Thursday, March 30, 2023

Latest Posts

ದೇಶದಲ್ಲಿ ನೂರಾರು ದೇವಾಲಯಗಳು ಮತ್ತು ಧರ್ಮಶಾಲೆಗಳನ್ನು ನಿರ್ಮಿಸಿದ ಮಹಾನ್ ಪ್ರವರ್ತಕಿ ಈ ರಾಣಿ!

ತ್ರಿವೇಣಿ ಗಂಗಾಧರಪ್ಪ

ಮಹಿಳೆಯರ ಪಾತ್ರ ಕಲಿಯುಗದಲ್ಲಿ ಮಾತ್ರವಲ್ಲ…ಅನಾದಿ ಕಾಲದಿಂದಲೂ ಸಾಮರ್ಥ್ಯವನ್ನು ಕಾಪಾಡಿಕೊಂಡು ಬಂದಿದ್ದಾರೆ. ದಾಸಿಯಿಂದ ಹಿಡಿದು ರಾಜ್ಯವಾಳುವ ರಾನೀಯವರೆಗೆ ಮಹಿಳೆಯ ಪಾತ್ರ ಅಷ್ಟೇ ಮುಖ್ಯವಾದದ್ದು. ಆರಂಭಿಕ-ಆಧುನಿಕ ಭಾರತದಲ್ಲಿ ಮರಾಠ ಸಾಮ್ರಾಜ್ಯದ ಉದಾತ್ತ ರಾಣಿ ಎಂದೇ ಹೆಸರು ಪಡೆದ ಅಹಲ್ಯಾ ಬಾಯಿ ಹೋಳ್ಕರ್ ಇಡೀ ವಿಶ್ವಕ್ಕೆ ಭಾರತದ ಅಪರೂಪದ ವಸ್ತುವನ್ನು ಪರಿಚಯಮಾಡಿಕೊಟ್ಟಿದ್ದಾರೆ.

ಭಾರತದ ಹೆಸರನ್ನು ಜಗತ್ತಿಗೆ ಪರಿಚಯಿಸುವುದಷ್ಟೇ ಅಲ್ಲದೆ ದೇಶದಲ್ಲಿ ನೂರಾರು ದೇವಾಲಯಗಳು ಮತ್ತು ಧರ್ಮಶಾಲೆಗಳನ್ನು ನಿರ್ಮಿಸಿದ ಮಹಾನ್ ಪ್ರವರ್ತಕಿ. ಮೊಘಲ್ ಚಕ್ರವರ್ತಿ ಔರಂಗಜೇಬನಿಂದ ಅಪವಿತ್ರಗೊಳಿಸಿದ ಮತ್ತು ಕೆಡವಲ್ಪಟ್ಟ ಹಿಂದೂ ತೀರ್ಥಯಾತ್ರೆಯ ಕೆಲವು ಅತ್ಯಂತ ಪವಿತ್ರ ಸ್ಥಳಗಳನ್ನು ನವೀಕರಿಸಲು ಮತ್ತು ಪುನರ್ನಿರ್ಮಿಸುವಲ್ಲಿ ಈಕೆ ಯಶಸ್ವಿಯಾಗಿದ್ದಾಳೆ.

