ಲಂಬಾಣಿ ಜನಾಂಗವನ್ನು ವಂಚಿಸಿರುವ ಕಾಂಗ್ರೆಸ್‌ಗೆ ಈ ಬಾರಿ ತಕ್ಕಪಾಠ: ಪಿ.ರಾಜೀವ್

ಹೊಸದಿಗಂತ ವರದಿ, ಚಿತ್ರದುರ್ಗ:

ಲಂಬಾಣಿ ಜನಾಂಗಕ್ಕೆ ರಾಜಕೀಯ ಪ್ರಾತಿನಿಧ್ಯ ನೀಡದೆ ವಂಚಿಸಿಕೊಂಡು ಬರುತ್ತಿರುವ ಕಾಂಗ್ರೆಸ್‌ಗೆ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಠಕ್ಕರ್ ಕೊಟ್ಟು ಬಿಜೆಪಿಯನ್ನು ಬೆಂಬಲಿಸಲು ವಿನಾಯಕ ಕಲ್ಯಾಣ ಮಂಟಪದಲ್ಲಿ ಸೋಮವಾರ ನಡೆದ ಶಕ್ತಿ ಪ್ರದರ್ಶನ ಸಮಾವೇಶದಲ್ಲಿ ನಿರ್ಧರಿಸಲಾಯಿತು.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಶಕ್ತಿ ಪ್ರದರ್ಶನ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿ, ಬಿ.ಎಸ್.ಯಡಿಯೂರಪ್ಪನವರು ರಾಜ್ಯದ ಮುಖ್ಯಮಂತ್ರಿಯಾದಾಗ ತಾಂಡ ನಿಗಮಗಳನ್ನು ರಚಿಸಿ ಬಂಜಾರರಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿದರು. ಕಾಂಗ್ರೆಸ್ ಸರ್ಕಾರ ನಮ್ಮ ಜನಾಂಗದವರನ್ನು ಕೆ.ಪಿ.ಎಸ್.ಸಿ. ಸದಸ್ಯರನ್ನಾಗಿಯೂ ಮಾಡಲಿಲ್ಲ. ಲೋಕಸಭೆಯಲ್ಲಿ ಸ್ಪರ್ಧಿಸಲು ಟಿಕೆಟ್ ಕೂಡ ನೀಡದೆ ಮೂಲೆಗುಂಪು ಮಾಡಿದೆ ಎಂದು ದೂರಿದರು.

ಅದೇ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ಎಂ.ಪಿ. ಚುನಾವಣೆಗೆ ಟಿಕೇಟ್ ನೀಡಿ ಸಂಸತ್‌ಗೂ ಕಳಿಸಿಕೊಟ್ಟಿತು. ಹಾಗಾಗಿ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ರಾಜ್ಯಾದ್ಯಂತ ಬಿಜೆಪಿ.ಗೆ ಬೆಂಬಲಿಸಿ ಚಿತ್ರದುರ್ಗ ಕ್ಷೇತ್ರದಿಂದ ಸ್ಪರ್ಧಿಸಿರುವ ಗೋವಿಂದ ಕಾರಜೋಳರನ್ನು ಬಹುಮತಗಳಿಂದ ಗೆಲ್ಲಿಸಿಕೊಳ್ಳಲಾಗುವುದು ಎಂದು ಹೇಳಿದರು.

ಜಿಲ್ಲಾ ಬಂಜಾರ ಸಮಾಜದ ಅಧ್ಯಕ್ಷ ಎಂ.ಸತೀಶ್‌ಕುಮಾರ್ ಮಾತನಾಡಿ, ದೊಡ್ಡ ಜನಾಂಗ ಬಂಜಾರರನ್ನು ಕಾಂಗ್ರೆಸ್ ಸರ್ಕಾರ ಹಿಂದಿನಿಂದಲೂ ನಿರ್ಲಕ್ಷಿಸಿಕೊಂಡು ಬರುತ್ತಿದೆ. ಏಕೈಕ ಶಾಸಕ ರುದ್ರಪ್ಪ ಲಮಾಣಿಗೆ ಸಚಿವ ಸ್ಥಾನ ಕೊಟ್ಟಿಲ್ಲ. ಲೋಕಸಭೆ ಚುನಾವಣೆಯಲ್ಲಿಯೂ ಬಂಜಾರ ಜನಾಂಗಕ್ಕೆ ಟಿಕೇಟ್ ನೀಡದೆ ವಂಚಿಸಿದೆ. ಹಾಗಾಗಿ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಚಿತ್ರದುರ್ಗ ಕ್ಷೇತ್ರದಿಂದ ಸ್ಪರ್ಧಿಸಿರುವ ಬಿಜೆಪಿ.ಯ ಗೋವಿಂದ ಕಾರಜೋಳರನ್ನು ಬಹುಮತಗಳಿಂದ ಗೆಲ್ಲಿಸಿಕೊಳ್ಳುವುದಾಗಿ ತಿಳಿಸಿದರು.

