ಹೊಸದಿಗಂತ ವರದಿ,ದಾವಣಗೆರೆ:
ಪಕ್ಷದ ಮೇಲೆ ಪ್ರೀತಿ, ಗೌರವ ಇದ್ದವರು ಬಿಜೆಪಿಯಲ್ಲಿ ಉಳಿಯುತ್ತಾರೆ. ಪಕ್ಷವನ್ನು ತಾಯಿಯಂತೆ ಭಾವಿಸುವವರು ಎಲ್ಲೂ ಹೋಗುವುದಿಲ್ಲ ಎಂದು ಮಾಜಿ ಸಚಿವ ಎಸ್.ಎ.ರಾಮದಾಸ್ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವೂ ಕೂಡ ಅನೇಕ ಪರೀಕ್ಷೆ ಎದುರಿಸಿದ್ದೇವೆ. ನಾವೆಲ್ಲ ಪಕ್ಷ ಕಟ್ಟಿ ಬೆಳಸಿದವರು. ಆದರೂ ಪಕ್ಷದ ನಿರ್ಣಯಕ್ಕೆ ಎಲ್ಲರೂ ತಲೆ ಬಾಗಬೇಕು. ಪಕ್ಷ ಬಿಟ್ಟು ಹೋಗಿ ಪಶ್ಚಾತ್ತಾಪ ಪಡುವಂತಾಗಬಾರದು. ಪಕ್ಷ ನಮಗೆ ಎಲ್ಲವನ್ನೂ ಕೊಟ್ಟಿದೆ. ಪಕ್ಷದಲ್ಲಿ ಈಗಲೂ ನಾವು ಇರುವುದು ತೃಪ್ತಿ ತಂದಿದೆ ಎಂದರು.
ಸಧ್ಯ ದೇಶದಲ್ಲಿ ಪಂಚರಾಜ್ಯಗಳ ಚುನಾವಣೆ ನಡೆಯುತ್ತಿದೆ. ವಿರೋಧ ಪಕ್ಷದ ನಾಯಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ ವರಿಷ್ಠರಿಗೆ ಬಿಟ್ಟ ವಿಚಾರ. ನಾವೆಲ್ಲ ಕಾರ್ಯಕರ್ತರು ಅಧ್ಯಕ್ಷ, ನಾಯಕರನ್ನು ನೋಡದೆ ಕೆಲಸ ಮಾಡುತ್ತಿದ್ದೇವೆ ಎಂದು ಅವರು ನುಡಿದರು.
ಬಿಜೆಪಿ ಹಾಗೂ ಜೆಡಿಎಸ್ ಹೊಂದಾಣಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ಕೇಂದ್ರ ನಾಯಕರು ಸ್ಪಷ್ಟನೆ ನೀಡಿದ್ದಾರೆ. ಎನ್‌ಡಿಎ ಪಾಲುದಾರರಾಗಿ ಜೆಡಿಎಸ್ ಬಂದಿದೆ ಎಂಬುದನ್ನು ತಿಳಿಸಿದ್ದಾರೆ. ಇನ್ನೂ ಅದರ ಬಗ್ಗೆ ಮಾತನಾಡುವುದರಲ್ಲಿ ಅರ್ಥವಿಲ್ಲ ಎಂದು ಅವರು ಹೇಳಿದರು.
ಮುಸ್ಲಿಂ, ಕ್ರೈಸ್ತರಿಗೆ ಜಗತ್ತಿನಲ್ಲಿ ಹಲವು ದೇಶಗಳಿವೆ. ಆದರೆ ಹಿಂದೂಗಳಿಗೆ ಇರುವುದು ಭಾರತವೊಂದೇ ದೇಶ. ಭರತ ಆಳಿದ ನಾಡು ಭಾರತ ಆಗಿದೆ. ಅಂಬೇಡ್ಕರ್ ಸಂವಿಧಾನದಲ್ಲೂ ಭಾರತ ಎಂಬುದು ಇದೆ. ಇಂಡಿಯಾ ಎಂಬುದು ಬ್ರಿಟೀಶರು ಬಿಟ್ಟು ಹೋದ ಹೆಸರು. ಇಂಡಿಯಾಕ್ಕಿಂತಲೂ ಭಾರತ ಎನ್ನುವುದು ಗರ್ವದ ವಿಚಾರ. ಶಾಲಾ ಪಠ್ಯಪುಸ್ತಕಗಳಲ್ಲಿ ದೇಶಪ್ರೇಮ ಬೆಳೆಸುವ ಕೆಲಸವಾಗಬೇಕು ಎಂದು ಅವರು ಇದೇ ವೇಳೆ ತಿಳಿಸಿದರು.