ಈ ಬಾರಿ ಕೊಡಗಿನಲ್ಲಿ ಕಾಂಗ್ರೆಸ್ ಗೆಲುವು ನಿಶ್ಚಿತ: ಸಂಕೇತ್ ಪೂವಯ್ಯ

ಹೊಸ ದಿಗಂತ ವರದಿ, ಮಡಿಕೇರಿ:

ಕೊಡಗಿನ ಮೂಲಭೂತ ಸಮಸ್ಯೆಗಳಿಗೆ ಸ್ಪಂದಿಸದೆ ವಿಜಯ ಸಂಕಲ್ಪ ಯಾತ್ರೆಯನ್ನು ಬಿಜೆಪಿ ನಡೆಸಿದ್ದರು, ಆ ಸರ್ಕಾರದ ಬಗ್ಗೆ ಜನತೆ ಭ್ರಮನಿರಸನಗೊಂಡಿರುವುದರಿಂದ ಈ ಬಾರಿ ಜಿಲ್ಲೆಯಲ್ಲಿ ಕಾಂಗ್ರೆಸ್‍ಗೆ ಗೆಲುವು ನಿಶ್ಚಿತವೆಂದು ಕೆಪಿಸಿಸಿ ವಕ್ತಾರ ಸಂಕೇತ್ ಪೂವಯ್ಯ ದೃಢವಾಗಿ ನುಡಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮ ಪಂಚಾಯ್ತಿಯಿಂದ ಹಿಡಿದು ಕೇಂದ್ರದವರೆಗೆ ಬಿಜೆಪಿ ಅಧಿಕಾರದಲ್ಲಿರುವುದಲ್ಲದೆ, ಜಿಲ್ಲೆಯ ಎರಡು ಕ್ಷೇತ್ರಗಳಲ್ಲೂ ಬಿಜೆಪಿ ಶಾಸಕರಿದ್ದಾರೆ. ಹೀಗಿದ್ದೂ ಜಿಲ್ಲೆಯ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ಇವರು ಸಂಪೂರ್ಣ ವಿಫಲರಾಗಿದ್ದಾರೆ. ಇದರಿಂದ ಹತಾಶರಾಗಿರುವ ಜನತೆ ಈ ಬಾರಿಯ ಚುನಾವಣೆಯಲ್ಲಿ ಬದಲಾವಣೆಯನ್ನು ಬಯಸುತ್ತಿದ್ದಾರೆಂದು ಅಭಿಪ್ರಾಯಿಸಿದರು.

ಕೊಡಗಿನ ಪ್ರಮುಖ ಕೃಷಿಯಾಗಿರುವ ಕಾಫಿ ವಾಣಿಜ್ಯ ಇಲಾಖೆಯ ವ್ಯಾಪ್ತಿಗೆ ಒಳಪಡುತ್ತದೆ. ಈ ಕೃಷಿಗೆ ಸಂಬಂಧಪಟ್ಟಂತೆ ಸೂಕ್ತ ಆಮದು ನೀತಿಯನ್ನು ರೂಪಿಸುವುದು ಸೇರಿದಂತೆ ಯಾವುದೇ ಗಂಭೀರ ವಿಚಾರಗಳ ಬಗ್ಗೆ ಬಿಜೆಪಿ ಸೂಕ್ತ ಕಾರ್ಯಕ್ರಮಗಳನ್ನು ರೂಪಿಸುವಲ್ಲಿ ಸೋತಿದೆಯೆಂದು ಆರೋಪಿಸಿದರು.

ಸೋಲುವ ಕ್ಷೇತ್ರಕ್ಕೆ ಬರಲಾರರು
ಬಿಜೆಪಿಯಿಂದ ನಡೆದ ವಿಜಯ ಸಂಕಲ್ಪ ಯಾತ್ರೆಗೆ ಆ ಪಕ್ಷದ ಪ್ರಮುಖರಾದ ಬಿ.ಎಸ್. ಯಡಿಯೂರಪ್ಪ ಅವರು ಬಂದಿಲ್ಲ. ಸೋಲುವ ಕ್ಷೇತ್ರಕ್ಕೆ ಅವರು ಬರುವುದಿಲ್ಲವೆಂದು ಗೇಲಿ ಮಾಡಿದ ಸಂಕೇತ್ ಪೂವಯ್ಯ, ಸಂಸದರಾಗಲಿ, ಉಸ್ತುವಾರಿ ಸಚಿವರಾಗಲಿ ಇದರಲ್ಲಿ ಕಾಣಿಸಿಕೊಳ್ಳದಿರುವುದಕ್ಕೆ ಕಾರಣವೆಂದರೆ, ಇಲ್ಲಿನ ಸಮಸ್ಯೆಗಳ ಬಗೆಹರಿಕೆಗೆ ಏನನ್ನೂ ಮಾಡದ ಅವರು, ಜನರ ಮುಂದೆ ಬರುವುದಾದರು ಹೇಗೆಂದು ಕುಟುಕಿದರು.

ಜಿಲ್ಲಾ ಕಾಂಗ್ರೆಸ್ ವಕ್ತಾರ ಟಾಟು ಮೊಣ್ಣಪ್ಪ, ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷ ಜಯೇಂದ್ರ ಬಿ.ಇ. ಮಾತನಾಡಿದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೊಲ್ಯದ ಗಿರೀಶ್, ನಗರ ಕಾಂಗ್ರೆಸ್ ಅಧ್ಯಕ್ಷ ಬಿ.ವೈ. ರಾಜೇಶ್ ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!