ಮೂವರು ಶಂಕಿತ ಉಗ್ರರ ಬಂಧನ: ದೆಹಲಿ ಪೊಲೀಸ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌  

ಪುಣೆ ಬಾಂಬ್​ ಸ್ಫೋಟದ ಪ್ರಮುಖ ಆರೋಪಿ, ಶಂಕಿತ ಐಸಿಸ್​ ಉಗ್ರ ಶಹನವಾಹ್​ ಆಲಿಯಾಸ್​ ಶಫಿ ಉಜ್ಜಾಮನನ್ನು ದೆಹಲಿ ವಿಶೇಷ ಪೊಲೀಸ್​ ಪಡೆ ಸೋಮವಾರ ಬಂಧಿಸಿದೆ.

ಶಂಕಿತ ಉಗ್ರ ತನ್ನ ಪತ್ನಿ ಬಸಂತಿ ಪಟೇಲ್​ ಅವರನ್ನು ಇಸ್ಲಾಂಗೆ ಮತಾಂತರಗೊಳಿಸಿದ್ದನು. ಗಣಿ ಎಂಜಿನಿಯರ್​ ಆಗಿದ್ದ ಎಂಬ ಮಾಹಿತಿ ಬಯಲಾಗಿದೆ.

ಈ ಬಗ್ಗೆ ಮಾಹಿತಿ ನೀಡಿದ ದೆಹಲಿ ವಿಶೇಷ ಪೊಲೀಸ್ ಆಯುಕ್ತ ಎಚ್‌.ಎಸ್.ಧಲಿವಾಲ್, ಶಂಕಿತ ಐಸಿಸ್ ಭಯೋತ್ಪಾದಕ ಶಹನವಾಜ್ ತನ್ನ ಪತ್ನಿ ಬಸಂತಿಯನ್ನು ಮರಿಯಮ್ ಆಗಿ ಇಸ್ಲಾಂಗೆ ಮತಾಂತರಿಸಿದ್ದಾನೆ. ಈತನೊಂದಿಗೆ ಇನ್ನಿಬ್ಬರು ಮೋಸ್ಟ್​ ವಾಂಟೆಡ್​ ಉಗ್ರರನ್ನೂ ಬಂಧಿಸಲಾಗಿದೆ ಎಂದು ತಿಳಿಸಿದರು.

ಶಹನವಾಜ್​ನನ್ನು ಇಂದು ದಕ್ಷಿಣ ದೆಹಲಿಯ ಜೈತ್‌ಪುರದಿಂದ ಬಂಧಿಸಲಾಯಿತು. ಈತನ ತಲೆಗೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್​ಐಎ) 3 ಲಕ್ಷ ರೂಪಾಯಿ ಬಹುಮಾನ ಘೋಷಿಸಿತ್ತು. ಸಹಚರರಾದ ಮೊಹಮ್ಮದ್ ರಿಜ್ವಾನ್ ಅಶ್ರಫ್​ನನ್ನು ಲಖನೌನಲ್ಲಿ, ಮೊಹಮ್ಮದ್ ಅರ್ಷದ್ ವಾರ್ಸಿಯನ್ನು ಮೊರಾದಾಬಾದ್‌ನಲ್ಲಿ ಬಂಧಿಸಲಾಯಿತು ಎಂದು ಮಾಹಿತಿ ನೀಡಿದರು.

ಬಂಧಿತ ಉಗ್ರನ ಅಡಗುತಾಣಗಳಿಂದ ಪಿಸ್ತೂಲ್, ಕಾರ್ಟ್ರಿಡ್ಜ್‌ಗಳು, ಪ್ಲಾಸ್ಟಿಕ್ ಟ್ಯೂಬ್‌ಗಳು, ಕಬ್ಬಿಣದ ಪೈಪ್‌ಗಳು ಸೇರಿದಂತೆ ಪಾಕಿಸ್ತಾನ ಮೂಲದ ಉಗ್ರರಿಂದ ಕಳುಹಿಸಲಾದ ಬಾಂಬ್ ತಯಾರಿಕೆ ಸಲಕರಣೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕರ್ನಾಟಕದ ಹುಬ್ಬಳ್ಳಿ, ಧಾರವಾಡ, ಗುಜರಾತ್‌ನ ಅಹಮದಾಬಾದ್ ಸೇರಿದಂತೆ ದಕ್ಷಿಣ ಭಾರತದ ಪಶ್ಚಿಮ ಘಟ್ಟಗಳಲ್ಲಿ ಅಡಗುತಾಣಗಳನ್ನು ಹೊಂದಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!