ಹೊಸದಿಗಂತ ವರದಿ ರಾಮನಗರ :
ಬಿಡದಿ ರೈಲು ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಕರೆ ಬಂದಿದೆ. ರೈಲ್ವೆ ಕಂಟ್ರೋಲ್ ರೂಂಗೆ ತಡರಾತ್ರಿ ಕರೆ ಮಾಡಿರುವ ದುಷ್ಕರ್ಮಿಗಳು, ರೈಲು ನಿಲ್ದಾಣ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದಾರೆ.
ಬಾಂಬ್ ಬೆದರಿಕೆ ಕರೆ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನ ದಳ ರೈಲ್ವೆ ಫ್ಲಾಟ್ಫಾರಂನಲ್ಲಿ ಪರಿಶೀಲನೆ ನಡೆಸಿದ್ದು, ಅದೊಂದು ಹುಸಿ ಬಾಂಬ್ ಬೆದರಿಕೆ ಕರೆ ಎಂಬುದು ದೃಢಪಟ್ಟಿದೆ.
ರೈಲ್ವೆ ಅಧಿಕಾರಿಗಳು ಹಾಗೂ ರಾಮನಗರ ಡಿವೈಎಸ್ಪಿ ನೇತೃತ್ವದಲ್ಲಿ ಪರಿಶೀಲನೆ ನಡೆಸಲಾಗಿದೆ. ಬಿಡದಿ ರೈಲ್ವೆ ನಿಲ್ದಾದಲ್ಲಿ ಎಲ್ಲಾ ಕಡೆಗಳಲ್ಲಿ ಪರಿಶೀಲನೆ ನಡೆಸಲಾಗಿದ್ದು, ರೈಲ್ವೆ ನಿಲ್ದಾಣಕ್ಕೆ ಬರುವ ಪ್ರಯಾಣಿಕರ ಮೇಲೂ ನಿಗಾ ಇರಿಸಲಾಗಿದೆ.
ಇತ್ತೀಚಿಗೆ ಬಿಡದಿಯ ಪ್ರತಿಷ್ಠಿತ ಕಂಪನಿಯ ಶೌಚಾಲಯದ ಗೋಡೆ ಮೇಲೆ ಪಾಕಿಸ್ತಾನ ಪರವಾಗಿ ಬರಹ ಬರೆದ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಲಾಗಿತ್ತು. ಈ ಆರೋಪಿಗಳನ್ನು ಬಿಡುಗಡೆ ಮಾಡಬೇಕು ಎಂದು ದುಷ್ಕರ್ಮಿಗಳು ಕರೆ ಮಾಡಿದ್ದ ವೇಳೆಯಲ್ಲಿ ಹೇಳಿರುವುದಾಗಿ ತಿಳಿದುಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಕರ್ನಾಟಕ ಮೂಲದ ಹೈಮದ್ ಹುಸೇನ್ (21) ಸಾಧಿಕ್ (24) ಎಂಬವರನ್ನು ಬಿಡದಿ ಪೊಲೀಸರು ಬಂಧಿಸಿದ್ದರು.