ಹೊಸದಿಗಂತ ಡಿಜಿಟಲ್ ಡೆಸ್ಕ್:
2014ರಿಂದ ತಮಿಳುನಾಡಿಗೆ ಕೇಂದ್ರದ ಅನುದಾನ 3 ಪಟ್ಟು ಹೆಚ್ಚಾಗಿ ಸಿಕ್ಕಿದೆ. ಆದರೂ ಕೆಲವರಿಗೆ ಯಾವಾಗಲೂ ಅಳುವ ಅಭ್ಯಾಸ ಇರುತ್ತದೆ ಎಂದು ಡಿಎಂಕೆ ಸರ್ಕಾರದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಕಿಡಿ ಕಾರಿದರು.
ತಮಿಳುನಾಡಿನ ರಾಮೇಶ್ವರಂನಲ್ಲಿ ʻಪಂಬನ್ʼ ದೇಶದ ಮೊದಲ ವರ್ಟಿಕಲ್ ರೈಲ್ವೆ ಬ್ರಿಡ್ಜ್ ಲೋಕಾರ್ಪಣೆಗೊಳಿಸಿದರು. ಬಳಿಕ ರಾಜ್ಯದ ಇತರೇ ಮೂಲಸೌಕರ್ಯ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ತಮಿಳುನಾಡಿನ ಮೂಲಸೌಕರ್ಯವು ಕೇಂದ್ರ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ. ಕಳೆದ ದಶಕಗಳಲ್ಲಿ ರಾಜ್ಯದ ರೈಲ್ವೆ ಬಜೆಟ್ 7 ಪಟ್ಟು ಹೆಚ್ಚಾಗಿದೆ. ಇಂತಹ ಗಮನಾರ್ಹ ಬೆಳವಣಿಗೆ ಆಗಿದ್ದರೂ ಕೆಲವರು ಸಮರ್ಥನೆಗಳಿಲ್ಲದೇ ದೂರುತ್ತಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ಟೀಕಿಸಿದರು.
2014ಕ್ಕಿಂತ ಮೊದಲು ತಮಿಳುನಾಡಿಗೆ ವಾರ್ಷಿಕ ಕೇವಲ 900 ಕೋಟಿ ರೂ.ಗಳ ಹಂಚಿಕೆಯಾಗಿತ್ತು, ಆದರೆ ಈ ವರ್ಷ ರಾಜ್ಯದ ರೈಲ್ವೆ ಬಜೆಟ್ 6,000 ಕೋಟಿ ರೂ.ಗಳನ್ನು ಮೀರಿದೆ. ಕೇಂದ್ರ ಸರ್ಕಾರವು ರಾಮೇಶ್ವರಂ ವರ್ಟಿಕಲ್ ರೈಲ್ವೆ ಬ್ರಿಡ್ಜ್ ಸೇರಿದಂತೆ ತಮಿಳುನಾಡಿನಾದ್ಯಂತ 77 ರೈಲು ನಿಲ್ದಾಣಗಳನ್ನು ಆಧುನೀಕರಿಸಲು ಆದ್ಯತೆ ನೀಡಿದೆ ಎಂದು ವಿವರಿಸಿದರು.