿದೆ.
ಬಡೆಕ್ಕಿಲ ಪ್ರದೀಪ್
ಹಿನ್ನೆಲೆ ಧ್ವನಿ ಕಲಾವಿದ, ನಟ