ಬಂಡವಾಳಶಾಹಿಗಳಿಗೆ ದೇಶದ ಆಸ್ತಿ ಮಾರಾಟ: ಪ್ರಿಯಾಂಕಾ ಗಾಂಧಿ ವಾದ್ರಾ ಆರೋಪ

ಹೊಸದಿಗಂತ ವರದಿ, ಚಿತ್ರದುರ್ಗ:

ದೇಶದ ಜನರ ಸಂಘರ್ಷ ಹೆಚ್ಚುತ್ತಲೇ ಸಾಗುತ್ತಿದೆ. ಆದರೆ ದೇಶದ ಪ್ರಧಾನಿ ನರೇಂದ್ರ ಮೋದಿ ತಮ್ಮ ಸ್ನೇಹಿತರಿಗೆ, ಬಂಡವಾಳಶಾಹಿಗಳಿಗೆ ದೇಶದ ಆಸ್ತಿಯನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ವಾಗ್ದಾಳಿ ನಡೆಸಿದರು.

ಚಿತ್ರದುರ್ಗದಲ್ಲಿ ಮಂಗಳವಾರ ನಡೆದ ನ್ಯಾಯ ಸಂಕಲ್ಪ ರ‍್ಯಾಲಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೃಷಿಕರಿಗೆ ಬೆಂಬಲ ಬೆಲೆ, ಜಿಎಸ್‌ಟಿಯಿಂದ ಸಮಸ್ಯೆ ಆಗುತ್ತಿದೆ. ದೇಶದ ರೈತರು ಸಾಲದಲ್ಲಿ ಮುಳುಗಿದ್ದಾರೆ. ಆದರೆ ಪ್ರಧಾನಿ ನರೇಂದ್ರ ಮೋದಿ ಬಂಡವಾಳಶಾಹಿಗಳ ೧೬ ಲಕ್ಷ ಕೋಟಿ ರೂ. ಸಾಲ ಮನ್ನಾ ಮಾಡಿದ್ದಾರೆ. ಯಾರು ಜನಪರವಾಗಿ ಮಾತಾಡುತ್ತಾರೋ ಅವರ ಬಾಯಿ ಮುಚ್ಚಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ದೇಶದಲ್ಲಿ ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆ ಕಾಡುತ್ತಿದೆ. ಆದರೆ ಪ್ರಧಾನಿ ಮೋದಿ ಮಾಧ್ಯಮಗಳಲ್ಲಿ ದೇಶದ ವೈಭವದ ಬಗ್ಗೆ ಮಾತನಾಡುತ್ತಿದ್ದಾರೆ. ಅದು ಕೇವಲ ಮಾಧ್ಯಮಗಳಲ್ಲಿ ಕಾಣುವ ಸತ್ಯ. ಕಳೆದ ೪೫ ವರ್ಷಗಳಲ್ಲಿ ಇಲ್ಲದ ನಿರುದ್ಯೋಗ ಈಗ ಇದೆ. ದೇಶದಲ್ಲಿ ೭೫ ಕೋಟಿ ನಿರುದ್ಯೋಗಿಗಳಿದ್ದಾರೆ. ಕೇಂದ್ರದಲ್ಲಿ ೩೦ ಲಕ್ಷ ಹುದ್ದೆಗಳು ಖಾಲಿ ಇವೆ. ಬೆಲೆ ಏರಿಕೆ ಎಂಬುದು ದೊಡ್ಡ ಸಮಸ್ಯೆ ಸೃಷ್ಠಿಸಿದೆ. ದುಡಿಮೆ ಮತ್ತು ಖರ್ಚು ನಿಭಾಯಿಸುವಲ್ಲಿ ಜನಸಾಮಾನ್ಯರು ಜೀವನ ನಡೆಸುವುದು ದುಸ್ತರವಾಗಿದೆ ಎಂದು ದೂರಿದರು.

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾತನಾಡಿದವರನ್ನು ಹತ್ತಿಕ್ಕುವ ಕೆಲಸ ನಡೆಯುತ್ತಿದೆ. ವಿರೋಧ ಪಕ್ಷದವರ ವಿರುದ್ಧ ದಾಲಿ ನಡೆಸಿ ಅವರ ಧ್ವನಿ ಅಡಗಿಸುವ ಕೆಲಸ ಮಾಡಲಾಗುತ್ತಿದೆ. ಸಾಧ್ಯವಾದರೆ ಜೈಲಿಗೂ ಕಳಿಸಲಾಗುತ್ತಿದೆ. ಆದರೆ ಹಣ ಲೂಟಿ ಮಾಡಿ ಅವರಿಗೆ ದಾನ ಮಾಡಿದವರ ಹೆಸರುಗಳನ್ನು ಎಲೆಕ್ಟ್ರೋ ಬಾಂಡ್‌ಗಳ ಮೂಲಕ ಮುಚ್ಚಿಡಲಾಗುತ್ತಿದೆ. ಈ ಕುರಿತು ಸುಪ್ರೀಂಕೋರ್ಟ್ ಸೂಚನೆ ಮೇರೆಗೆ ಹೆಸರು ಬಹಿರಂಗ ಮಾಡಲಾಗಿದೆ. ಭ್ರಷ್ಟ ಕಂಪನಿಗಳು ಕೇಂದ್ರ ಸರ್ಕಾರಕ್ಕೆ ದೇಣಿಗೆ ನೀಡಿವೆ. ಇದರಿಂದ ಆ ಕಂಪನಿಗಳ ಭ್ರಷ್ಟಾಚಾರವನ್ನು ಮುಚ್ಚಿ ಹಾಕಲಾಗಿದೆ ಎಂದು ಆರೋಪಿಸಿದರು.

