ಈ ಪ್ರತಿಭಟನೆ ಮೋದಿ, ಸ್ಮೃತಿ ಇರಾನಿ ವಿರುದ್ಧ ಅಲ್ಲ: ಕಾಂಗ್ರೆಸ್‌ಗೆ ಖಡಕ್ ಸಂದೇಶ ಕಳುಹಿಸಿದ ಕುಸ್ತಿಪಟುಗಳು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತೀಯ ಕುಸ್ತಿ ಫೆಡರೇಶನ್‌ ಅಧ್ಯಕ್ಷ ಬ್ರಿಜ್‌ಭೂಷಣ್‌ ಸಿಂಗ್‌ ವಿರುದ್ಧ ಕುಸ್ತಿಪಟುಗಳು ತೀವ್ರ ಪ್ರತಿಭಟನೆ ನಡೆಸುತ್ತಿದ್ದು, ಬ್ರಿಜ್ ರಾಜೀರಾಮೆ ನೀಡಲೇಬೇಕು ಎಂದು ಪಟ್ಟು ಹಿಡಿದಿದೆ.

ಇದರ ನಡುವೆಕುಸ್ತಿಪಟುಗಳ ಪ್ರತಿಭಟನೆಗೆ ಆಗಮಿಸಿ ರಾಜಕೀಯ ಲಾಭ ಪಡೆಯುವ ಯತ್ನ ನಡೆಯುತ್ತಿದ್ದು, ತಕ್ಷಣವೇ ಕುಸ್ತಿಪಟುಗಳು ರಾಜಕೀಯ ಮಾಡಬೇಡಿ ಎಂದು ಆಗಮಿಸಿದ ನಾಯಕರನ್ನು ವೇದಿಕೆಯಿಂದ ಹೊರಗೆ ಕಳುಹಿಸಿದ್ದಾರೆ.

ಇದೀಗ ಮಾಜಿ ಕುಸ್ತಿಪಟು, ಬಿಜೆಪಿ ನಾಯಕಿ ಬಬಿತಾ ಪೋಗತ್ ಕಾಂಗ್ರೆಸ್‌ ನಾಯಕರಿಗೆ ಸ್ಪಷ್ಟ ಸಂದೇಶ ರವಾನಿಸಿದ್ದು, ಇದು ಪ್ರಧಾನಿ ನರೇಂದ್ರ ಮೋದಿ, ಸ್ಮೃತಿ ಇರಾನಿ ವಿರುದ್ಧದ ಹೋರಾಟವಲ್ಲ. ಕುಸ್ತಿಪಟುಗಳು ಹಾಗೂ ಫೆಡರೇಶನ್ ಅಧ್ಯಕ್ಷರ ನಡುವಿನ ಹೋರಾಟ. ಇದರ ನಡುವೆ ರಾಜಕೀಯ ಮಾಡಬೇಡಿ ಎಂದಿದ್ದಾರೆ.

ದೆಹಲಿ ಜಂತರ್ ಮಂತರ್‌ ನಡೆಯುತ್ತಿರುವ ಧರಣಿಗೆ ಆಗಮಿಸಿದ ಸಿಪಿಐ ನಾಯಕಿ ಬೃಂದಾ ಕಾರಾಟ್, ಬೆಂಬಲದ ನೆಪದಲ್ಲಿ ರಾಜಕೀಯ ಲಾಭ ಪಡೆದುಕೊಳ್ಳಲು ಯತ್ನಿಸಿದ್ದರು. ಬಿಜೆಪಿ, ಮೋದಿ ವಿರುದ್ಧ ಕುಸ್ತಿಪಟುಗಳ ವೇದಿಕೆಯಲ್ಲಿ ನಿಂತು ಭಾಷಣ ಮಾಡುವ ಲೆಕ್ಕಾಚಾರದಲ್ಲಿದ್ದರು. ಆದರೆ ಬೃಂದಾ ಕಾರಾಟ್ ವೇದಿಕೆ ಆಗಮಿಸುತ್ತಿದ್ದಂತೆ, ಹೊರನಡೆಯುವಂತೆ ಸೂಚನೆ ನೀಡಲಾಯಿತು. ಬಳಿಕ ಕುಸ್ತಿಪಟು ಭಜರಂಗ್ ಪೂನಿಯಾ, ಇದು ಕುಸ್ತಿಪಟಗಳ ಪ್ರತಿಭಟನೆ. ಈ ವೇದಿಕೆಯನ್ನು ರಾಜಕೀಯಕ್ಕಾಗಿ ಬಳಸಬೇಡಿ. ನೀವು ದಯಮಾಡಿ ವೇದಿಕೆಯಿಂದ ಹೊರನಡೆಯಿರಿ ಎಂದು ಮೈಕ್ ಮೂಲಕ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ ಇದೀಗ ಬಬಿತಾ ಪೋಗತ್(Babita Phogat), ಕಾಂಗ್ರೆಸ್ ನಾಯಕರಲ್ಲಿ ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ.

ಕುಸ್ತಿಪಟುಗಳ ಪ್ರತಿಭಟನೆ ಪ್ರಧಾನಿ ನರೇಂದ್ರ ಮೋದಿ(PM Narendra Modi), ಸ್ಮೃತಿ ಇರಾನಿ ಅಥವಾ ಬಿಜೆಪಿ ವಿರುದ್ಧವಲ್ಲ. ಕುಸ್ತಿಪಟಗಳ ಪ್ರತಿಭಟನೆ ಹಾಗೂ ಹೋರಾಟ ಫೆಡರೇಶನ್ ಹಾಗೂ ಒರ್ವ ವ್ಯಕ್ತಿಯ ವಿರುದ್ಧ. ಈ ಮೂಲಕ ನಾನು ಕಾಂಗ್ರೆಸ್ ನಾಯಕರಲ್ಲಿ ಮನವಿ ಮಾಡುತ್ತೇನೆ. ಈ ಹೋರಾಟದಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳಬೇಡಿ. ಕುಸ್ತಿಪಟುಗಳು ತಮ್ಮ ಬೇಡಿಕೆ ಹಾಗೂ ಅವಶ್ಯಕತೆಗಾಗಿ ಮಾಡುತ್ತಿರುವ ಪ್ರಮಾಣಿಕ ಹೋರಾಟದಲ್ಲಿ ರಾಜಕೀಯ ಬೇಡ ಎಂದು ಬಬಿತಾ ಪೋಗತ್ ಟ್ವೀಟ್ ಮಾಡಿದ್ದಾರೆ.

ಇದರ ಬೆನ್ನಲ್ಲೇ ಬಜರಂಗ್ ಪೂನಿಯಾ, ಸಾಕ್ಷಿ ಮಲ್ಲಿಕ್ ಸೇರಿದಂತೆ ಹಲವು ಕುಸ್ತಿಪಟುಗಳು ಕೂಡ ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದ್ದು, ನಮ್ಮ ಹೋರಾಟ ಕೇವಲ ಫೆಡರೇಶನ್ ಹಾಗೂ ಅಧ್ಯಕ್ಷರ ವಿರುದ್ಧ. ಇದು ಬಿಜೆಪಿ ಸರ್ಕಾರದ ವಿರುದ್ಧ ನಡೆಸುತ್ತಿರುವ ಹೋರಾಟವಲ್ಲ. ಹೀಗಾಗಿ ನಮ್ಮ ಹೋರಾಟವನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಬೇಡಿ ಎಂದು ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!