ಮುಕೇಶ್‌ ಅಂಬಾನಿಗೆ ಬೆದರಿಕೆ ಕರೆ: ಬಿಹಾರ ಮೂಲದ ವ್ಯಕ್ತಿಯ ಬಂಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮುಂಬೈ ಪೊಲೀಸರು ಹಾಗೂ ಬಿಹಾರ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಮುಕೇಶ್ ಅಂಬಾನಿ ಮತ್ತು ಅವರ ಕುಟುಂಬ ಸದಸ್ಯರಿಗೆ ಕೊಲೆ ಬೆದರಿಕೆ ಕರೆಗಳನ್ನು ಮಾಡಿದ್ದಕ್ಕಾಗಿ ಬಿಹಾರದ ದರ್ಭಾಂಗದ ವ್ಯಕ್ತಿಯನ್ನು ಬಂಧಿಸಿದ್ದಾರೆ. ನಿರುದ್ಯೋಗಿಯಾಗಿರುವ ಈ ಆರೋಪಿಯನ್ನು ರಾಕೇಶ್ ಕುಮಾರ್ ಮಿಶ್ರಾ ಎಂದು ಗುರುತಿಸಲಾಗಿದ್ದು, ಆತನನ್ನು ಮುಂಬೈಗೆ ಕರೆತರಲಾಗುತ್ತಿದೆ.

ಬುಧವಾರ, ಮುಂಬೈನ ಸರ್ ಎಚ್‌ಎನ್ ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಗೆ ಐದು ಗಂಟೆಗಳಲ್ಲಿ ಎರಡು ಬೆದರಿಕೆ ಕರೆಗಳು ಬಂದಿದ್ದು, ಕರೆ ಮಾಡಿದವರು ಆಸ್ಪತ್ರೆಯನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಅಂಬಾನಿ ಕುಟುಂಬದ ಕೆಲವರ ವಿರುದ್ಧವೂ ಬೆದರಿಕೆ ಹಾಕಲಾಗಿತ್ತು ಎನ್ನಲಾಗಿದೆ.

“ಕೆಲವೇ ಗಂಟೆಗಳಲ್ಲಿ, ಬಿಹಾರ ಪೊಲೀಸರ ಸಹಾಯದಿಂದ, ಒಬ್ಬ ಆರೋಪಿಯನ್ನು ಬಿಹಾರದ ದರ್ಭಾಂಗಾದಿಂದ ಬಂಧಿಸಲಾಗಿದೆ ಮತ್ತು ಮುಂಬೈ ಪೊಲೀಸರ ತಂಡವು ಆರೋಪಿಗಳೊಂದಿಗೆ ಮುಂಬೈಗೆ ಮರಳುತ್ತಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ” ಎಂದು ಡಿಸಿಪಿ ನೀಲೋತ್ಪಾಲ್ ಹೇಳಿರುವುದನ್ನು ಎಎನ್‌ಐ ವರದಿ ಉಲ್ಲೇಖಿಸಿದೆ.
ಮಧ್ಯಾಹ್ನ 12.45 ಕ್ಕೆ ಮತ್ತು ಮತ್ತೆ ಸಂಜೆ 5.04 ಕ್ಕೆ ಸರ್ ಎಚ್‌ಎನ್ ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಯ ಕಾಲ್ ಸೆಂಟರ್‌ಗೆ ಆಸ್ಪತ್ರೆಯನ್ನು ಸ್ಫೋಟಿಸುವ ಬೆದರಿಕೆ ಮತ್ತು ಮುಕೇಶ್ ಅಂಬಾನಿ, ನೀತಾ ಅಂಬಾನಿ, ಆಕಾಶ್ ಅಂಬಾನಿ ಮತ್ತು ಅನಂತ್ ಅಂಬಾನಿ ಅವರ ಪ್ರಾಣ ತೆಗೆಯುವ ಬೆದರಿಕೆಯ ಕರೆಯನ್ನು ಆರೋಪಿ ಮಾಡಿದ್ದ ಎನ್ನಲಾಗಿದೆ.

ಆರೋಪಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 506(2),507 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ನಿರುದ್ಯೋಗಿಯಾಗಿದ್ದು, ಬೆದರಿಕೆ ಕರೆಗಳ ಹಿಂದಿನ ಉದ್ದೇಶವನ್ನು ಬಹಿರಂಗಪಡಿಸಿಲ್ಲ.

ಈ ವರ್ಷದ ಆಗಸ್ಟ್‌ನಲ್ಲಿ, ಆಭರಣ ವ್ಯಾಪಾರಿಯೊಬ್ಬರು ಆಸ್ಪತ್ರೆಗೆ ಕರೆ ಮಾಡಿ ಮುಕೇಶ್ ಅಂಬಾನಿ ಮತ್ತು ಅವರ ಕುಟುಂಬ ಸದಸ್ಯರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ ನಂತರ ಅವರನ್ನು ಬಂಧಿಸಲಾಗಿತ್ತು. ಫೆಬ್ರವರಿ 2021 ರಲ್ಲಿ, ಅಂಬಾನಿ ಅವರ ದಕ್ಷಿಣ ಮುಂಬೈ ನಿವಾಸ ‘ಆಂಟಿಲಿಯಾ’ ಬಳಿ ಸ್ಫೋಟಕಗಳನ್ನು ತುಂಬಿದ SUV ಪತ್ತೆಯಾಗಿತ್ತು. ನಂತರ, ಘಟನೆಗೆ ಸಂಬಂಧಿಸಿದಂತೆ ಆಗಿನ ಪೊಲೀಸ್ ಅಧಿಕಾರಿ ಸಚಿನ್‌ವಾಜ್ ಸೇರಿದಂತೆ ಕೆಲವರನ್ನು ಬಂಧಿಸಲಾಗಿತ್ತು.

ಇತ್ತೀಚೆಗೆ, ಗೃಹ ಸಚಿವಾಲಯವು ಗುಪ್ತಚರ ಸಂಸ್ಥೆಯ ಬೆದರಿಕೆ ಗ್ರಹಿಕೆ ವರದಿಯ ಆಧಾರದ ಮೇಲೆ ಮುಕೇಶ್ ಅಂಬಾನಿಯ ಭದ್ರತೆಯನ್ನು ‘Z +’ ವರ್ಗಕ್ಕೆ ಹೆಚ್ಚಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!