ಹೊಸದಿಗಂತ ವರದಿ ಕಾರವಾರ:
ಇತ್ತೀಚೆಗೆ ಯಲ್ಲಾಪುರ ತಾಲೂಕಿನ ಅರಬೈಲ್ ಘಟ್ಟದ ಬಳಿಯ ತಳಿಕುಂಬ್ರಿ ಬಸ್ ತಂಗುದಾಣದ ಬಳಿ ಕಾರೊಂದು ಬೆಂಕಿಗಾಹುತಿಯಾಗಿ ವ್ಯಕ್ತಿಯೋರ್ವ ಸಜೀವ ದಹನಗೊಂಡ ಘಟನೆ ಒಂದು ಪೂರ್ವಯೋಜಿತ ಕೊಲೆ ಸಂಚು ಎನ್ನುವುದು ಪೊಲೀಸ್ ತನಿಖೆಯಿಂದ ತಿಳಿದು ಬಂದಿದ್ದು, ಘಟನೆಗೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಹಳೇ ಹುಬ್ಬಳ್ಳಿಯ ಹೆಗ್ಗೇರಿ ನಿವಾಸಿ ಅಬ್ದುಲ್ ನಹೀಮ್ ಬಸೀರ ಅಹಮದ್ ಮುಜಾವರ್, ದಿವಡಗಿ ಓಣಿ ಹಳೇ ಹುಬ್ಬಳ್ಳಿ ನಿವಾಸಿ ಮೌಲಾಸಾಬ ಬಾಬಾಜಾನ ಬಾಡ ಮತ್ತು ಹಳೆ ಹುಬ್ಬಳ್ಳಿಯ ಗಾರ್ಡನ ಪೇಟೆ ನಿವಾಸಿ ದಾದಾಪೀರ್ ಯಾನೆ ಅಪ್ತಾಬ್ ಮೆಹಬೂಬ್ ಸಾಬ್ ಬಾಳಸಂಗಿ ಬಂಧಿತ ಆರೋಪಿಗಳಾಗಿದ್ದು, ಕೃತ್ಯಕ್ಕೆ ಬಳಸಿದ ಬಲೇನೊ ಕಾರ್, ಬರ್ಗಮನ್ ಮತ್ತು ಹೊಂಡಾ ಎಕ್ಟಿವಾ ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.
ಇದೇ ಏಪ್ರಿಲ್ 8 ರಂದು ಬೆಳಗಿನ ಜಾವ 5 ಗಂಟೆಯಿಂದ 7 ಗಂಟೆ ನಡುವಿನ ಅವಧಿಯಲ್ಲಿ ಹುಬ್ಬಳ್ಳಿ ಕಡೆಯಿಂದ ಅಂಕೋಲಾ ಕಡೆ ಬರುತ್ತಿದ್ದ ವೋಕ್ಸ್ ವ್ಯಾಗನ್ ಕಾರು ಬೆಂಕಿಗಾಹುತಿಯಾಗಿ ಸಂಪೂರ್ಣ ಸುಟ್ಟು ಕರುಕಲಾಗಿ ಹೋಗಿತ್ತು. ಕಾರಿನ ಚಾಲಕ ಸಹ ಯಾವದೇ ರೀತಿಯ ಗುರುತು ಸಿಗದಂತೆ ಸುಟ್ಟು ಹೋಗಿದ್ದ ಆರಂಭದಲ್ಲಿ ಆಕಸ್ಮಿಕ ತಾಂತ್ರಿಕ ದೋಷದಿಂದ ಅವಘಡ ಸಂಭವಿಸಿರಬಹುದು ಎಂದು ಪ್ರಕರಣ ದಾಖಲಿಸಿದ ಯಲ್ಲಾಪುರ ಪೊಲೀಸರು ಕಾರಿನಲ್ಲಿ ಸುಟ್ಟು ಹೋಗಿರುವ ವ್ಯಕ್ತಿಯ ಕುರಿತಂತೆ ಪತ್ತೆ ಹಚ್ಚುವ ಉದ್ದೇಶದಿಂದ ತನಿಖೆ ನಡೆಸಿದಾರೆ.
ಇದನ್ನೂ ಓದಿ:
ಕಾರಿನ ನೋಂದಣಿ ಸಂಖ್ಯೆ ಕೆ.ಎ04ಎಂ.ಜೆ 8986 ಎನ್ನುವುದನ್ನು ತಿಳಿದುಕೊಂಡು ಕಾರಿನಲ್ಲಿ ಮೃತಪಟ್ಟು ಸುಟ್ಟ ಹೋಗಿರುವ ವ್ಯಕ್ತಿ ಬೆಳಗಾವಿ ಕನಬರಗಿ ನಿವಾಸಿ ನಿತೇಶ ಜಗನ್ನಾಥ ಧಾಪಳೆ(35) ಎನ್ನುವದನ್ನು ಪತ್ತೆ ಹಚ್ಚಿದ್ದು ಮೃತನ ತಂದೆ ತನ್ನ ಮಗನ ಸಾವಿನ ಕುರಿತು ಸಂಶಯ ವ್ಯಕ್ತ ಪಡಿಸಿ ಯಾರೋ ಮಗನನ್ನು ಕೊಲೆ ಮಾಡಿ ರಸ್ತೆಯಲ್ಲಿ ಅಪಘಾತ, ಬೆಂಕಿ ಅನಾಹುತ ಸಂಭವಿಸಿದ ರೀತಿಯಲ್ಲಿ ಕೃತ್ಯ ಎಸಗಿರುವ ಸಾಧ್ಯತೆ ಇದೆ ಎಂದು ಹೇಳಿಕೆ ನೀಡಿದ್ದರಿಂದ ಎರಡು ಪ್ರತ್ಯೇಕ ತಂಡಗಳನ್ನು ರಚಿಸಿ ತನಿಖೆ ಕೈಗೊಂಡಿದ್ದರು.
ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ,ಶಿರಸಿ ವಿಭಾಗದ ಡಿ.ವೈ.ಎಸ್.ಪಿ ಗೀತಾ ಪಾಟೀಲ ಅವರ ಮಾರ್ಗದರ್ಶನದಲ್ಲಿ ಯಲ್ಲಾಪುರ ಪೊಲೀಸ್ ನಿರೀಕ್ಷಕ ರಮೇಶ ಹನಾಪುರ ಅವರ ನೇತೃತ್ವದಲ್ಲಿ ಪಿ.ಎಸ್.ಐ ರಾಜಶೇಖರ ವಂದಲಿ, ಸಿದ್ಧಪ್ಪ ಗುಡಿ ಮತ್ತು ಸಿಬ್ಬಂದಿಗಳು ತನಿಖೆ ನಡೆಸಿ ಕೊಲೆ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಯಾವ ಉದ್ದೇಶಕ್ಕೆ ಕೊಲೆ ಮಾಡಲಾಗಿದೆ, ಆರೋಪಿತರ ತಂತ್ರಗಾರಿಕೆ ಕುರಿತಂತೆ ಮಾಹಿತಿ ಲಭ್ಯವಾಗಬೇಕಿದೆ.



