ಪ್ರತಿದಿನ ತಪ್ಪದೇ 700 ಮಂದಿ ಹೊಟ್ಟೆ ತುಂಬಿಸುತ್ತಾರೆ ಈ ವ್ಯಕ್ತಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕೋವಿಡ್ ಎಷ್ಟೋ ಶ್ರೀಮಂತರನ್ನ ಬಡವರನ್ನಾಗಿಸಿದೆ, ಎಷ್ಟೋ ಮಂದಿ ತಮ್ಮವರನ್ನು ಕಳೆದುಕೊಳ್ಳುವಂತೆ ಮಾಡಿದೆ. ಇನ್ನೂ ಹಲವರಿಗೆ ಒಂದು ಹೊತ್ತಿನ ಊಟಕ್ಕೂ ಕಷ್ಟ ತಂದಿಟ್ಟಿದೆ. ಕೋವಿಡ್ ಸಮಯದಲ್ಲಿ ಕಲಿತ ಪಾಠಗಳು ಅಷ್ಟಿಷ್ಟಲ್ಲ.

ಈ ಪಾಠಗಳನ್ನು ಕಲಿತು ಹಾಗೇ ಮರೆಯಬಾರದು ಅನ್ನೋದಕ್ಕೆ ಉದಾಹರಣೆ ಅಶ್ವಂಥ್ ಕುಮಾರ್. ಚೆನ್ನೈ ಮೂಲದ ಅಶ್ವಂಥ್ ದಿನಕ್ಕೆ 700ಕ್ಕೂ ಹೆಚ್ಚು ಮಂದಿಗೆ ಉಚಿತವಾಗಿ ಊಟ ನೀಡುತ್ತಿದ್ದಾರೆ. ಈ ಎಲ್ಲ ಒಳ್ಳೆ ಕೆಲಸಕ್ಕೂ ನನ್ನ ಅಜ್ಜಿಯೇ ಸ್ಫೂರ್ತಿ ಅಂತಾರೆ ಅಶ್ವಂಥ್, ಇವರ ಸ್ಪೂರ್ಥಿಕಥೆ ಇಲ್ಲಿದೆ ನೋಡಿ..

ಅಶ್ವಂಥ್ ಬಹಳ ಹಿಂದೆ ʻದಿ ಭಾಯ್ ಫ್ರೆಂಡ್ʼ ಎನ್ನುವ ಕೇಟರಿಂಗ್ ಬ್ಯುಸಿನೆಸ್ ಆರಂಭಿಸಿದ್ದರು. ಕೊರೋನಾದಿಂದ ಎಲ್ಲವೂ ಬಂದ್ ಆಯ್ತು. ಆ ವೇಳೆ ಎಷ್ಟೋ ಮಂದಿ ಊಟ ಇಲ್ಲದೆ ಪರದಾಡಿದ್ದನ್ನು ಕಂಡ ಅಶ್ವಂಥ್ ಕೇಟರಿಂಗ್ ಬದಲು ಜನರಿಗೆ ಉಚಿತವಾಗಿ ಆಹಾರ ಹಂಚುವ ಕೆಲಸ ಆರಂಭಿಸಿದರು. ಕೋವಿಡ್ ಸಮಯದಲ್ಲಿ ಆರಂಭವಾದ ಉಚಿತ ಆಹಾರ ಸೇವೆ ಈಗಲೂ ನಡೆಯುತ್ತಲೇ ಇದೆ. ಕೇಟರಿಂಗ್ ಬ್ಯುಸಿನೆಸ್ ಕೂಡ ಕೈ ಹತ್ತಿದ್ದು, ಅಲ್ಲಿನ ಲಾಭವನ್ನೆಲ್ಲಾ ನೇರವಾಗಿ ತಂದು ಉಚಿತ ಊಟಕ್ಕೆ ಹಾಕ್ತಿದ್ದಾರೆ ಅಶ್ವಂಥ್.

ಇದಕ್ಕೆಲ್ಲಾ ನನ್ನ ಅಜ್ಜಿ ಪಂಕಜಮ್ ಸ್ವಾಮಿನಾಥನ್ ಕಾರಣ ಅಂತಾರೆ ಅಶ್ವಂಥ್. ನನ್ನ ಅಜ್ಜಿಗೆ ಬರೀ ಐದು ಸಾವಿರ ರೂ. ಪಿಂಚಣಿ ಬರುತ್ತಿತ್ತು. ಆದರೂ ಎಷ್ಟೋ ಮಂದಿಗೆ ಸಹಾಯ ಮಾಡುತ್ತಿದ್ದರು. ಆಟೋದಲ್ಲಿ ದೇವಸ್ಥಾನಕ್ಕೆ ಹೋದರೆ, ಡ್ರೈವರ್ ಕೇಳಿದ್ದಕ್ಕಿಂತ ಹತ್ತು ರುಪಾಯಿ ಹೆಚ್ಚಿಗೆ ಕೊಟ್ಟು ದೇವರು ಒಳ್ಳೆಯದು ಮಾಡಲಿ ಎನ್ನುತ್ತಿದ್ದರು ಎನ್ನುತ್ತಾರೆ.

ಕೇಟರಿಂಗ್‌ನಲ್ಲಿ ಕೂಡ ಕೇವಲ 15 ರಿಂದ 20 ರೂ ಮಾತ್ರ ತೆಗೆದಕೊಳ್ಳುವ ಅಶ್ವಂಥ್, ದುಡ್ಡಿಲ್ಲ ಎಂದವರಿಗೆ ಉಚಿತವಾಗಿ ಆಹಾರ ನೀಡುತ್ತಾರೆ. ಊಟ ಕೂಡ ಅನ್‌ಲಿಮಿಟೆಡ್. ಇಷ್ಟೇ ತಿನ್ನಿ ಎಂದು ಯಾರಿಗೂ ಹೇಳೋದಿಲ್ಲ ಎನ್ನುತ್ತಾರೆ ಅಶ್ವಂಥ್. ಅನ್ನ, ಸಾಂಬಾರ್, ಮೊಸರನ್ನ, ಪಲಾವ್, ಪಾಯಸ ಹಾಗೂ ಉಪ್ಪಿನಕಾಯಿ ನೀಡುತ್ತಾರೆ. ಹೆಚ್ಚಿನ ಆಹಾರ ಮನೆಯಲ್ಲೇ ತಯಾರಾಗುತ್ತದೆ. ಇಲ್ಲಿ ಯಾವ ಬಾಣಸಿಗರೂ ಇಲ್ಲ. ಆಹಾರ ವಿತರಕರ ಮನೆಯವರು ಕೂಡ ಅಡುಗೆ ಮಾಡಲು ಕೈ ಜೋಡಿಸುತ್ತಾರೆ.

ಇಲ್ಲಿ ಖುಷಿಯಿಂದ ಅಡುಗೆ ಮಾಡುತ್ತೇನೆ, ಇದು ಕೆಲಸ ಎನಿಸುವುದೇ ಇಲ್ಲ. ಜನರಿಗೆ ಸಹಾಯ ಮಾಡುವುದಕ್ಕಿಂತ ಬೇರೆ ಪುಣ್ಯ ಇನ್ನೇನು ಇಲ್ಲ ಎನ್ನುತ್ತಾರೆ ವಿಜಿ. ಇದೇ ರೀತಿ ಪ್ರೋತ್ಸಾಹ ಸಿಕ್ಕರೆ ಇನ್ನಷ್ಟು ಒಳ್ಳೆಯ ಕೆಲಸ ಮಾಡುವ ಆಸೆ ಅಶ್ವಂಥ್ ಅವರದ್ದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!