ದೇವಾಲಯಗಳ ಕೆತ್ತನೆಗೆ ಸೂಕ್ತ ನಿದರ್ಶನವಾಗಿ ಫಾಲ್ಗು ನದಿಯ ದಂಡೆಯ ಮೇಲಿರುವ ಬಿಹಾರದ ಗಯಾ ಜಿಲ್ಲೆಯ ವಿಷ್ಣುಪಾದ ದೇವಾಲಯವು ಬಂಡೆಗಳು ಮತ್ತು ನೀರಿನಿಂದ ಆವೃತವಾಗಿದೆ. 8 ನೇ ಶತಮಾನದಷ್ಟು ಹಿಂದಿನ ಅದ್ಭುತ ರಚನೆಯು ಪತ್ತಾರಕಟ್ಟಿ ಗ್ರಾಮವನ್ನು ಅತ್ಯುತ್ತಮ ಕಲ್ಲಿನ ಕೆತ್ತನೆಗಳ ನಕ್ಷೆಯಲ್ಲಿ ಇರಿಸಿರುವುದನ್ನು ಗಮನಿಸಬಹುದು. ಇದೆಲ್ಲವೂ ಅಷ್ಟು ಸುಲಭವಾದುದ್ದಲ್ಲ. ಈಗಿನ ಹಾಗೆ ಯಾವುದೇ ಯಂತ್ರಗಳಾಗಲೀ, ಸಲಕರಣೆಗಳಾಗಲೀ ಲಭ್ಯವಿಲ್ಲ. ಸ್ಥಳೀಯವಾಗಿ ನುರಿತ ಪುರುಷರನ್ನು ಪಡೆಯಲು ಸಾಧ್ಯವಾಗದೆ, ರಾಜಸ್ಥಾನದ ಗೌರ್ ಸಮುದಾಯದಿಂದ ಕರೆಸಿಕೊಂಡು ಶಿಲ್ಪ ರಚನೆಯನ್ನು ಪೂರ್ಣಗೊಳಿಸುತ್ತಿದ್ದರು.

ಆಗಲೇ ನೂರಾರು ಕುಟುಂಬಳಿಗೆ ಜೀವನೋಪಾಯ ಸೃಷ್ಟಿಸಿದ ಕೀರ್ತಿ ಕೂಡ ಇವರದ್ದು. ಜೊತೆಗೆ ಕಲೆ ಮತ್ತು ಕರಕುಶಲತೆಯಿಂದ ಒಂದು ಸಣ್ಣ ಹಳ್ಳಿಯನ್ನು ಶ್ರೀಮಂತಗೊಳಿಸಿದರು. ಭಾರತ ಮತ್ತು ಪ್ರಪಂಚದಾದ್ಯಂತದ ಭಕ್ತರು ಮತ್ತು ಖರೀದಿದಾರರು ದೇವರು ಮತ್ತು ದೇವತೆಗಳ ಅಧಿಕೃತ ಶಿಲ್ಪಗಳನ್ನು ಖರೀದಿಸಲು ಗ್ರಾಮಕ್ಕೆ ಭೇಟಿ ನೀಡುತ್ತಿದ್ದರು. ಜೊತೆಗೆ ಕಪ್ಪು ಕಲ್ಲಿನಿಂದ ಮಾಡಿದ ಬಟ್ಟಲುಗಳು ಮತ್ತು ಥಾಲಿಗಳಂತಹ ಅಲಂಕಾರಿಕ ಮತ್ತು ಗೃಹೋಪಯೋಗಿ ವಸ್ತುಗಳಿಗೆ ಕಾಲಕ್ರಮೇಣ ಬೇಡಿಕೆ ಬಂತು.

ಅಹಲ್ಯಾ ಬಾಯಿ ಮಹಾರಾಷ್ಟ್ರದ ಚೌಂಡಿ ಗ್ರಾಮದಲ್ಲಿ (ಇಂದಿನ ಅಹಮದ್‌ನಗರ ಜಿಲ್ಲೆ) ಮಂಕೋಜಿ ಶಿಂಧೆ ಮತ್ತು ಸುಶೀಲಾ ಶಿಂಧೆ ದಂಪತಿಗೆ ಮರಾಠಿ ಹಿಂದೂ ಕುಟುಂಬದಲ್ಲಿ ಮೇ 31, 1725ರಂದು ಜನಿಸಿದರು. ಆಗ ಹೆಣ್ಣುಮಕ್ಕಳು ಶಾಲೆಗೆ ಹೋಗದಿದ್ದರೂ ಅಹಲ್ಯಾಳ ತಂದೆ ಅವಳಿಗೆ ಓದು ಬರಹ ಕಲಿಸಿದರು. ಎಂಟು ವರ್ಷದ ಅಹಲ್ಯಾಳನ್ನು ದೇವಸ್ಥಾನದಲ್ಲಿ ನೋಡಿದ ದೊರೆ ಮಲ್ಹಾರ್ ರಾವ್ ಆಕೆಯ ಧರ್ಮನಿಷ್ಠೆ ಮತ್ತು ಚಾರಿತ್ರ್ಯದಿಂದ ಪ್ರಭಾವಿತನಾಗಿ ಅಹಲ್ಯಾಳನ್ನು ತನ್ನ ಮಗ ಖಂಡೇ ರಾವ್ ಹೋಳ್ಕರ್‌ಗೆ ಮದುವೆ ಮಾಡಿಕೊಂಡನು.