೨೦೨೩ ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಹೊಳಲ್ಕೆರೆ ಕ್ಷೇತ್ರದಿಂದ ಸ್ಪರ್ಧಿಸಿ ಪರಾಭವಗೊಂಡ ಡಾ.ಜಯಸಿಂಹ ಲೋಕನಾಥ್ ಮಾತನಾಡಿ ದೇಶ ಸುಭದ್ರವಾಗಿರಬೇಕಾದರೆ ನರೇಂದ್ರಮೋದಿ ಮೂರನೆ ಬಾರಿಗೆ ಪ್ರಧಾನಿಯಾಗಬೇಕೆಂಬುದು ಎಲ್ಲರ ಆಸೆ. ಅದಕ್ಕಾಗಿ ಈ ಬಾರಿಯ ಚುನಾವಣೆಯಲ್ಲಿ ರಾಜ್ಯಾದ್ಯಂತ ಬಂಜಾರ ಸಮಾಜ ಬಿಜೆಪಿ.ಗೆ ಬೆಂಬಲಿಸುವ ತೀರ್ಮಾನ ತೆಗೆದುಕೊಂಡಿದ್ದು, ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಗೋವಿಂದ ಕಾರಜೋಳ ಅವರನ್ನು ಬೆಂಬಲಿಸಿ ನರೇಂದ್ರ ಮೋದಿಯವರ ಕೈಬಲಪಡಿಸಲಾಗುವುದು ಎಂದರು.

ಕೋವಿಂಡ್‌ನಂತ ಸಂಕಷ್ಟ ಪರಿಸ್ಥಿತಿಯಲ್ಲಿ ದೇಶದ ಪ್ರಧಾನಿ ಮೋದಿರವರು ಪ್ರತಿಯೊಬ್ಬರಿಗೂ ಉಚಿತವಾಗಿ ಲಸಿಕೆ ಕೊಡಿಸಿ ಪ್ರಾಣ ಕಾಪಾಡಿದ್ದಾರೆ. ಇಡಿ ವಿಶ್ವವೇ ಭಾರತದತ್ತ ತಿರುಗಿ ನೋಡುತ್ತಿದೆಯೆಂದರೆ ನರೇಂದ್ರಮೋದಿರವರ ಪಾರದರ್ಶಕ ಆಡಳಿತ ಕಾರಣ. ಹಾಗಾಗಿ ಪಾರ್ಲಿಮೆಂಟ್ ಚುನಾವಣೆಯಲ್ಲಿ ನಮ್ಮ ಮತ ಬಿಜೆಪಿ.ಗೆ ಎಂದು ನುಡಿದರು.

ಹಗರಿಬೊಮ್ಮನಹಳ್ಳಿ ಜೆಡಿಎಸ್ ಶಾಸಕ ನೇಮಿರಾಜ್‌ನಾಯ್ಕ, ಹೂವಿನಹಡಗಲಿ ಶಾಸಕ ಕೃಷ್ಣನಾಯ್ಕ, ಶಿರಹಟ್ಟಿ ಶಾಸಕ ಡಾ.ಚಂದ್ರುಲಮಾಣಿ, ಮಾಜಿ ಶಾಸಕ ಬಸವರಾಜ್‌ನಾಯ್ಕ, ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಎಸ್.ಸಿ.ಲಿಂಬ್ಯನಾಯ್ಕ, ಗಿರೀಶ್‌ನಾಯ್ಕ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಸುರೇಶ್‌ನಾಯ್ಕ, ಸತೀಶ್‌ನಾಯ್ಕ, ಜಯಸಿಂಹ ಕಾಟ್ರೋತ್, ವೀಣಬಾಯಿ, ಸುಶೀಲಾಬಾಯಿ, ಗೋವಿಂದನಾಯ್ಕ, ಚನ್ನಯ್ಯನಹಟ್ಟಿ ಮುಕುಂದನಾಯ್ಕ, ಪಾವಗಡದ ನಾಗಭೂಷಣನಾಯ್ಕ ವೇದಿಕೆಯಲ್ಲಿದ್ದರು.
ಚಿತ್ರದುರ್ಗ ಲೋಕಸಭೆ ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರಗಳಿಂದ ಆಗಮಿಸಿದ್ದ ಬಂಜಾರ ಜನಾಂಗದವರು ಶಕ್ತಿ ಪ್ರದರ್ಶನ ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!