ಪ್ರಧಾನಿ ನರೇಂದ್ರ ಮೋದಿ ಜನರ ಕಷ್ಟದ ಬಗ್ಗೆ ಮಾತನಾಡುವುದಿಲ್ಲ. ಕೇವಲ ಜಾತಿ, ಧರ್ಮದ ಬಗ್ಗೆ ಮಾತನಾಡುತ್ತಾರೆ. ಈ ಬಾರಿ ೪೦೦ಕ್ಕೂ ಹೆಚ್ಚು ಸೀಟ್ ಕೊಡಿ ಎನ್ನುತ್ತಿದ್ದಾರೆ. ಬಹುಮತ ಬಂದಲ್ಲಿ ಸಂವಿಧಾನ ಬದಲಾಯಿಸುವ ಹುನ್ನಾರ ನಡೆಸುತ್ತಿದ್ದಾರೆ. ಸಂವಿಧಾನ ಅನೇಕ ಹಕ್ಕುಗಳನ್ನು ನೀಡಿದೆ. ಸಂವಿಧಾನದಿಂದ ನೀವು ಉನ್ನತ ಹುದ್ದೆಯಲ್ಲಿದ್ದೀರಿ. ಅಂತಹ ಸಂವಿಧಾನ ಬದಲಿಸುವ ಮಾತುಗಳನ್ನು ಬಿಜೆಪಿಯವರು ಆಡುತ್ತಿದ್ದಾರೆ. ಇದರಿಂದ ದೇಶದ ಜನರು ಗೊಂದಲದಲ್ಲಿ ಮುಳುಗಿದ್ದಾರೆ ಎಂದರು.

ರಾಜ್ಯ ಸಿಎಂ ಕೇಂದ್ರಕ್ಕೆ ಅನೇಕ ಸಲ ಅನುದಾನ ಕೇಳಿದರೂ ಈವರೆಗೆ ಒಂದು ಪೈಸೆ ಕೊಡಲಿಲ್ಲ.ಶುದ್ಧ ಹೃದಯದಿಂದ ಮೋದಿ ಕೆಲಸ ಮಾಡುತ್ತಿಲ್ಲ. ರಾಯಚೂರಲ್ಲಿ ಏಮ್ಸ್ ನಿರ್ಮಾಣದ ಕನಸಿದೆ, ಈವರೆಗೆ ಆಗಿಲ್ಲ ಕಳಸ ಬಂಡೂರಿ ಯೋಜನೆ ಈವರೆಗೆ ಕೇಂದ್ರದಿಂದ ಮಂಜೂರಾಗಿಲ್ಲ ಭದ್ರಾ ಯೋಜನೆಗೆ ಕೇಂದ್ರ ಸರ್ಕಾರ ಹಣ ಕೊಡಲಿಲ್ಲ ರಾಜ್ಯದ ತೆರಿಗೆ ಹಣ ಸಹ ನೀಡದೆ ನಷ್ಟ ಮಾಡಿದ್ದಾರೆ. ಅವರಿಗೆ ಎಲ್ಲಿ ರಾಜಕೀಯ ಲಾಭ ಆಗಿದೆ ಅಲ್ಲಿ ಅನುದಾನ ಕೊಡುತ್ತಾರೆ ಎಂದು ಕಿಡಿಕಾರಿದರು.

ರಾಜ್ಯ ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರಂಟಿ ಜಾರಿಗೊಳಿಸಿದೆ. ಅದರಂತೆ ಕೇಂದ್ರದಲ್ಲಿ ನಮ್ಮ ಸರ್ಕಾರ ಬಂದರೆ ಪ್ರತಿ ಬಿಪಿಎಲ್ ಕುಟುಂಬದ ಮಹಿಳೆಗೆ ೧ ಲಕ್ಷ ಸೇರಿ ಹಲವು ಗ್ಯಾರಂಟಿಗಳನ್ನು ಜಾರಿ ಮಾಡುತ್ತದೆ. ರೈತರ ಸಾಲ ಮನ್ನಾ ಮಾಡಲಾಗುವುದು. ಇದರಿಂದ ಬಡವರು, ರೈತರ ಬದುಕು ಹಸನಾಗಲಿದೆ. ಈ ನಿಟ್ಟಿನಲ್ಲಿ ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬಹುಮತ ನೀಡುವ ಮೂಲಕ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ತರಬೇಕು ಎಂದು ಕೋರಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!