1754 ರಲ್ಲಿ ಭರತಪುರದ ರಾಜನ ವಿರುದ್ಧದ ಕುಂಭೇರ್ ಯುದ್ಧದಲ್ಲಿ ತನ್ನ ಪತಿಯ ಮರಣದ ನಂತರ ಅಹಲ್ಯಾಬಾಯಿ ಮಾಲ್ವಾವನ್ನು ನಿಯಂತ್ರಣಕ್ಕೆ ತೆಗೆದುಕೊಂಡಳು. ಅವಳು ತನ್ನ ಮಾವನ ಮಾರ್ಗದರ್ಶನದಲ್ಲಿ ಆಡಳಿತ ಮತ್ತು ಮಿಲಿಟರಿ ತಂತ್ರಗಳಲ್ಲಿ ಆಡಳಿತ ನಡೆಸಿ ಜನರ ಮೆಚ್ಚುಗೆ ಗಳಿಸಿದರು.

1669ರಲ್ಲಿ ಔರಂಗಜೇಬನಿಂದ ಅಪವಿತ್ರಗೊಳಿಸಿ ಮಸೀದಿಯಾಗಿ ಮಾರ್ಪಡಿಸಲ್ಪಟ್ಟ ವಾರಣಾಸಿಯ ಕಾಶಿ ವಿಶ್ವನಾಥ ದೇವಾಲಯದ ಪುನರ್ನಿರ್ಮಾಣಕ್ಕೆ ಅಹಲ್ಯಾಬಾಯಿ ಧನಸಹಾಯ ಮಾಡಿದರು. ಶ್ರೀ ತಾರಕೇಶ್ವರ, ಶ್ರೀ ಗಂಗಾಜಿ ಸೇರಿದಂತೆ 9 ದೇವಾಲಯಗಳ ನಿರ್ಮಾಣ ದ್ವಾರಕೇಶ್ವರ, ಗೌತಮೇಶ್ವರ, ಮಣಿಕರ್ಣಿಕಾ ಘಾಟ್, ದಶಾಶ್ವಮೇಧ ಘಾಟ್, ಜನನ ಘಾಟ್, ಅಹಲ್ಯಾ ಘಾಟ್, ಶೀತಲ ಘಾಟ್ ಸೇರಿದಂತೆ ಘಾಟ್‌ಗಳ ನಿರ್ಮಾಣ. ಉತ್ತರಕಾಶಿ ಧರ್ಮಶಾಲಾ, ರಾಮೇಶ್ವರ ಪಂಚಕೋಶಿ ಧರ್ಮಶಾಲಾ, ಕಪಿಲ ಧಾರಾ ಧರ್ಮಶಾಲಾ ಮತ್ತು ಉದ್ಯಾನಗಳ ನಿರ್ಮಾಣಗಳನ್ನು ಸಹ ಮಾಡಿದರು.

ಅಹಲ್ಯಾಬಾಯಿ 13 ಆಗಸ್ಟ್ 1795 ರಂದು ತಮ್ಮ 70 ನೇ ವಯಸ್ಸಿನಲ್ಲಿ ನಿಧನರಾದರು. ಆಧುನಿಕ ಕಾಲದ ಮಹಿಳೆ, ಅಹಲ್ಯಾಬಾಯಿ ಆಳ್ವಿಕೆಯು ಮರಾಠ ಸಾಮ್ರಾಜ್ಯದ ಇತಿಹಾಸದಲ್ಲಿ ಸುವರ್ಣ ಯುಗವೆಂದು ಬರೆದುಕೊಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!